ಅಪಘಾತಗಳಂತಹ ಸಮಯದಲ್ಲಿ ಜೀವ ಉಳಿಸುವ ಕಾರಣಕ್ಕಾಗಿಯೇ ಕಾರುಗಳಲ್ಲಿ ಏರ್ ಬ್ಯಾಗ್‌ಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ಏರ್ ಬ್ಯಾಗ್‌ನಿಂದಲೇ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂದೆ ಸಾಗುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಆ ಕಾರಿನ ಹಿಂಭಾಗ ತುಂಡಾಗಿ ಬಾಲಕನಿದ್ದ ಕಾರಿನ ಬಾನೆಟ್‌ಗೆ ಅಪ್ಪಳಿಸಿದೆ. ಕೂಡಲೇ ಕಾರಿನ ಏರ್ ಬ್ಯಾಗ್‌ಗಳು ತೆರೆದುಕೊಂಡಿವೆ. ಕಾರು ಚಲಾಯಿಸಿದ್ದ ವ್ಯಕ್ತಿ ಏರ್ ಬ್ಯಾಗ್‌ನಿಂದ ಬಚಾವಾಗಿದ್ದಾರೆ. ಆದರೆ, ಬಾಲಕ ಕುಳಿತಿದ್ದ ಬದಿಯ ಏರ್ ಬ್ಯಾಗ್ ತೆರೆದುಕೊಂಡ ಕೂಡಲೇ ಸ್ಪೋಟಗೊಂಡಿದೆ. ಪರಿಣಾಮ, ಬಾಲಕ ಮೃತಪಟ್ಟಿದ್ದಾನೆ.
ಏರ್ ಬ್ಯಾಗ್ ಸ್ಪೋಟಗೊಂಡಿದ್ದರಿಂದ ಬಾಲಕ ಪ್ರಜ್ಞಾಹೀನನಾಗಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಹೋಗುವ ಮುನ್ನವೇ ಬಾಲಕ ಮೃತಪಟ್ಟಿದ್ದನೆಂದು ವೈದ್ಯರು ತಿಳಿಸಿದ್ದಾರೆ. ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದಾರೆ.
ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರಿನ ಚಾಲಕನ ವಿರುದ್ಧ ಬಿಎನ್‌ಎಸ್ ಮತ್ತು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ. ಆರೋಪಿ ಚಾಲಕ ವೃತ್ತಿಯಲ್ಲಿ ವೈದ್ಯನೆಂದು ತಿಳಿದುಬಂದಿದೆ.