ಮೋದಿ ನೀಡಿದ್ದ ಭರವಸೆ ವರ್ಷಕ್ಕೆ 2 ಕೋಟಿ ಉದ್ಯೋಗ. ಆದರೆ ಒಂಬತ್ತು ವರ್ಷಗಳಲ್ಲಿ ಸೃಷ್ಟಿಸಿದ್ದು ಕೇವಲ 1.5 ಕೋಟಿ ಉದ್ಯೋಗ. ಅಂದರೆ, 9 ತಿಂಗಳಲ್ಲಿ ಸೃಷ್ಟಿಯಾಗಬೇಕಿದ್ದ ಉದ್ಯೋಗಗಳು 9 ವರ್ಷಗಳಲ್ಲಿ ಸೃಷ್ಟಿಯಾಗಿದ್ದವು. ಇದೇ ಮೋದಿ ಅವರ ನಿಜವಾದ ಸಾಧನೆ. ಯುವಜನರ ಮೇಲಿನ ಕಾಳಜಿ ಅಲ್ಲವೇ?
ಸೋಮವಾರ, ದೆಹಲಿಯಲ್ಲಿ ನಡೆದ ರೋಜ್ಗಾರ್ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ತಮ್ಮ ಸರ್ಕಾರವು ಕಳೆದ ಒಂದೂವರೆ ವರ್ಷದಲ್ಲಿ 10 ಲಕ್ಷ ಯುವಜನರಿಗೆ ಖಾಯಂ ಸರ್ಕಾರಿ ಉದ್ಯೋಗ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ, ಹೋದಲ್ಲಿ, ಬಂದಲ್ಲೆಲ್ಲ ಭಾರತವು ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕುತ್ತಿದೆ. ಭಾರತದ ಯುವಜನರು ಸಂತೃಪ್ತರಾಗಿದ್ದಾರೆ ಎಂದೂ ಹೇಳಿಕೊಳ್ಳುತ್ತಿದ್ದಾರೆ. ಮೋದಿ ಅವರ ಭಕ್ತಗಣ ಅದನ್ನೇ ಸತ್ಯವೆಂದು ವಾಟ್ಸ್‌ಆ್ಯಪ್ ಯೂನಿವರ್ಸಿಟಿಯಲ್ಲಿ ಹಂಚಿಕೊಳ್ಳುತ್ತಿದೆ. ಮೋದಿ ಅವರನ್ನು ಕೊಂಡಾಡುತ್ತಿದೆ.
ಸತತ ಮೂರನೇ ಬಾರಿಗೆ ಪ್ರಧಾನಿ ಆಗಿರುವ ಮೋದಿ ಅವರು, 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಭಾರೀ ಮಾತನಾಡಿದ್ದರು. ಹಿಂದಿನ ಯುಪಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದರು. ಮಾತ್ರವಲ್ಲದೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿಯೂ ಭರವಸೆ ನೀಡಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ. ತಾವೇ ನೀಡಿದ್ದ ಭರವಸೆಯಂತೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿದ್ದಾರೆಯೇ ಎಂಬುದರ ಬಗ್ಗೆ ಮೋದಿ ತುಟಿಬಿಚ್ಚಲಿಲ್ಲ.
ಆದರೆ, 2024ರ ಲೋಕಸಭಾ ಚುನಾವಣೆಗೂ ಮುನ್ನ ನಡೆದಿದ್ದ ಸಂಸತ್ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಅಂದಿನ ಉದ್ಯೋಗ ಸಚಿವ ಭೂಪೇಂದ್ರ ಯಾದವ್, ”ಮೋದಿ ಸರ್ಕಾರದ ಒಂಬತ್ತು ವರ್ಷಗಳ ಆಡಳಿತದಲ್ಲಿ ಐಟಿ, ಉತ್ಪಾದನೆ, ವ್ಯಾಪಾರ ಮತ್ತು ಸಾರಿಗೆ ಸೇರಿದಂತೆ ಒಂಬತ್ತು ಸಂಘಟಿತ ವಲಯಗಳಲ್ಲಿ 1.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ” ಎಂದು ಹೇಳಿದ್ದರು. ಅಂದರೆ, ಮೋದಿ ಘೋಷಣೆಯ ಪ್ರಕಾರ, ಬಿಜೆಪಿ ಆಡಳಿತದ 9 ತಿಂಗಳಲ್ಲಿ ಸೃಷ್ಟಿಯಾಗಬೇಕಿದ್ದ ಉದ್ಯೋಗಗಳು 9 ವರ್ಷಗಳಲ್ಲಿ ಸೃಷ್ಟಿಯಾಗಿದ್ದವು. ಇದೇ ಮೋದಿ ಅವರ ನಿಜವಾದ ಸಾಧನೆ. ಯುವಜನರ ಮೇಲಿನ ಕಾಳಜಿ.
