ಜಿಲ್ಲೆಯಲ್ಲಿ 400 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದ್ದು, ಮಳೆಯಾಶ್ರಿತ ಬೆಳೆಗಳಾದ ಸಿರಿಧಾನ್ಯ ಬೆಳೆ ನಮ್ಮ ಜಿಲೆಯ ಪರಿಸರಕ್ಕೆ ಒಗ್ಗುವುದರಿಂದ ಆರ್ಥಿಕವಾಗಿ ಲಾಭದಾಯಕವಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿರಿಧಾನ್ಯ ಬೆಳೆಗಳಿಂದ ರೈತರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಕೃಷಿ ಇಲಾಖೆಯಿಂದ ಸಿರಿಧಾನ್ಯ ಬೆಳೆ ಬೆಳೆಯಲು ಹೆಚ್ಚು ಒತ್ತು ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಉತ್ತಮ ಸಮತೋಲಿತ ಆರೋಗ್ಯಕ್ಕಾಗಿ ಸಿರಿಧಾನ್ಯಗಳನ್ನು ಬಳಕೆ ಮಾಡಿದರೆ ಆರೋಗ್ಯ ಭಾಗ್ಯ ದೊರೆಯಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಿರಿಧಾನ್ಯಗಳ ಬಗ್ಗೆ ಅಂತರರಾಷ್ಟಿಯ ಸಮ್ಮೇಳನ ನಡೆಯುತ್ತಿದ್ದು, ಅದರ ಪೂರ್ವಭಾವಿಯಾಗಿ ರಾಜ್ಯದ ಉದ್ದಗಲಕ್ಕೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇದಿಂದ ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಮಹಿಳೆಯರು ಮತ್ತು ಪುರುಷರಿಗೆ ಮಿಲೆಟ್ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಪಾಕ ಸ್ಪರ್ಧೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಚಕ್ಕಲಿ, ನಿಪ್ಪಟ್ಟು, ಪಾಯಸ, ಉಂಡೆ ಹಾಗೂ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಿ ಹೆಚ್ಚಿನ ಮಟ್ಟದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಹವಾಮಾನ ವೈಪರೀತ್ಯ, ಸಾಮೂಹಿಕ ವಲಸೆ ಮತ್ತು ಅಭಿವೃದ್ಧಿ ಮಂತ್ರ
ಮನುಷ್ಯನಿಗೆ ಸಂಪತ್ತಿಗಿಂತ ಆರೋಗ್ಯ ಬಹಳ ಮುಖ್ಯ. ಆದರೆ ಆರೋಗ್ಯ ಕಳೆದುಕೊಂಡರೆ ಜೀವನವೇ ವ್ಯರ್ಥವಾಗುತ್ತದೆ. ಅದನ್ನು ಅರಿತವರೇ ಭಾಗ್ಯವಂತರು. ಪ್ರತಿ ದಿನ ಯಾರು ಸಿರಿಧಾನ್ಯಗಳನ್ನು ಸೇವಿಸುತ್ತಾರೊ ಅವರ ದೇಹ ಮತ್ತು ಮನಸ್ಸು ಸಧೃಡವಾಗಿರುತ್ತದೆ. ಸಿರಿಧಾನ್ಯಗಳನ್ನು ಸೇವನೆ ಮಾಡುವುದರಿಂದ ನಿಧಾನವಾಗಿ ಜೀರ್ಣಕ್ರಿಯೆ ನಡೆಯುತ್ತದೆ. ಮನುಷ್ಯನ ಸುಸ್ಥಿರ ಆರೋಗ್ಯ ಕಾಪಾಡಲು ರಾಗಿ, ನವಣೆ, ಹಾರಕ, ಸಾಮೆ, ನೆಲ್ಲಕ್ಕಿ, ಬರುಗು, ಕೊರಲೆ, ಊದಲು, ಸಜ್ಜೆ ಮತ್ತು ಜೋಳ ಹೀಗೆ ಹಲವಾರು ಬಗೆಯ ಸಿರಿಧಾನ್ಯಗಳಲ್ಲಿನ ಪೌಷ್ಠಿಕಾಂಶಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಾವೀದಾ ನಾಸಿಮ್ ಖಾನಂ ಮಾತನಾಡಿ, ಪ್ರತಿಯೊಬ್ಬರು ದಿನನಿತ್ಯ ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇವಿಸಿದರೇ ಉತ್ತಮ ಆರೋಗ್ಯವನ್ನು ಹೊಂದಬಹುದು. ಪ್ರತಿ ವರ್ಷದಂತೆ ಈ ಭಾರಿಯು ಸಿರಿದಾನ್ಯ ನಡಿಗೆ ಆರೋಗ್ಯದ ಕಡೆ ಎಂಬ ಕಾರ್ಯಕ್ರಮವನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಕೃಷಿ ಇಲಾಖೆಯಿಂದ ಸಾರ್ವಜನಿಕರಿಗೆ ಹಲವಾರು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ವರ್ಷದ ಮೊದಲನೇದಾಗಿ ಮಿಲೆಟ್ ವಾರ ಸ್ಪರ್ಧೆ ನಡೆಸಿ ಆ ಸ್ಪರ್ಧೆ ವಿಜೇತರಾದವರನ್ನು ಅಂತರಾಷ್ಟ್ರೀಯ ಮಿಲೆಟ್ ವಾರ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯಗಳ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಿರಿಧಾನ್ಯಗಳಿಗೆ ಹಿಂದಿನಿಂದ ನಮ್ಮ ಪೂರ್ವಿಕರು ಹೆಚ್ಚು ಒತ್ತು ನೀಡುತ್ತಿದ್ದರು. ಈ ಧಾನ್ಯಗಳ ಬಳಕೆಯಿಂದ ಮಧುಮೇಹ, ಹೃದಯರೋಗ, ಕರುಳು ಬೇನೆ ಹಾಗೂ ಕ್ಯಾನ್ಸರ್ ನಂತಹ ಇತ್ಯಾದಿ ಕಾಯಿಲೆಗಳನ್ನು ತಡೆಯಬಹುದಾಗಿದೆ. ಸಿರಿಧಾನ್ಯಗಳಿಂದ ರೋಗನಿರೋಧಕ ಶಕ್ತಿಯನ್ನು ಆರೋಗ್ಯಕ್ಕೆ ಸಿರಿ ಧಾನ್ಯಗಳ ಆರೋಗ್ಯ ಬಹಳ ಒಳ್ಳೆಯದು. ಅಂತರಾಷ್ಟ್ರೀಯ ಸಿರಿಧಾನ್ಯವನ್ನು ಜಾಗೃತಿ ಕಾರ್ಯಕ್ರಮವನ್ನು ಜನವರಿ 23 ರಿಂದ 25ರವರಗೆ ಸಿರಿಧಾನ್ಯ ಮೇಳಕ್ಕೆ ಜಿಲ್ಲೆಯ ಎಲ್ಲಾ ಜನತೆಯು ಆಗಮಿಸಬೇಕು ಎಂದು ಮನವಿ ಮಾಡಿದರು.
2023ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಿರುವುದರಿಂದ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ಗ್ರಾಹಕರಿಗೆ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಮಟ್ಟದ “ಸಿರಿಧಾನ್ಯ ವಾಕಾಥಾನ್” ನಡೆಸಲಾಯಿತು.
ಸರ್.ಎಂ.ವಿ ಕ್ರೀಡಾಂಗಣದಿಂದ ಆರಂಭವಾದ ಜಾಗೃತಿ ಜಾಥಾವು, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ- ಶಿಡ್ಲಘಟ್ಟ ವೃತ್ತ ಹಾಗೂ ನಗರದ ಮುಖ್ಯ ರಸ್ತೆಯ ಮೂಲಕ ಬಿ.ಬಿ ರಸ್ತೆಯ ಮೂಲಕ ಹಾದುಹೋಗಿ ಸರ್ ಎಂ ವಿ ಕ್ರೀಡಾಂಗಣವರೆಗೂ 5 ಕಿ.ಮೀಗೂ ಹೆಚ್ಚು ನಡೆಯುವ ಮೂಲಕ ಜಾಗೃತಿ ಮೂಡಿಸಿದರು. ಜಾಥಾ ಉದ್ದಕ್ಕೂ ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಿರಿಧಾನ್ಯಗಳ ಬಿತ್ತಿ ಪತ್ರಗಳು, ಫಲಕಗಳನ್ನು ಪ್ರದರ್ಶಿಸಿ ಸಿರಿಧಾನ್ಯಗಳ ಜಾಗೃತಿ ಗೀತೆಗಳನ್ನು ಹಾಡಲಾಯಿತು.
