ಹರಪನಹಳ್ಳಿಯಲ್ಲಿ ಜಾತಿಭೇದ ತೊಲಗಬೇಕು, ಅಸ್ಪೃಶ್ಯತೆ ನಿವಾರಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ಹೇಳಿದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹುಲಿಕಟ್ಟಿ ಗ್ರಾಮದ ಬಳಿಯಿರುವ ಗುಳೇದಲಕ್ಕಮ್ಮ ದೇವಸ್ಥಾನದ ಅವರಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ನಿಯಂತ್ರಣ ತಡೆ ಕಾಯಿದೆಯ ಜಾಗೃತಿ ಮೂಡಿಸುವ ಸಮಾರಂಭದಲ್ಲಿ ಮಾತನಾಡಿದರು.
“ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯದವರಿಗೆ ಇರುವ ರಕ್ಷಣೆ ಮತ್ತು ಸರ್ಕಾರದ ಸೌಲಭ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಕ್ರಮಗಳ ಮೂಲಕ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸುತ್ತಿರುವಾಗ ಅನುಸರಿಸಿದ ಮೂಲ ನೀತಿಯೆಂದರೆ ಅಸ್ಪೃಶ್ಯರು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಮುನ್ನಲೆಗೆ ಬರಲು ಸಾಧ್ಯವಾಗುವಷ್ಟು ಪ್ರಗತಿ ಹೊಂದಬೇಕು. ಆಗ ಮಾತ್ರ ಅಸ್ಪೃಶ್ಯತೆ ನಿವಾರಣೆಯಾಗಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಜಾತಿ ಪದ್ಧತಿ, ಅಸ್ಪೃಶ್ಯತೆ ಜೀವಂತವಾಗಿರುವ ತನಕ ದೇಶದ ಸರ್ವತೋಮುಖ ಬೆಳವಣಿಗೆ ಅಸಾಧ್ಯ. ನಮ್ಮ ಮೈಯಲ್ಲಿ ಹರಿಯುವ ರಕ್ತ, ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಜೀವಿಸುವ ನೆಲ ಎಲ್ಲವೂ ಒಂದೇ ಆಗಿದ್ದಾಗ ಮನುಷ್ಯರನ್ನು ಮಾತ್ರ ಜಾತಿಯ ಹೆಸರಿನಲ್ಲಿ ಪ್ರತ್ಯೇಕಿಸುವುದು ಸರಿಯಲ್ಲ. ಇಂದು ದೇಶದ ಬೆಳವಣಿಗೆಯಲ್ಲಿ ಹೆಚ್ಚಾಗಿ ಶ್ರೆಮ ಹಾಕುತ್ತಿರುವ ಕಾರ್ಮಿಕ ವರ್ಗದವರು ಇಂದು ಅಸ್ಪೃಶ್ಯತೆಯೆಂಬ ಹಣೆಪಟ್ಟಿ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಾರೆ” ಎಂದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಗಂಗಪ್ಪ ಎಸ್ ಆರ್ ಮಾತನಾಡಿ, “ಅಸ್ಪೃಶ್ಯತೆ ನಿವಾರಣೆ ಸೇರಿದಂತೆ ಅಂಬೇಡ್ಕರ್ ಅವರ ವಿಚಾರಧಾರೆಗಳು, ಯೋಚನೆ, ಯೋಜನೆಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಬಹುದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಅಸ್ಪೃಶ್ಯತೆ ನಿವಾರಣೆಗಾಗಿ ಹಲವು ಯೋಜನೆಗಳನ್ನು ತರಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಸ್ ನಿಲ್ದಾಣದಲ್ಲಿ ನೀರು ಸಂಗ್ರಹ; ಗಬ್ಬೆದ್ದ ನೀರಿನಿಂದ ಹೆಚ್ಚಿದ ಸೊಳ್ಳೆ ಕಾಟ
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ ವಿ ಗಿರೀಶ್ ಬಾಬು, ತಾ ಪಂ ಕಾರ್ಯನಿರ್ವಾಹಕ ಚಂದ್ರಶೇಖರ ವೈ ಹೆಚ್ ಪ್ರಕಾಶಗೌಡ, ಹೆಚ್ ಪಾಟೀಲ್, ಕುಬೇಂದ್ರನಾಯ್ಕ್, ಕಿರಣ್ ನಾಯ್ಕ್, ಪಿಎಸ್‌ಐ ರುದ್ರಪ್ಪ, ಉಮೇಶ್, ಬಿಇಒ ಲೇಪಾಕ್ಷಪ್ಪ, ಸಮಾಜ ಕಲ್ಯಾಣಾಧಿಕಾರಿ ಗಂಗಪ್ಪ ಎಸ್ ಆರ್, ಶಿವಕುಮಾರ್, ಬಿಸಿಎಂ ಅಧಿಕಾರಿ ಬೀಮಪ್ಪ, ಇಬ್ರಾಹಿಂ, ಹುಲಿಕಟ್ಟಿ ಚಂದ್ರಪ್ಪ, ಎಲ್ ಲಕ್ಷ್ಮಣನಾಯ್ಕ್, ಹಾಲೇಶ್ ನಾಯ್ಕ್, ಆಗ್ರಹಾರ ಅಶೋಕ, ಯಾಸ್ಮೀನ್ ಬಾನು, ರವಿಗೌಡ ಸೇರಿದಂತೆ ಬಹುತೇಕರು ಇದ್ದರು.