ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರದ ಜೆಡಿಎಸ್ ಪಕ್ಷದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಉದ್ಯಮಿ ವೀರಭದ್ರಪ್ಪಗೌಡ ಆಲ್ದಾಳ ಮೇಲೆ ದೈಹಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಹಲ್ಲೆಗೊಳಗಾಗಿರುವ ವೀರಭದ್ರಪ್ಪಗೌಡ ಆಲ್ದಾಳ ಪೊಲೀಸ್ ಪೇದೆ ವೀರಭದ್ರಯ್ಯ ಹಿರೇಮಠ ಅವರಿಗೆ ದೂರು ಸಲ್ಲಿಸಿದ್ದರೂ, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಭಾನುವಾರ ಮಧ್ಯಾಹ್ನ ಪೊಲೀಸ್ ಪೇದೆ ವೀರಭದ್ರಯ್ಯ ಹಿರೇಮಠ ಕರೆಯ ಮೇರೆಗೆ ವೀರಭದ್ರಪ್ಪಗೌಡ ಆಲ್ದಾಳ ಪೊಲೀಸ್ ಠಾಣೆಗೆ ಆಗಮಿಸಿದ್ದರು.
ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಭೇಟಿಯಾಗಿ ಠಾಣೆಯಿಂದ ಹೊರಬರುತ್ತಿದ್ದಾಗ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಏಕಾಏಕಿ ನನಗೆ ಕಾಲಿನಿಂದ ಒದ್ದು, ಮುಖಕ್ಕೆ ಹೊಡೆದಿದ್ದಾರೆ ಎಂದು ವೀರಭದ್ರಪ್ಪಗೌಡ ಆಲ್ದಾಳ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೊಳಗಾದ ವೀರಭದ್ರಪ್ಪಗೌಡ ಘಟನೆಯ ದೃಶ್ಯಾವಳಿ ಪೊಲೀಸ್ ಠಾಣೆಯ ಸಿಸಿ ಟಿವಿಯಲ್ಲಿ ದಾಖಲಾಗಿರಬಹುದು ಅದನ್ನು ನೀಡುವಂತೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಆದರೆ ತಮ್ಮ ಮೇಲೆ ನಡೆದಿರುವ ಹಲ್ಲೆ ಕುರಿತು ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ.ಗಾಯಗೊಂಡ ಆಲ್ದಾಳ್ ವೀರ ಭದ್ರಪ್ಪ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
