ಈ ದಿನ ಸಂಪಾದಕೀಯ | ಬಾಬಾಸಾಹೇಬರು ಮನುಸ್ಮೃತಿಯನ್ನು ಸುಟ್ಟ ದಿನ

Date:

Advertisements
ಮನುಸ್ಮೃತಿ ಎಂಬ ಜೀವವಿರೋಧಿ 'ಧರ್ಮ' ನಿಯಮಗಳು ಶತಮಾನಗಳಿಂದ ಇಂಡಿಯಾದ ನರನಾಡಿಗಳಲ್ಲಿ ಹರಿದಿರುವುದೇ ಮಹಾ ಅನ್ಯಾಯ. ಈ ಕಾರ್ಕೋಟಕ ವಿಷವನ್ನು ಇನ್ನಷ್ಟು ಗಾಢವಾಗಿ ಆಳವಾಗಿ ವ್ಯಾಪಕವಾಗಿ ಬಿಗಿಯಾಗಿ ಹರಿಸುವ ಬಿಡುಬೀಸು ಪ್ರಯತ್ನಗಳು ಕಳೆದ ಏಳೆಂಟು ವರ್ಷಗಳಿಂದ ಜರುಗಿವೆ.

ಸುಡುವ ಗೊತ್ತುವಳಿಯನ್ನು ಅಂಬೇಡ್ಕರ್ ಅವರ ಬ್ರಾಹ್ಮಣ ಸಂಗಾತಿ ಗಂಗಾಧರ ನೀಲಕಂಠ ಸಹಸ್ರಬುದ್ಧೆ ಮಂಡಿಸಿದರು. ಅಸ್ಪೃಶ್ಯ ತಲೆಯಾಳು ಪಿ.ಎನ್. ರಾಜಭೋಜ್ ಅನುಮೋದಿಸಿದರು. ಆನಂತರ ಮನುಸ್ಮೃತಿಯನ್ನು ಚಿತೆಯ ಮೇಲಿರಿಸಿ ಬೆಂಕಿ ಇಕ್ಕಲಾಯಿತು.

ಚವಡರ್ ಕೆರೆಯ ನೀರನ್ನು ಮುಟ್ಟುವ ಮಹಾಡ್ ಸತ್ಯಾಗ್ರಹದ ಸಂದರ್ಭದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು 1927ರ ಡಿಸೆಂಬರ್ 25ರಂದು ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟರು. ಇನ್ನು ಮೂರು ವರ್ಷಗಳಲ್ಲಿ ಮನುಸ್ಮೃತಿಯನ್ನು ಸುಟ್ಟ ಮೈಲಿಗಲ್ಲಿಗೆ ನೂರು ವರ್ಷಗಳು ತುಂಬಲಿವೆ.

‘ಹಿಂದೂ ಸಮಾಜ ಹಾದು ಬಂದ ಮಹಾನ್ ಸಾಮಾಜಿಕ ಕ್ರಾಂತಿಯ ದಸ್ತಾವೇಜು ಮನುಸ್ಮೃತಿ. ಅದು ಪ್ರತಿಕ್ರಾಂತಿಯೊಂದರ ಪರಮಸತ್ಯ. ಬೌದ್ಧಧರ್ಮವನ್ನು ನಾಶಗೊಳಿಸಿ ಬ್ರಾಹ್ಮಣ್ಯವನ್ನು ಪುನಃ ಸ್ಥಾಪಿಸುವುದೇ ಈ ಪ್ರತಿಕ್ರಾಂತಿಯ ಉದ್ದೇಶವಾಗಿತ್ತು’ ಎನ್ನುತ್ತಾರೆ ಬಾಬಾಸಾಹೇಬರು.

Advertisements

ಅಸ್ಪೃಶ್ಯರು, ಶೂದ್ರರು ಹಾಗೂ ಹೆಣ್ಣುಮಕ್ಕಳನ್ನು ಅಮಾನವೀಯವಾಗಿ ಕಂಡು ಅವರ ಮೇಲೆ ಅಮಾನುಷ ಕಟ್ಟುಕಟ್ಟಳೆಗಳ ವಿಧಿಸಿರುವ ವಿಕೃತಿ ಮನುಸ್ಮೃತಿ. ಈ ವಿಕೃತಿಯನ್ನು ವರ್ಣವ್ಯವಸ್ಥೆಯ ಪ್ರತಿಪಾದಕರು ಎದೆಗೊತ್ತಿಕೊಂಡು ಆರಾಧಿಸುತ್ತಾರೆ. ಹೀಗಾಗಿ ಸುಟ್ಟ ಅಂಬೇಡ್ಕರ್ ಅವರನ್ನು ಪ್ರೀತಿಸುತ್ತಾರೆ ಎಂಬುದು ಮೋಸದ ಮಾತು. ಎದೆಯೊಳಗೆ ಮುಚ್ಚಿಟ್ಟುಕೊಂಡಿರುವ ಈ ಮೋಸ, ದ್ವೇಷ, ಅಸಹನೆಯ ನಂಜು ಇತ್ತೀಚೆಗೆ ರಾಜ್ಯಸಭೆಯಲ್ಲಿ ಗೃಹಮಂತ್ರಿಯವರ ಹೇಳಿಕೆಯಲ್ಲಿ ಹೊರಬಿದ್ದು ಹರಿಯಿತು. ಈ ನಂಜೇ ನಿಜ. ಉಳಿದವುಗಳೆಲ್ಲ ಬಣ್ಣದ ಮಾತುಗಳಲ್ಲದೆ ಮತ್ತೇನೂ ಅಲ್ಲ.

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ನಾಲ್ಕು ವರ್ಣಗಳ ಜನರು ಹಾಗೂ ಅವರ್ಣೀಯರು (ಅಸ್ಪೃಶ್ಯರು) ನಿತ್ಯ ಬದುಕಿನಲ್ಲಿ ಆಚರಿಸಬೇಕಿರುವ ವಿಧಿ ನಿಷೇಧಗಳನ್ನು ಮನುಸ್ಮೃತಿ ನಿಗದಿ ಮಾಡಿದೆ. ಬ್ರಾಹ್ಮಣ ಪುರುಷರಿಗೆ ವಿಶೇಷಾಧಿಕಾರಗಳನ್ನು ಕೊಡಮಾಡಿದೆ. ಮಹಿಳೆಯರು-ಶೂದ್ರರು- ಅಸ್ಪೃಶ್ಯರಿಗೆ ಅತಿ ಕ್ರೂರ ಕಟ್ಟುಕಟ್ಟಳೆಗಳನ್ನು ವಿಧಿಸಿದೆ. ಅವರಿಗೆ ಯಾವುದೇ ಹಕ್ಕುಗಳನ್ನು ನಿರಾಕರಿಸಿದೆ. ಅಸ್ಪೃಶ್ಯ ಜಾತಿಗಳು ಏನನ್ನು ತಿನ್ನಬೇಕು, ಏನನ್ನು ಉಡಬೇಕು, ಯಾವ ಆಸ್ತಿಯನ್ನು ಹೊಂದಬಹುದು ಹಾಗೂ ಹೇಗೆ ಬದುಕಬೇಕು ಎಂದು ತೀರ್ಮಾನಿಸಿದೆ. ಬಹುಪಾಲು ಉಚ್ಚಕುಲದವರು ಮತ್ತು ಇತರೆ ಸವರ್ಣ ಹಿಂದೂಗಳು ಮನುಸ್ಮೃತಿಯನ್ನು ಕೊಂಡಾಡುತ್ತಾರೆ.

ನೂರಾರು ವರ್ಷಗಳಿಂದ ಈ ದೇಶದ ತಳಸಮುದಾಯಗಳ ಕೋಟ್ಯಂತರ ಜನರನ್ನು ಪಶುಪ್ರಾಣಿಗಳಿಗಿಂತಲೂ ಕಡೆಯಾಗಿ ನಡೆಸಿಕೊಂಡು ಬರಲಾಗಿದೆ. ತಲೆಮಾರುಗಳಿಂದ ಅವರಲ್ಲಿ ಹೆಪ್ಪುಗಟ್ಟಿರುವ ನೋವು ಅವಮಾನಗಳ ದರಕಾರೇ ಇಲ್ಲ ಸವರ್ಣ ಹಿಂದೂಗಳಿಗೆ.