ಪ್ರಗತಿ ಪರ ಸಿರಿಧಾನ್ಯ ಬೆಳೆಗಾರರು, ಸಂಸ್ಕರಣಾ ಘಟಕಗಳ ಉತ್ಪಾದಕರು, ಮಾರುಕಟ್ಟೆದಾರರು, ಸರ್ಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವಾಕಥಾನ್ ನಲ್ಲಿ ಭಾಗವಹಿಸಿದ್ದರು.
ಚಿಂತಾಮಣಿ ತಾಲೂಕಿನ ಕೃಷಿ ವಿಶ್ವವಿದ್ಯಾಲಯದ(ಜಿ.ಕೆ.ವಿ.ಕೆ) ಮತ್ತು ಕುರುಬೂರು ಕೃಷಿ ವಿಶ್ವವಿದ್ಯಾಲಯದ ಶಿಬಿರಾರ್ಥಿಗಳು, ಪತಂಜಲಿ ಯೋಗ ಸಮಿತಿಯ ಸದಸ್ಯರುಗಳು, ಶ್ರೀ ಸತ್ಯಸಾಯಿ ಟ್ರಸ್ಟ್ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಥಾದಲ್ಲಿ ಹೆಜ್ಜೆ ಹಾಕಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಜಮೀನು ವಿಚಾರಕ್ಕೆ ದಲಿತ ಸಮುದಾಯದವರಿಗೆ ಹಲ್ಲೆ; ತಂಗಿಡಪ್ಪ ಕುಟುಂಬದ ವಿರುದ್ಧ ಕ್ರಮಕ್ಕೆ ಆಗ್ರಹ
ಗಮನ ಸೆಳೆದ ಘೋಷಣೆಗಳು :
ರಾಗಿ ತಿಂದವರು ನಿರೋಗಿಯಾಗುವರು “ಊದಲು ತಿಂದವರಿಗೆ ಉಬ್ಬಸ ಇಲ್ಲ”, “ಬರಗಾಲದ ಮಿತ್ರರು ಸಿರಿಧಾನ್ಯಗಳು “, “ಜೋಳ ತಿಂದವರು ತೋಳದ ಹಾಗೆ “, “ನವಣೆ ತಿಂದವರು ಬುದ್ಧಿವಂತರಾಗುವರು”, “ಸಿರಿಧಾನ್ಯ ಪ್ರತಿ ಧಾನ್ಯದಲ್ಲೂ ಉತ್ಕೃಷ್ಣತೆ “, “ಬರಗು ಇದ್ರೆ ಬರಗಾಲದಲ್ಲೂ ಬದುಕು “, “ಮಣ್ಣಿನ ಪೋಷಣೆ ಆರೋಗ್ಯದ ರಕ್ಷಣೆ “, “ಹಾರಕ ತಿಂದವರು ಹಾಯಾಗಿ ಇದ್ದರು. “ರಾಗಿ ತಿಂದವರು ಹಾರಾಡ್ತಾ ಹೋದ್ರು”, “ಜೋಳ ತಿಂದವರು ಬಲಿಷ್ಠರಾಗಿ ನಿರೋಗಿಯಾಗುವರು” ಎಂಬ ಘೋಷಣೆಗಳು ರಾರಾಜಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದವು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ಗಜೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್ ಮಹೇಶ್ ಕುಮಾರ್, ತೋಟಗಾರಿಕೆ ಇಲಾಖೆ ಅಧಿಕಾರಿ ಗಾಯಿತ್ರಿ, ನಗರಸಭೆಯ ಪೌರಯುಕ್ತ ಮನ್ಸೂರ್ ಆಲಿ, ಹಿರಿಯ ಕೃಷಿ ವಿಜ್ಞಾನಿ ಪಾಪ ರೆಡ್ಡಿ, ತಹಶೀಲ್ದಾರ್ ಅನಿಲ್, ವಿವಿಧ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ರೈತರ ಸಂಘದ ಮುಖಂಡರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು, ಶ್ರೀ ಸತ್ಯಸಾಯಿ ಟ್ರಸ್ಟ್ ಸಂಸ್ಥೆಯ ಗೋವಿಂದ ರೆಡ್ಡಿ ಹಾಗೂ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.