ಈ ದಿನ ಸಂಪಾದಕೀಯ | ಹವಾಮಾನ ವೈಪರೀತ್ಯ, ಸಾಮೂಹಿಕ ವಲಸೆ ಮತ್ತು ಅಭಿವೃದ್ಧಿ ಮಂತ್ರ

Date:

Advertisements
ಬ್ರ್ಯಾಂಡ್ ಬೆಂಗಳೂರು, ಸ್ಕೈ ಡೆಕ್, ಸುರಂಗ ರಸ್ತೆ, ಮೆಟ್ರೋ, ಎರಡನೇ ವಿಮಾನ ನಿಲ್ದಾಣ ನಿರ್ಮಾಣದತ್ತ ಸರ್ಕಾರ ಗಮನ ಹರಿಸಿದೆ. ಆದರೆ, ಬೆಂಗಳೂರನ್ನು ಬಡವರು ಕೂಡ ಬದುಕಲು ಯೋಗ್ಯವಾದ ನಗರವನ್ನಾಗಿ ಮಾಡಲು; ಅವರಿಗೆ ಅಗತ್ಯವಾಗಿ ಬೇಕಾದ ವಸತಿ, ಶಿಕ್ಷಣ, ಆರೋಗ್ಯದಂತಹ ಮೂಲಸೌಕರ್ಯಗಳನ್ನು ಒದಗಿಸಲು ನಿಸ್ಸೀಮ ನಿರ್ಲಕ್ಷತನ ತೋರಿದೆ.

‘ಹವಾಮಾನ ಬದಲಾವಣೆಯನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾದರೆ ಬೆಂಗಳೂರು ನಗರಕ್ಕೆ ಸಾಮೂಹಿಕ ವಲಸೆ ಸಮಸ್ಯೆ ಎದುರಾಗಬಹುದು’ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ನಾರಾಯಣ ಮೂರ್ತಿ ಎಚ್ಚರಿಸಿದ್ದಾರೆ. ಅವರ ಈ ಎಚ್ಚರಿಕೆಯನ್ನು ಎರಡು ರೀತಿಯಲ್ಲಿ ನೋಡಬಹುದು. ಒಂದು, ಬೆಳೆಯುತ್ತಿರುವ ಬೆಂಗಳೂರು ಮತ್ತು ಹವಾಮಾನ ಬದಲಾವಣೆ ಬಗ್ಗೆ ಆಳುವ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ.

ವಿಶ್ವ ಹವಾಮಾನ ಸಂಸ್ಥೆ(WMO), 2024ರಲ್ಲಿ ವಿಶ್ವದ ನಾನಾ ಭಾಗಗಳಲ್ಲಿ- ಆಫ್ರಿಕಾದಲ್ಲಿ ಶಾಖದ ಅಲೆಗಳು, ದಕ್ಷಿಣ ಬ್ರೆಜಿಲ್‌ನಲ್ಲಿ ಪ್ರವಾಹಗಳು, ಅಮೆಜಾನ್‌ನಲ್ಲಿ ಬರ, ಏಷ್ಯಾ ಖಂಡದಲ್ಲಿ ಶಾಖ ಹೆಚ್ಚಾಗಲಿದ್ದು, ಆರೋಗ್ಯ ಮತ್ತು ಜೀವನೋಪಾಯದ ಮೇಲೆ ತೀವ್ರ ಹಾನಿಯನ್ನುಂಟುಮಾಡುತ್ತವೆ ಎಂಬ ಮಾಹಿತಿಯನ್ನು ಹೊರಹಾಕಿತ್ತು. ಸಂಸ್ಥೆ ನೀಡಿದ ಮಾಹಿತಿಗಿಂತ ಹೆಚ್ಚಿನ ಅನಾಹುತ, ಸಮಸ್ಯೆಯನ್ನು 2024ರಲ್ಲಿ ವಿಶ್ವ ಕಂಡುಂಡಿದೆ.