1927ರ ಡಿಸೆಂಬರ್ 27ರಂದು ಮನುಸ್ಮೃತಿಯನ್ನು ಸುಡಲು ಚಿತೆಯೊಂದನ್ನು ನಿರ್ಮಿಸಲಾಗಿತ್ತು. ನಾಲ್ಕೂ ಮೂಲೆಗಳಲ್ಲಿ ಬಟ್ಟೆಯ ಫಲಕಗಳ ಕಟ್ಟಲಾಗಿತ್ತು. ‘ಮನುಸ್ಮೃತಿಯ ದಹನ ಭೂಮಿ’, ‘ಅಸ್ಪೃಶ್ಯತೆ ನಾಶವಾಗಲಿ’, ‘ಬ್ರಾಹ್ಮಣವಾದವನ್ನು ಹೂತು ಹಾಕಿರಿ’ ಎಂಬುದಾಗಿ ಅವುಗಳಲ್ಲಿ ಬರೆಯಲಾಗಿತ್ತು. ದಹನದಿನದ ಸಂಜೆ ಮನುಸ್ಮೃತಿಯನ್ನು ಸುಡುವ ಗೊತ್ತುವಳಿಯನ್ನು ಅಂಬೇಡ್ಕರ್ ಅವರ ಬ್ರಾಹ್ಮಣ ಸಂಗಾತಿ ಗಂಗಾಧರ ನೀಲಕಂಠ ಸಹಸ್ರಬುದ್ಧೆ ಮಂಡಿಸಿದರು. ಅಸ್ಪೃಶ್ಯ ತಲೆಯಾಳು ಪಿ.ಎನ್. ರಾಜಭೋಜ್ ಅನುಮೋದಿಸಿದರು. ಆನಂತರ ಮನುಸ್ಮೃತಿಯನ್ನು ಚಿತೆಯ ಮೇಲಿರಿಸಿ ಸುಡಲಾಯಿತು.

ಅಧ್ಯಕ್ಷ ಭಾಷಣ ಮಾಡಿದ ಬಾಬಾಸಾಹೇಬರು ಮಹಾಡ್ ಸತ್ಯಾಗ್ರಹದ ಗುರಿ ಚವಡರ್ ಕೆರೆಯ ನೀರು ಕುಡಿಯುವುದು ಮಾತ್ರವೇ ಅಲ್ಲದೆ ವರ್ಣವ್ಯವಸ್ಥೆಯನ್ನು ಮುರಿಯುವುದೇ ಆಗಿದೆ ಎಂದು ಸಾರಿದರು. ಅಂತರ್ಜಾತಿಯ ಮದುವೆಗಳ ನಿಷೇಧವೇ ಅಸ್ಪೃಶ್ಯತೆಯ ಬೇರು. ಈ ಬೇರನ್ನು ಕಡಿದು ಹಾಕಬೇಕಿದೆ ಎಂದರು. ಮನುಸ್ಮೃತಿಯಲ್ಲಿ ಸಾಮಾಜಿಕ ಸಮಾನತೆಯ ಪರಿಕಲ್ಪನೆಯ ಲವಲೇಶವೂ ಇಲ್ಲ ಎಂಬುದು ಅನುಮಾನಕ್ಕೆಡೆಯಿಲ್ಲದಂತೆ ಮನದಟ್ಟಾಗಿರುವ ಸಂಗತಿಯೆಂದು ಡಾ.ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟಿದ್ದನ್ನು ಸಮರ್ಥಿಸಿ ವಿವರಿಸಿದರು. (‘ಬಹಿಷ್ಕೃತ ಭಾರತ’ ಪತ್ರಿಕೆಯ 1928ರ ಫೆಬ್ರವರಿ ಮೂರರ ಸಂಚಿಕೆ). ಇತರೆ ಪತ್ರಿಕೆಗಳಲ್ಲಿಯೂ ಇಂತಹುದೇ ಲೇಖನಗಳನ್ನು ಬರೆದರು.

‘ವಸ್ತುವೊಂದನ್ನು ಸುಡುವುದು ಅದು ಪ್ರತಿನಿಧಿಸುವ ಸಂಗತಿಯನ್ನು ಪ್ರತಿಭಟಿಸುವುದೇ ಆಗಿದೆ. ಸಂಬಂಧಪಟ್ಟ ವ್ಯಕ್ತಿಗೆ ಲಜ್ಜೆಯಾಗಿ ಆತನ ವರ್ತನೆ ಸುಧಾರಿಸುವುದೆಂಬ ನಿರೀಕ್ಷೆಯನ್ನೂ ಸುಡುವ ಕ್ರಿಯೆ ಹೊಂದಿರುತ್ತದೆ. ಮನುಸ್ಮೃತಿಯನ್ನು ಆಧರಿಸಿ ಗೌರವಿಸುವ ಯಾವುದೇ ವ್ಯಕ್ತಿ ನಿಜವಾಗಿಯೂ ಅಸ್ಪೃಶ್ಯರ ಒಳಿತನ್ನು ಬಯಸುತ್ತಾನೆಂದು ನಂಬುವುದಾದರೂ ಹೇಗೆ’ ಎಂದು ಅಂಬೇಡ್ಕರ್ ಪ್ರಶ್ನಿಸಿದ್ದರು.

