ಸಾಮಾಜಿಕ ಬದ್ಧತೆ ಮತ್ತು ಜೀವನದ ಬದ್ಧತೆ ಎನ್ನುವುದು ವಿರುದ್ಧಾರ್ಥಕ ಶಬ್ಧಗಳಲ್ಲ ಎಂದು ಖ್ಯಾತ ಸಾಹಿತಿ ಹಾಗೂ ಮಹಿಳಾಪರ ಚಿಂತಕಿ ಡಾ.ವಿನಯಾ ವಕ್ಕುಂದ ಧಾರವಾಡದ ಸಮುದಾಯ ಹಾಗೂ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿದ್ಯಾವರ್ಧಕ ಸಂಘ, ರಾ.ಹ. ದೇಶಪಾಂಡೆ ಭವನದಲ್ಲಿ ಜೋಸೆಫ್ ಮಲ್ಲಾಡಿ ರಚಿತ ಸುಡುವ ಕನಸುಗಳು ಎಂಬ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಬದ್ಧತೆ ಬಗ್ಗೆ ಮಾತಾಡುವುದೇ ತಪ್ಪೇನೋ? ಅಪರಾಧವೇನೋ? ಸಾಮಾಜಿಕ ಬದ್ಧತೆ ಇರುವುದು ಒಳ್ಳೆಯ ಕವಿತೆ ಆಗಲಾರದೇನೋ? ಎನ್ನುವಂತ ತೊಳಲಾಟಕ್ಕೆ ಈಗಿನ ಕವಿಗಳು ಬಿದ್ದಿದ್ದಾರೆ. ಸಾಮಾಜಿಕ ಬದ್ಧತೆ ಮತ್ತು ಜೀವನ ಬದ್ಧತೆ ಎರಡೂ ಬೇರೆ ಬೇರೆಯಲ್ಲ. ಎಷ್ಟೋ ಸಲ ದೊಡ್ಡ ದೊಡ್ಡ ಕವಿಗಳು ಕೂಡ ನಾನು ಬದ್ಧ ಕವಿಯಲ್ಲ, ಆದರೆ ನಾನು ಜೀವನಕ್ಕೆ ಬದ್ಧನಾಗಿದ್ದಿನಿ ಎಂದು ಹೇಳುತ್ತಾರೆ. ಅಂದರೆ ಧಮನಿತರ ಪರವಾಗಿದ್ದೇನೆ ಎಂದರ್ಥವಲ್ಲವೇ? ನಾನೊಬ್ಬ ಬದುಕಬೇಕೆನ್ನುವ ಅವಕಾಶವಾದಿತನವನ್ನು ಕಳೆದುಕೊಳ್ಳದೇ ಮನುಷ್ಯನಾಗುವ ಪ್ರಕ್ರಿಯೆ.
ಸಮಾಜದಲ್ಲಿ ಮೌನವು ಕೆಡಕನ್ನು ಬೆಳೆಸುತ್ತಲೇ ಇರುತ್ತದೆ. ನಾನು ಕೂಡ ತಪ್ಪಿತಸ್ಥನೆ ಎನ್ನುವ ಪ್ರಶ್ನೆ ತುಂಬಾ ತೀವ್ರವಾಗಿ ಇಲ್ಲಿ ಹಲವಾರು ಕವನಗಳಲ್ಲಿ ವ್ಯಕ್ತವಾಗಿದೆ. ವರ್ತಮಾನ ಎದುರಿಟ್ಟುಕೊಂಡು ಕಾವ್ಯವನ್ನು ರಚನೆ ಮಾಡುವುದು ಬಹಳ ಸವಾಲಿನ ಕೆಲಸ, ಆ ಸವಾಲನ್ನು ಕವಿ ಜೋಸೆಫ್ ತುಂಬಾ ಮುಖ್ಯವಾದ ಧಾತುವಿನಲ್ಲಿ ಎದುರಿಸಿದ್ದಾರೆ. ಸಮಾಜದ ಪರವಾಗಿ ನಿಂತು ಕೆಲಸಮಾಡುವ ವ್ಯಕ್ತಿ, ರಾಜ್ಯಮಟ್ಟದ ಪ್ರಶಸ್ತಿಗಳು ಬಂದರೂ ಕೂಡ ಅವರಲ್ಲಿರುವ ವಿನಮ್ರತೆ, ಧನ್ಯತೆ ಕಡಿಮೆ ಆಗುವುದಿಲ್ಲ ಎಂದರು.
ಕಲಘಟಗಿಯ ಗುಡ್ ನ್ಯೂಸ್ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಬಿ.ಜಿ. ಬಿರಾದಾರ ಮಾತನಾಡಿ, ಮಲ್ಲಾಡಿಯವರಿಗಿರುವ ಸಾಮಾಜಿಕ ಕಳಕಳಿಯೇ ಅವರನ್ನು ಉತ್ತಮ ಕವಿಯಾಗಿಸಿದೆ ಎಂದರು. ನ್ಯಾಯವಾದಿ ಹಾಗೂ ಚಿಂತಕ ಅಮೋಘಸಿದ್ಧ ಮಾ. ಖೋಬ್ರಿ ಅವರು ವಿವಿಧ ಮಗ್ಗಲುಗಳ ಅನುಭವಗಳನ್ನು ಚಿಂತನೆಮಾಡಿ ಅನುಭವದಿಂದ ಬಂದಂತಹ ಅತ್ಯುತ್ತಮ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸಿಲಿಂಡರ್ ಸ್ಫೋಟ: 10 ಮಂದಿಗೆ ಗಾಯ; ಓರ್ವ ವೃದ್ಧ ಗಂಭೀರ
ಸಮುದಾಯ ಸಂಘದ ಅಧ್ಯಕ್ಷ ಬಿ.ಐ. ಈಳಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೀಗೀ ಪದ ಕಲಾವಿದರಾದ ಯಲ್ಲಪ್ಪ ತಿರ್ಲುಕೊಪ್ಪ ಮತ್ತು ಸಂಗಡಿಗರಿಂದ ಗೀತಗಾಯನ ನಡೆಯಿತು. ಜೋಸೆಫ್ ಮಲ್ಲಾಡಿಯವರ ಎರಡು ಕವನಗಳನ್ನು ಹೇಮಂತ ಲಮಾಣಿ ಹಾಗೂ ಸಂಗಡಿಗರು ಶಾಸ್ತ್ರೀಯ ಸಂಗೀತದಲ್ಲಿ ಪ್ರಸ್ತುತ ಪಡಿಸಿದರು.
ಸಮುದಾಯದ ಕಾರ್ಯದರ್ಶಿ ಈರಣ್ಣ ಐನಾಪೂರ ಸ್ವಾಗತಿಸಿದರು. ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಬಿ. ಹೆಚ್. ಕುರಿ ನಿರೂಪಿಸಿದರು. ಭೂಮಿ ಪತ್ತಾರ ವಂದಿಸಿದರು.