ಸ್ವಿಟ್ಜರ್‌ಲೆಂಡ್‌ನಲ್ಲಿ 64 ವರ್ಷ ಮೇಲ್ಪಟ್ಟ 2,500 ಪರಿಸರ ಹೋರಾಟಗಾರ್ತಿಯರು, ಬಿಸಿಗಾಳಿಯಿಂದ ಬದುಕಲು ಕಷ್ಟವಾಗುತ್ತಿದೆ ಎಂದು ನಿಯಂತ್ರಿಸಲಾಗದ ಸರ್ಕಾರದ ವಿರುದ್ಧ 2016ರಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಇವರ ವಾದವನ್ನು ಸ್ವಿಟ್ಜರ್‌ಲೆಂಡ್‌ನ ಯಾವ ನ್ಯಾಯಾಲಯವೂ ಆಲಿಸಲಿಲ್ಲ. ಅಷ್ಟೇ ಅಲ್ಲ, ವಜಾ ಮಾಡಿಬಿಟ್ಟವು. ಇಲ್ಲಿಂದ ಈ ಹೋರಾಟಕ್ಕೊಂದು ತಿರುವು ದೊರಕಿತು.

Advertisements

ಇಲ್ಲೆಲ್ಲ ಸೋಲುಂಡ ಬಳಿಕ ಅವರು ‘ಯುರೋಪಿಯನ್‌ ಕೋರ್ಟ್‌ ಆಫ್‌ ಹ್ಯೂಮನ್‌ ರೈಟ್ಸ್‌’ ಮೆಟ್ಟಿಲು ಹತ್ತಿದರು. ಆ ಕೋರ್ಟ್, ‘ಹವಾಮಾನ ವೈಪರೀತ್ಯವು ಪರಿಸರಕ್ಕೆ ಸಂಬಂಧಿಸಿದ್ದು, ಒಂದು ವೇಳೆ ಹವಾಮಾನ ವೈಪರೀತ್ಯವನ್ನು ನಿಯಂತ್ರಿಸಲು ಸರ್ಕಾರವೊಂದು ವಿಫಲವಾದರೆ, ಅಂಥ ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡಬಹುದು’ ಎಂಬುದಾಗಿ ತೀರ್ಪು ನೀಡಿತು. ಇದರ ಜೊತೆಯಲ್ಲಿ, ಹವಾಮಾನ ವೈಪರೀತ್ಯವನ್ನು ಸರ್ಕಾರವೊಂದು ನಿಯಂತ್ರಿಸಲಿಲ್ಲ ಎಂದಾದರೆ, ಅದು ನಾಗರಿಕರ ಬದುಕುವ ಹಕ್ಕನ್ನು ಕಸಿದುಕೊಂಡಂತೆ ಎಂಬುದನ್ನು ಒತ್ತಿ ಹೇಳಿತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಆಹಾರ ಹಕ್ಕಿಗೆ ಮಂಡ್ಯ ನಾಂದಿ; ಮುಂದಿದೆ ಸರ್ಕಾರಿ ಸವಾಲು

ದೇಶದ ವಿದ್ಯಮಾನವನ್ನು ಗಮನಿಸುವುದಾದರೆ, ದಿನದಿಂದ ದಿನಕ್ಕೆ ಹವಾಮಾನ ವೈಪರೀತ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಲಿದೆ. ವಿಪರೀತ ಚಳಿ, ಸಹಿಸಲಸಾಧ್ಯ ಸೆಖೆ, ಬಿರು ಮಳೆಯಿಂದಾಗಿ ಜನರ ಒಟ್ಟಾರೆ ಬದುಕು ಬಸವಳಿದಿದೆ. ಅದರಲ್ಲೂ ದೇಶದ ರಾಜಧಾನಿ ದೆಹಲಿಯ ಹವಾಮಾನದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ದೆಹಲಿ ಇನ್ನಿಲ್ಲದಷ್ಟು ವಾಯುಮಾಲಿನ್ಯದಿಂದ ಕಲುಷಿತಗೊಂಡಿದೆ. ಚಳಿಗಾಲ ಬಂತೆಂದರೆ ಗ್ಯಾಸ್ ಚೇಂಬರ್‍‌ನಂತಾಗುತ್ತದೆ. ಶೇ. 60ಕ್ಕೂ ಹೆಚ್ಚು ಜನರು ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಗೆ ಸಿಲುಕುತ್ತಾರೆ. ಹಾಗಾಗಿ ಸುರಕ್ಷಿತ ಪ್ರದೇಶಗಳತ್ತ ಜನ ವಲಸೆ ಹೋಗುವುದು ಸಾಮಾನ್ಯವಾಗುತ್ತದೆ.