ಮನುಸ್ಮೃತಿ ದಹನದ ನಂತರ ಅಂದಿನ ಸವರ್ಣೀಯ ಪತ್ರಿಕೆಗಳು ಅಂಬೇಡ್ಕರ್ ಅವರನ್ನು ಭೀಮಾಸುರ, ರಾಕ್ಷಸ, ದ್ರೋಹಿ, ಬಾಡಿಗೆಯ ಬಂಟ, ಬ್ರಹ್ಮದ್ವೇಷಿ, ರಾಷ್ಟ್ರೀಯತೆಯ ವಿರೋಧಿ ಎಂದೆಲ್ಲ ಹೀಯಾಳಿಸಿದ್ದವು. ಗಾಂಧೀಜಿ ದಂಡಿ ಯಾತ್ರೆಯನ್ನು ಸತ್ಯಾಗ್ರಹ ಎಂದು ಕರೆಯುತ್ತಿದ್ದ ಅದೇ ಪತ್ರಿಕೆಗಳು ಅಂಬೇಡ್ಕರ್ ಅವರ ಮಹಾಡ್ ಆಂದೋಲನವನ್ನು ದ್ರೋಹ ಎಂದು ಜರೆದವು.

ಹಿಂದೂ ಧರ್ಮದ ಜೀವವಿರೋಧದ ಅಂತರಾಳವನ್ನು ಮತ್ತು ಅದರ ಜಾತಿವ್ಯವಸ್ಥೆಯ ಕ್ರೌರ್ಯವನ್ನು ತಮ್ಮ ಕಡೆಯ ಉಸಿರಿನ ತನಕ ಜಾಲಾಡಿದರು ಬಾಬಾಸಾಹೇಬರು.

ಸಂವಿಧಾನ ರಚನಾಸಭೆ ಅಂಗೀಕರಿಸಿದ ಡಾ.ಅಂಬೇಡ್ಕರ್ ವಿರಚಿತ ಸಂವಿಧಾನವು ಮನುಸ್ಮೃತಿಯನ್ನು ಧಿಕ್ಕರಿಸಿತ್ತು. ಅದರ ಆಶಯಗಳು ಮನುಸ್ಮೃತಿಯ ಜೀವವಿರೋಧಿ ಮತ್ತು ಅಸಮಾನತೆಯ ಜೀವವಿರೋಧಿ ಕಟ್ಟಳೆಗಳಿಗೆ ಸಾರಾಸಗಟು ವ್ಯತಿರಿಕ್ತವಾಗಿದ್ದವು. ಕಾನೂನು ಕಾಯಿದೆಯ ಮುಂದೆ ಎಲ್ಲರೂ ಸಮಾನರು ಎಂದು ಸಾರಿತ್ತು. ಆದರೆ ಕಟ್ಟರ್ ಹಿಂದುತ್ವವಾದಿಗಳಿಗೆ ಸಂವಿಧಾನ ಸಮ್ಮತವಿರಲಿಲ್ಲ. ಸಮಾನತೆ ಸಾಧನೆಯ ಹಾದಿಯ ಕ್ರಮವಾದ ಮೀಸಲಾತಿ ಕ್ರಮವನ್ನೂ ಕಟುವಾಗಿ ವಿರೋಧಿಸಿದರು. ಮೀಸಲಾತಿಯಿಂದ ಸಾಮಾಜಿಕ ಸಾಮರಸ್ಯ ಕೆಡುತ್ತದೆಂದು ವಾದಿಸಿದರು. ಸಂವಿಧಾನಕ್ಕಿಂತ ಮನುಸ್ಮೃತಿಯೇ ಶ್ರೇಷ್ಠ ಮತ್ತು ಪರಮ ಎಂಬುದು ಅವರ ನಿರಂತರ ನಂಬಿಕೆ. ಹಿಂದುತ್ವವಾದಿಗಳು ಬಹುವಾಗಿ ಆರಾಧಿಸುವ ವಿ.ಡಿ. ಸಾವರ್ಕರ್ ಕೂಡ ಮನುಸ್ಮೃತಿಯೇ ಭಾರತದ ಸಂವಿಧಾನ ಆಗಬೇಕೆಂದು ಬಯಸಿದ್ದರು. ಕೋಟ್ಯಂತರ ಹಿಂದೂಗಳು ತಮ್ಮ ದಿನನಿತ್ಯದ ಬದುಕುಗಳಲ್ಲಿ ಮನುಸ್ಮೃತಿಯನ್ನು ಪಾಲಿಸುತ್ತಾರೆ. ಅದುವೇ ಹಿಂದೂ ಸಂಹಿತೆ ಎಂದಿದ್ದರು.

