ಆಧುನಿಕತೆ ತಕ್ಕಂತೆ ಬದಲಾದ ಶಿಕ್ಷಣ ಪದ್ಧತಿ ಮಕ್ಕಳ ಶಿಕ್ಷಣಕ್ಕೆ ಪೂರಕ ತಂತ್ರಜ್ಞಾನ ಬಳಕೆಗೆ ಬಂದಿದೆ. ಆದರೆ ಸಂಸ್ಕಾರಯುತ ಶಿಕ್ಷಣ ಜೊತೆಗೆ ಮಕ್ಕಳು ಶಿಸ್ತುಪಾಲನೆ, ಸ್ವಚ್ಚತೆ ಕಲಿಯಬೇಕು ಎಂದು ಸಿಪಿಐ ಗೋಪಿನಾಥ್ ಕರೆ ನೀಡಿದರು.
ಗುಬ್ಬಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇನ್ನರ್ ವೀಲ್ ಕ್ಲಬ್ ಆಯೋಜಿಸಿದ್ದ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪಠ್ಯ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇಲಾಖೆ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿವೆ ಎಂದರು.
ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಬಳಕೆ ಜೊತೆಗೆ ಹೆಣ್ಣು ಮಕ್ಕಳು ಇತ್ತೀಚಿಗೆ ಹೆಚ್ಚಾದ ಗಂಭೀರ ಲೈಂಗಿಕ ದೌರ್ಜನ್ಯ ಬಗ್ಗೆ ಜಾಗೃತರಾಗಿರಬೇಕು. ರಸ್ತೆ ಸುರಕ್ಷತಾ ನಿಯಮ ಪಾಲನೆ, ಅಪ್ರಾಪ್ತರು ವಾಹನ ಚಾಲನೆ ಮಾಡದಂತೆ ಎಚ್ಚರಿಕೆ ಹಾಗೂ ಮೊಬೈಲ್ ಬಳಕೆ ಬಗ್ಗೆ ಪೋಷಕರು ಎಚ್ಚರವಹಿಸಬೇಕು ಎಂದು ಅರಿವು ಮೂಡಿಸುವ ವಿಚಾರ ಹಂಚಿಕೊಂಡರು.

ಇನ್ನರ್ ವೀಲ್ ಕ್ಲಬ್ ಜಿಲ್ಲಾ ಚೇರ್ಮನ್ ಮಾಯರತ್ನನ್ ಮಾತನಾಡಿ ಮಕ್ಕಳಿಗೆ ಆಧುನಿಕ ಶಿಕ್ಷಣ ಸುಲಭ ಹಾಗೂ ಆಸಕ್ತಿದಾಯಕವಾಗಿದೆ. ಆದರೆ ಕಲಿಯುವ ಮಕ್ಕಳಲ್ಲಿ ಆಸಕ್ತಿ ಏಕಾಗ್ರತೆ ಮೂಡಿಸುವ ಪ್ರಯತ್ನ ಅತ್ಯಗತ್ಯ. ಶಾಲೆಯಲ್ಲಿ ಕಲಿಯುವ ವಿಚಾರದಷ್ಟೇ ಹೊರಗಿನ ಪ್ರಪಂಚದಲ್ಲಿ ಕಲಿಯುವ ಅಗತ್ಯವಿದೆ. ಹೆಣ್ಣು ಗಂಡು ತಾರತಮ್ಯ ಮನೆಯಲ್ಲಿ ಬಾರದಿದ್ದರೆ ಸಮಾಜದಲ್ಲಿ ಹೆಣ್ಣು ಏನೂ ಬೇಕಾದರೂ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ಜೊತೆ ಮಕ್ಕಳಿಗೆ ಮುಂದಿನ ಪ್ರಪಂಚದ ಅರಿವು ಮೂಡಿಸಿ ಎಂದು ಕರೆ ನೀಡಿದರು.
ಇನ್ನರ್ ವೀಲ್ ಸೀಮಾ ಮಾತನಾಡಿ ನಮ್ಮ ಕ್ಲಬ್ ಈವರೆವಿಗೂ 64 ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಿದ್ದೇವೆ. ಎಲ್ಲಾ ಪಠ್ಯ ವಿಷಯಗಳು ಸಿದ್ಧಪಡಿಸಿದ ರೀತಿಯಲ್ಲಿ ಪೆನ್ ಡ್ರೈವ್ ಮೂಲಕ ಡಿಜಿಟಲ್ ಸ್ಕ್ರೀನ್ ಶಿಕ್ಷಣ ನೀಡಲಾಗುತ್ತದೆ. ಈ ಜೊತೆಗೆ ಮಕ್ಕಳ ಆಸಕ್ತಿ ಪೂರಕ ಶಿಕ್ಷಣಕ್ಕೆ ಅಗತ್ಯ ಪರಿಕರವನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಉಮಾ ನಾಗರಾಜ್, ಸುನೀತಾ ರಾಜ್, ಪಲ್ಲವಿ, ಅನು ಭಾಸ್ಕರ್, ಶಾಂತಿ ಸುಬ್ರಹ್ಮಣ್ಯ, ಲತಾ, ಚೇತನಾ, ಮಂಜುಳಾ, ಆಶಾ, ಆಕರ್ಷಿತಾ, ಸಿಆರ್ ಪಿ ನಾಗಭೂಷಣ್, ಸಂಪನ್ಮೂಲ ವ್ಯಕ್ತಿ ಈರಣ್ಣ, ಶಿಕ್ಷಕಿ ಶಶಿಕಲಾ ಇತರರು ಇದ್ದರು.