ಅಂತಹ ಸುರಕ್ಷಿತ ನಗರವಾಗಿ ದೇಶ ವಿದೇಶದ ಜನರಿಗೆ ಸದ್ಯಕ್ಕೆ ಕಾಣುತ್ತಿರುವುದು ದಕ್ಷಿಣ ಭಾರತ. ಅದರಲ್ಲೂ ಬೆಂಗಳೂರು ನಗರ. ಏಕೆಂದರೆ, ತಂಪಾದ ಹವಾಮಾನ, ಐಟಿ-ಬಿಟಿ, ರಿಯಲ್ ಎಸ್ಟೇಟ್ ವಲಯಗಳ ದಾಪುಗಾಲು, ಕ್ರೈಮ್ ರೇಟ್ ಕಡಿಮೆ, ಭಾಷೆ ಬಗ್ಗೆ ವಿಶಾಲಹೃದಯಿಗಳಾದ ಕನ್ನಡಿಗರು ಮತ್ತು ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರು ಬೆಸ್ಟ್ ಎನ್ನುವ ವರದಿ ಇದೆ. ಸಿಲಿಕಾನ್ ಸಿಟಿಯಿಂದಾಗಿ ದೇಶ-ವಿದೇಶಗಳ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಕೇಂದ್ರವಾಗಿದೆ. ಸ್ಟಾರ್ಟ್‌ ಅಪ್‌ಗಳ ತವರೂರಾಗಿದೆ. ಇದರಿಂದ ಜನಸಂಖ್ಯೆ ಬೆಂಗಳೂರನ್ನೂ ಮೀರಿ ಬೆಳೆಯುತ್ತಿದೆ. ಭಯ ಹುಟ್ಟಿಸುತ್ತಿದೆ.

ಆ ನಿಟ್ಟಿನಲ್ಲಿ ಬ್ರ್ಯಾಂಡ್ ಬೆಂಗಳೂರು, ಸ್ಕೈ ಡೆಕ್, ಸುರಂಗ ರಸ್ತೆ, ಮೆಟ್ರೋ, ಎರಡನೇ ವಿಮಾನ ನಿಲ್ದಾಣ ನಿರ್ಮಾಣದತ್ತ ಸರ್ಕಾರ ಗಮನ ಹರಿಸಿದೆ. ಆದರೆ, ಬೆಂಗಳೂರನ್ನು ಬಡವರು ಕೂಡ ಬದುಕಲು ಯೋಗ್ಯವಾದ ನಗರವನ್ನಾಗಿ ಮಾಡಲು; ಅವರಿಗೆ ಅಗತ್ಯವಾಗಿ ಬೇಕಾದ ವಸತಿ, ಶಿಕ್ಷಣ, ಆರೋಗ್ಯದಂತಹ ಮೂಲಸೌಕರ್ಯಗಳನ್ನು ಒದಗಿಸಲು ನಿಸ್ಸೀಮ ನಿರ್ಲಕ್ಷತನ ತೋರಿದೆ. ಸರ್ಕಾರಗಳು ಬದಲಾದರೂ, ಒಂದೇ ಒಂದು ಮಳೆಗೆ ನಗರ ಜಲಾವೃತವಾಗುತ್ತದೆ. ಟ್ರಾಫಿಕ್ ಸಮಸ್ಯೆಯಂತೂ ಮಿತಿ ಮೀರಿ, ನರಕವನ್ನಾಗಿಸಿದೆ. ರಾಜಕಾಲುವೆಗಳಲ್ಲಿ ನೀರಿಗಿಂತ ಹೆಚ್ಚಾಗಿ ಕೋಟಿಗಟ್ಟಲೆ ಹಣ ಅನುದಾನದ ರೂಪದಲ್ಲಿ ಹರಿದು ಹೋಗಿದೆ.    