ಸಂವಿಧಾನವನ್ನು ಭಾರತೀಯ ಮೌಲ್ಯವ್ಯವಸ್ಥೆಗಳಿಗೆ ಅನುಗುಣವಾಗಿ ಬದಲಾಯಿಸಬೇಕೆಂಬುದು ಹಿಂದುತ್ವವಾದಿಗಳ ವಾದ. ಹೀಗಾಗಿಯೇ ಕಾಲ ಕಾಲಕ್ಕೆ ಸಂವಿಧಾನವನ್ನು ಬದಲಾಯಿಸುವ ಮಾತುಗಳು ಕೇಳಿಬರುತ್ತಿರುತ್ತವೆ. ಸಂವಿಧಾನದ ಮರುವಿಮರ್ಶೆಗೆಂದು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಆಯೋಗವೊಂದನ್ನು ನೇಮಕ ಮಾಡಿತ್ತು. ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ನೇತೃತ್ವದ ಆಯೋಗ 2002ರಲ್ಲಿ ವರದಿಯನ್ನೂ ನೀಡಿತು. ಆದರೆ ಈ ವರದಿಯು ಹಿಂದುತ್ವವಾದಿಗಳ ನಿರೀಕ್ಷೆಯನ್ನು ಮುಟ್ಟಲಿಲ್ಲ.

ಮನು ರಚಿಸಿದ ಕಾನೂನುಗಳು ಶೂದ್ರರ ಸಾಮಾಜಿಕ ಸ್ಥಾನಮಾನಗಳ ಕುರಿತು ಹಿಂದೂಗಳ ಮನೋಭಾವ, ಧೋರಣೆಯನ್ನು ಅಚ್ಚಿನಲ್ಲಿ ಎರಕ ಹೊಯ್ದು ಸರ್ವಕಾಲಕ್ಕೆ ರೂಪಿಸಿದೆ ಎಂದಿದ್ದಾರೆ ಅಂಬೇಡ್ಕರ್. ಆದರೆ ಅಂಬೇಡ್ಕರ್ ಮನುಸ್ಮೃತಿಯನ್ನು ಓದಿಕೊಂಡಿರುವುದರಲ್ಲೇ ದೋಷವಿದೆ ಎಂಬುದಾಗಿ ಅವರ ಅಪಾರ ಅಧ್ಯಯನವನ್ನು ಗ್ರಹಿಕೆಗಳನ್ನು ಅಲ್ಲಗಳೆವ ಪ್ರಯತ್ನಗಳು ಇತ್ತೀಚಿನ ವರ್ಷಗಳಲ್ಲಿ ನಡೆದಿವೆ.

ಏಣಿಶ್ರೇಣಿಯ ವರ್ಣವ್ಯವಸ್ಥೆಯನ್ನು ಪ್ರತಿಪಾದಿಸುವ ಬ್ರಾಹ್ಮಣವಾದದ ಬೇರಿಗೇ ಕೊಡಲಿ ಏಟು ಹಾಕಿ ಸರ್ವರೂ ಸಮಾನರೆಂದು ಸಾರಿತ್ತು ಬೌದ್ಧಧರ್ಮ. ಬೌದ್ಧವನ್ನು ನಾಶಗೊಳಿಸುವ ಬ್ರಾಹ್ಮಣದ ಪಣದ ಹಿಂದಿನ ಮರ್ಮ ಇದೇ ಆಗಿತ್ತು. ಈ ಕಾರಣಗಳಿಗಾಗಿಯೇ ಬೌದ್ಧಧರ್ಮೀಯರನ್ನು ಪಾಷಂಡಿಗಳು ಅಥವಾ ಧರ್ಮಲಂಡರು ಎಂದು ಮನುಸ್ಮೃತಿ ಖಂಡಿಸಿದೆ ಎಂದು ಸಾಮಾಜಿಕ ರಾಜಕೀಯ ಚಿಂತಕ ಸುಭಾಷ್ ಗಟಾಡೆ ವಿಶ್ಲೇಷಿಸಿದ್ದಾರೆ.