ಅಂದಹಾಗೆ, 2018ರ ನಂತರದಲ್ಲಿ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿತ್ತು. ಮುಖ್ಯವಾಗಿ, ನಿರುದ್ಯೋಗ ದರವು 2012ರಲ್ಲಿ (ಮೋದಿ ಅಧಿಕಾರಕ್ಕೆ ಬರುವ ಹಿಂದಿನ ವರ್ಷ) 2.1% ಇತ್ತು. ಇದು 2024ರ ನವೆಂಬರ್ ವೇಳೆಗೆ 9.1%ಗೆ ಏರಿಕೆಯಾಗಿದೆ. ಪದವೀಧರರಲ್ಲಿ ನಿರುದ್ಯೋಗ ದರವು 19.2% ರಿಂದ 35.8%ಕ್ಕೆ ಏರಿದ್ದರೆ, ಸ್ನಾತಕೋತ್ತರ ಪದವಿ ಪಡೆದವರಲ್ಲಿ ನಿರುದ್ಯೋಗ ದರವು 36.2%ಗೆ ದಾಖಲಾಗಿದೆ.
ಗಮನಾರ್ಹವಾಗಿ, 20ರಿಂದ 24 ವಯಸ್ಸಿನ ಯುವಜನರ ನಿರುದ್ಯೋಗ ಪ್ರಮಾಣವು ಬರೋಬ್ಬರಿ 44.49%ಗೆ ಏರಿಕೆಯಾಗಿದೆ. ಅಂತೆಯೇ, 25 ಮತ್ತು 29ರ ನಡುವಿನ ಯುವಜನರಲ್ಲಿ ನಿರುದ್ಯೋಗವು 14.33% ಇದೆ.
ಇನ್ನು, ಕಾರ್ಮಿಕ ಬಲದ ಭಾಗವಹಿಸುವಿಕೆ ದರ (ಎಲ್‌ಎಫ್‌ಪಿಆರ್) 2017-18ರಲ್ಲಿ 49.8% ಇತ್ತು. ಅಂದರೆ, ದೇಶದಲ್ಲಿರುವ ದುಡಿಯುವ ವಯಸ್ಸಿನ – 15 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 65 ವರ್ಷಕ್ಕಿಂತ ಕಡಿಮೆ ವಯಸ್ಸಿನ – ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಕಡಿಮೆ ಜನರು ನಾನಾ ರೀತಿಯಲ್ಲಿ ಉದ್ಯೋಗವನ್ನು ಹೊಂದಿದ್ದರು. ಅರ್ಧಕ್ಕಿಂತ ಹೆಚ್ಚಿನ ಜನರು ಯಾವುದೇ ಉದ್ಯೋಗಗಳನ್ನು ಮಾಡುತ್ತಿರಲಿಲ್ಲ. ಎಲ್‌ಎಫ್‌ಪಿಆರ್ ಪ್ರಮಾಣವು 2022-23ರಲ್ಲಿ 57.9%ಗೆ ಏರಿಕೆಯಾಗಿ, ಸುಧಾರಣೆ ಕಂಡಿದೆ. ಇದರಲ್ಲೂ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವ್ಯತ್ಯಾಸಗಳಿವೆ. ನಗರ ಪ್ರದೇಶದಲ್ಲಿ 50.4% ಮಾತ್ರವೇ ಇದೆ.
ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಶಿಕ್ಷಿತರಿಗಿಂತ ಅಶಿಕ್ಷಿತರು ಹೆಚ್ಚು ಉದ್ಯೋಗದಲ್ಲಿದ್ದಾರೆ. ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (PLFS) 2023-24ರ ಪ್ರಕಾರ, 59.6% ಅಶಿಕ್ಷಿತ ವ್ಯಕ್ತಿಗಳು ಉದ್ಯೋಗದಲ್ಲಿದ್ದರೆ, ಪದವೀಧರರಲ್ಲಿ 57.5% ಮಾತ್ರ ಉದ್ಯೋಗದಲ್ಲಿದ್ದಾರೆ. ಭಾರತದ ಉದ್ಯೋಗ ವರದಿ-2024ರ ಪ್ರಕಾರ, ಕಡಿಮೆ-ಶಿಕ್ಷಿತ ಯುವಜನರಲ್ಲಿ ನಿರುದ್ಯೋಗವು ಕೇವಲ 3.2% ಇದ್ದರೆ, ಹೆಚ್ಚು ವಿದ್ಯಾವಂತ ವ್ಯಕ್ತಿಗಳಲ್ಲಿ 28.7% ನಿರುದ್ಯೋಗ ದರವಿದೆ.
ಮಾತ್ರವಲ್ಲದೆ, ಭಾರತದ ಸುಮಾರು 78% ಕಾರ್ಮಿಕರು ತಿಂಗಳಿಗೆ 14,000 ರೂ.ಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಉನ್ನತ ಶಿಕ್ಷಣ ಆಧಾರಿತ ಉದ್ಯೋಗಿಗಳು ಸರಾಸರಿ ಮಾಸಿಕ 20,000 ರೂ. ಗಳಿಸುತ್ತಿದ್ದಾರೆ. ಆದರೆ, ಸ್ವಯಂ ಉದ್ಯೋಗಿಗಳಲ್ಲಿ ಸರಾಸರಿ ಮಾಸಿಕ ಆದಾಯವು ಕೂಲಿಗಾಗಿ ದುಡಿಯುವ ಕಾರ್ಮಿಕರಿಗಿಂತ ಕಡಿಮೆ ಇದೆ. ಅವರ ಆದಾಯವು ಕೇವಲ ಸರಾಸರಿ 7,423 ರೂ. ಇದೆ. ಈ ಅಸಮಾನತೆಯು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದು ರಾಷ್ಟ್ರದ ಆರ್ಥಿಕ ಪ್ರಗತಿಗೂ ಅಡ್ಡಿಯಾಗುತ್ತದೆ.
ಈ ವರದಿ ಓದಿದ್ದೀರಾ?: ಮಾಧ್ಯಮಗಳ ಪಕ್ಷಪಾತಿ ಧೋರಣೆ ಮತ್ತೆ ಅನಾವರಣ; ಸಿ.ಟಿ.ರವಿಗೆ ಇಷ್ಟೊಂದು ಪ್ರಚಾರ ನೀಡಬೇಕಿತ್ತೆ?
ಇಂತಹ ಭೀಕರ ನಿರುದ್ಯೋಗದ ಪರಿಸ್ಥಿತಿಯಿಂದಾಗಿಯೇ, 2022ರಲ್ಲಿ ದೇಶಾದ್ಯಂತ ಒಟ್ಟು 15,783 ಯುವಜನರು ನಿರುದ್ಯೋಗದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಿಂದ 2022ರ ನಡುವೆ 28,464 ಯುವಜನರು ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ.
ವಸ್ತುಸ್ಥಿತಿ ಹೀಗಿರುವಾಗ, ಕಳೆದ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ನೀಡಿದ್ದೇವೆ ಎಂದು ಮೋದಿ ಅವರು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎನಿಸುವುದಿಲ್ಲವೇ? ಮಾತ್ರವಲ್ಲ, ಅವರೇ ಹೇಳಿದ್ದಂತೆ ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯ ಎದುರು 10 ಲಕ್ಷ ಉದ್ಯೋಗ ಏನೇನೂ ಅಲ್ಲ. 2 ಕೋಟಿಗೆ ಹೋಲಿಸಿದರೆ 10 ಲಕ್ಷ ಎಂಬುದು ಕೇವಲ 5% ಮಾತ್ರ. ತಮ್ಮದೇ ಭರವಸೆಯಂತೆ 5% ಉದ್ಯೋಗ ಕೊಟ್ಟು, ಅದೇ ತಮ್ಮ ಸಾಧನೆ ಎನ್ನುವುದು ಮೋದಿ ಅವರು ಯುಜನರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ?