ವಿದ್ಯಾರ್ಥಿಗಳು ಭವಿಷ್ಯದ ಕನಸುಗಳನ್ನು ಹೊತ್ತು ವಸತಿ ನಿಲಯಗಳಿಗೆ ಬರುತ್ತಾರೆ. ಆದರೆ ಹಾಸ್ಟೆಲ್‌ಗಳಲ್ಲಿ ಮೂಲಸೌಕರ್ಯ ಕೊರತೆಯಾಗಿದ್ದು, ಅದೆಷ್ಟೋ ಮಕ್ಕಳು ತಮಗೆ ಬೇಕಾಗುವ ಸಾಮಗ್ರಿಗಳನ್ನು ಮನೆಯಿಂದಲೇ ತರುವಂತಹ ಪರಿಸ್ಥಿತಿ ಎದುರಾಗಿದೆ.
ಕೊಪ್ಪಳ ನಗರದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಡಾ. ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವೃತ್ತಿಪರ ವಸತಿ ನಿಲಯದ ವಿದ್ಯಾರ್ಥಿಗಳು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ವಿದ್ಯಾರ್ಥಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಸತಿ ನಿಲಯದಲ್ಲಿ ಒಟ್ಟು 200ಕ್ಕಿಂತ ಅಧಿಕ ಮಕ್ಕಳು ದಾಖಲಾಗಿದ್ದಾರೆ. ಆದರೆ ವಸತಿ ನಿಲಯದಲ್ಲಿ ಹಾಸಿಗೆ ಬೆಡ್ ವ್ಯವಸ್ಥೆಯಿಲ್ಲದೆ ಮಕ್ಕಳು ಮನೆಯಿಂದ ತಂದು ಮಲಗುವ ಸ್ಥಿತಿ ನಿರ್ಮಾಣವಾಗಿದೆ. ತರಲಾರದ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು ಬೆಡ್‌ಗಳಿಲ್ಲದೆ ನೆಲದ ಮೇಲೆಯೇ ಮಲಗುವ ಪರಿಸ್ಥಿತಿಯಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಸೋಲಾರ್ ವ್ಯವಸ್ಥೆಯಿದ್ದರೂ ನೀರಿನ ಸಂಪರ್ಕ ಕಲ್ಪಿಸದ ಕಾರಣ, ಚಳಿ ಮತ್ತು ಮಳೆಗಾಲದಲ್ಲೂ ತಣ್ಣೀರು ಸ್ನಾನ ಮಡುವಂತಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣವಾಗಿದೆ. ಆದರೆ ಈವರೆಗೂ ಮಕ್ಕಳಿಗೆ ಯಾವುದೇ ರೀತಿಯ ಬೆಡ್‌ಗಳಿಲ್ಲದೆ ಹೆಣಗಾಡುವಂತಾಗಿದೆ. ಈಗ ಚಳಿಗಾಲ ಆರಂಭವಾಗಿರುವುದರಿಂದ ಬರೀ ಚಾಪೆ ಮೇಲೆ ಮಲಗಲು ಸಾಧ್ಯವಾಗುತ್ತಿಲ್ಲ” ಎಂದು ಅವಲತ್ತುಕೊಂಡರು.
“ವಸತಿ ನಿಲಯದಲ್ಲಿ ಗ್ರಂಥಾಲಯವಿದೆ. ಆದರೆ ಅಲ್ಲಿ ಮಕ್ಕಳಿಗೆ ಓದುವುದಕ್ಕೆ ಪುಸ್ತಕಗಳಿಲ್ಲ. ಶುಚಿ ರುಚಿಯಾದ ಊಟ ನೀಡುವುದಿಲ್ಲ. ಬದಲಿಗೆ ಕಳಪೆ ಊಟ ನೀಡುತ್ತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವಂತೆ ಬೇಡಿಕೊಂಡರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
ಕಾನೂನು ಪದವಿ ವಿದ್ಯಾರ್ಥಿ ಉಮೇಶ್ ಮಾತನಾಡಿ, “ವಿದ್ಯಾರ್ಥಿಗಳು ಮನೆಯಿಂದಲೇ ಹಾಸಿಗೆ ಮತ್ತು ಹೊದಿಕೆಗಳನ್ನು ತೆಗೆದುಕೊಂಡು ಬಂದಿದ್ದಾರೆ. ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ಸಂಬಂಧಿಸಿದ ಗಣಕಯಂತ್ರಗಳಿಲ್ಲ. ವಿಶಾಲವಾದ ಗ್ರಂಥಾಲಯವಿದೆ. ಆದರೆ ಓದುವುದಕ್ಕೆ ಪುಸ್ತಕಗಳಿಲ್ಲ” ಎಂದರು.

“ವಸತಿ ನಿಲಯವು ಪ್ರಾರಂಭಗೊಂಡು ಕೆಲವೇ ವರ್ಷಗಳಾಗಿದ್ದು, ನಿಲಯದಲ್ಲಿ ಹಲವು ಸಿಬ್ಬಂದಿಗಳಿದ್ದಾರೆ. ಆದರೂ ಕೂಡಾ ನಿಲಯದ ಸ್ವಚ್ಛತೆ ಹದೆಗೆಟ್ಟಿದೆ. ಶೌಚಾಲಯಗಳು ಸ್ವಚ್ಛವಾಗಿಲ್ಲ. ವಸತಿ ನಿಲಯಕ್ಕೆ ಕಾಯಂ(ಪರ್ಮನೆಂಟ್) ವಾರ್ಡನ್ ಇಲ್ಲ. ಕಳಪೆ ದರ್ಜೆಯ ಅಡುಗೆ ಮಾಡುತ್ತಿದ್ದಾರೆ. ಇಲಾಖೆಯು ವಸತಿ ನಿಲಯಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡುತ್ತಿದೆಯಾದರೂ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯಗಳು ದೊರೆಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಶಿವಪ್ಪ ಬಾವಿಕಟ್ಟಿ ಮಾತನಾಡಿ, “ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಇಡೀ ಕೊಪ್ಪಳ ಜಿಲ್ಲೆಗೆ ಒಂದೇ ಒಂದು ವೃತ್ತಿಪರ ವಸತಿ ನಿಲಯವಾಗಿದೆ. ಇಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಿಂತ ಅಧಿಕವಾಗಿ ಇತರೆ ವರ್ಗ ಹಾಗೂ ಅನರ್ಹ ವ್ಯಕ್ತಿಗಳಿದ್ದಾರೆ. ಇದರಿಂದಾಗಿ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬಹುತೇಕ ವಿದ್ಯಾರ್ಥಿಗಳು ವಸತಿ ನಿಲಯದಿಂದ ವಂಚಿತರಾಗಿದ್ದಾರೆ. ವಾರ್ಡನ್ ಕೇಳಿದರೆ ಮುಂದಿನ ತಿಂಗಳು ಬರುತ್ತವೆ, ಇನ್ನು 15 ದಿನಗಳಲ್ಲಿ ಬರುತ್ತವೆಂದು ಹೇಳಿ ದಿನಗಳನ್ನು ಮುಂದೂಡುತ್ತಿದ್ದಾರೆ” ಎಂದರು.


ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್