ಪರಿಸ್ಥಿತಿ ಹೀಗಿರುವಾಗ, ‘ಮುಂದಿನ ದಿನಗಳಲ್ಲಿ ವಲಸೆ ಬರುವವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ, ರಾಜ್ಯ ಸರ್ಕಾರ ತಪ್ಪಿಸುವ ಅವಶ್ಯಕತೆ ಇದೆ’ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ವಲಸೆ ತಪ್ಪಿಸುವುದು ಸಾಧ್ಯವೂ ಇಲ್ಲ, ಸರಿಯೂ ಅಲ್ಲ. ವಲಸೆ ಅನಿವಾರ್ಯ. ಅಷ್ಟಕ್ಕೂ 1981ರಲ್ಲಿ ಬೆಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆ ಸ್ಥಾಪಿಸಿದ ನಾರಾಯಣಮೂರ್ತಿಗಳು, ಇಂದು ಪ್ರಪಂಚದ ನಾನಾ ದೇಶಗಳಿಗೆ ವಲಸೆ ಹೋಗಿದ್ದಾರೆ. ಅಲ್ಲೆಲ್ಲ ಅವರ ಸಂಸ್ಥೆ ಸ್ಥಾಪಿಸಿದ್ದಾರೆ. ಅದು ಆರ್ಥಿಕಾಭಿವೃದ್ಧಿಯೊಂದಿಗೆ ಬೆಸೆದುಕೊಂಡಿದೆ. ವಲಸೆಗೆ ಒತ್ತಾಸೆಯಾಗಿ ಸರ್ಕಾರಗಳು ಪೂರಕ ಯೋಜನೆಗಳನ್ನು ರೂಪಿಸಬೇಕೆ ಹೊರತು, ವಲಸೆ ತಡೆಯುವುದು ಸಾಧ್ಯವಿಲ್ಲದ ಮಾತಾಗುತ್ತದೆ. ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಅವರಿರುವ ಪ್ರದೇಶಗಳಲ್ಲಿಯೇ ಉದ್ಯೋಗ ಸೃಷ್ಟಿಸಬೇಕಾಗುತ್ತದೆ. ಮಿನಿ ನಗರಗಳನ್ನು, ಪಟ್ಟಣಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ಅಂಬೇಡ್ಕರ್‌’- ಅಮಿತ್‌ ಶಾ ಆಡಿದ ಮಾತಲ್ಲ, ಹೊಟ್ಟೆಯೊಳಗಿನ ಹೊಲಸು

ಅಭಿವೃದ್ಧಿ ಎಂದಾಕ್ಷಣ ಅಧಿಕಾರಸ್ಥ ರಾಜಕಾರಣಿಗಳಿಗೆ ಕಾಣುವುದು ಕಾಮಗಾರಿ. ಮರಗಳನ್ನು ಕಡಿದು, ಕೆರೆಗಳನ್ನು ಒತ್ತುವರಿ ಮಾಡಿ ಕಾಂಕ್ರೀಟ್ ಕಾಡು ನಿರ್ಮಿಸುವುದು. ಸಬ್ಸಿಡಿ ದರದಲ್ಲಿ ನೆಲ, ಜಲ, ವಿದ್ಯುತ್ ನೀಡಿ ಬಂಡವಾಳಿಗರನ್ನು ಆಹ್ವಾನಿಸುವುದು. ಕಾಡನ್ನು ಕಡಿಯುವ, ಭೂಮಿಯ ಒಡಲನ್ನು ಬಗೆಯುವ ಗಣಿಗಾರಿಕೆಗೆ ಒತ್ತು ನೀಡುವುದು. ಆನಂತರ, ಸರ್ಕಾರಗಳು ಅದನ್ನೇ ಅಭಿವೃದ್ಧಿಯ ಮಾಪನವೆಂಬಂತೆ ಮಾತನಾಡುವುದು; ನಾರಾಯಣ ಮೂರ್ತಿಯಂಥವರು ಅದರ ಫಲಾನುಭವಿಗಳಾಗುವುದು; ಪುಡಿಗಾಸು ಪಡೆವ ಬಡವರ ಪಾಲಿಗೆ ನಗರದ ಬದುಕನ್ನು ನರಕವನ್ನಾಗಿಸುವುದು.

ವಲಸೆ, ಹವಾಮಾನ ಮತ್ತು ಅಭಿವೃದ್ಧಿ ಒಂದರೊಳಗೊಂದು ಬೆಸೆದುಕೊಂಡ ವಿದ್ಯಮಾನಗಳು. ಅಸಂಗತ ನಾಟಕದಂತೆ ನಡೆಯುತ್ತಲೇ ಇದೆ. ನೋಡುತ್ತಲೇ ಇದ್ದೇವೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. Really I am grateful to Edina.com for realistic information and specially Editorials todays editorial is related to me I am facing Residential, Shelter problem, for only persue higher education I 5 to 6 areas due to shelter problem unable to pay house rent even I stayed with relatives like Chikkamma,chikkappa,Mama and now only I am staying with my Brother because of he worked there so haves literally manipulate have notes specially north Karnataka people are facing that problem including me I am really grateful to your reports which is realistic and notice to the government

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X