ಇದನ್ನು ಓದಿದ್ದೀರಾ? ದೇವರ ಬಗ್ಗೆ ಬಾಬಾ ಸಾಹೇಬರು ಬರೆದಿದ್ದೇನೆಂದು ಅಮಿತ್ ಶಾ ಓದಿದ್ದಾರಾ?

1989ರಲ್ಲಿ ರಾಜಸ್ತಾನವನ್ನು ಬಿಜೆಪಿ ಸರ್ಕಾರ ಆಳುತ್ತಿದ್ದಾಗ ಜೈಪುರದ ಹೈಕೋರ್ಟ್ ಮುಂದೆ ಮನುವಿನ ಪ್ರತಿಮೆ ಸ್ಥಾಪಿಸಲಾಯಿತು. ಇದೇ ಆವರಣದ ಮೂಲೆಯೊಂದರಲ್ಲಿ ಅಂಬೇಡ್ಕರ್ ಪ್ರತಿಮೆ ಕೂಡ ಉಂಟು. ಮನುವಿನ ಪ್ರತಿಮೆ ಸ್ಥಾಪನೆಯನ್ನು ದಲಿತ ಸಂಘಟನೆಗಳು ಪ್ರತಿಭಟಿಸಿದ್ದವು. ಈ ಪ್ರತಿಮೆಯನ್ನು ತೆಗೆದು ಹಾಕುವ ನಿರ್ಣಯವನ್ನು ಪ್ರಶ್ನಿಸಿ ವಿಶ್ವಹಿಂದೂ ಪರಿಷತ್ತು ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಿತು. ಪ್ರತಿಮೆಯನ್ನು ತೆಗೆದು ಹಾಕುವ ಕ್ರಮಕ್ಕೆ ಹೈಕೋರ್ಟು ತಡೆಯಾಜ್ಞೆ ನೀಡಿತು. ಮುಖ್ಯನ್ಯಾಯಮೂರ್ತಿಯೂ ಸೇರಿದಂತೆ ಮೂವರು ಸದಸ್ಯರ ನ್ಯಾಯಪೀಠದ ವಿಚಾರಣೆಗೆ ವಹಿಸುವಂತೆ ಹೇಳಿತು. ತರುವಾಯ ಈ ಅರ್ಜಿಯ ವಿಚಾರಣೆಯಲ್ಲಿ ಪ್ರಗತಿಯಾಗಿಲ್ಲ. 2018ರಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಶೀಲಾ ಬಾಯಿ ಪವಾರ್, ಕಾಂತಾ ರಮೇಶ್ ಆಹಿರೆ ಎಂಬ ಇಬ್ಬರು ಮಹಿಳೆಯರು ರಾಜಸ್ತಾನ ತಲುಪಿ ಮನುವಿನ ಪ್ರತಿಮೆಗೆ ಮಸಿ ಬಳಿದರು. ನೆರೆದ ಜನ ಮಹಿಳೆಯರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆಂದು ಆರೋಪ ಹೊರಿಸಲಾಯಿತು. ಆದರೆ ಮನುವಿನ ಸಮರ್ಥನೆ ಮಾಡುವುದು ದಲಿತರು-ಶೂದ್ರರು-ಮಹಿಳೆಯರ ಭಾವನೆಗಳು ನೋಯುವುದಿಲ್ಲವೇ ಅಥವಾ ನೋಯುವ ಸ್ವಾತಂತ್ರ್ಯವನ್ನೂ ಅವರಿಗೆ ನಿರಾಕರಿಸಲಾಗಿದೆಯೇ? ಇಂತಿಂತಹ ಕಾರಣಗಳಿಗೆ ನೋಯಬೇಕು, ಉಳಿದ ಕಾರಣಗಳಿಗೆ ನೋಯಬಾರದು ಎಂದು ವಿಧಿಸಲಾಗಿದೆ ಅಲ್ಲವೇ?

ಮನುಸ್ಮೃತಿಯನ್ನು ಆಧರಿಸಿ ಗೌರವಿಸುವ ಯಾವುದೇ ವ್ಯಕ್ತಿ ನಿಜವಾಗಿಯೂ ಅಸ್ಪೃಶ್ಯರ ಒಳಿತನ್ನು ಬಯಸುತ್ತಾನೆಂದು ನಂಬುವುದಾದರೂ ಹೇಗೆ ಎಂಬುದಾಗಿ ಬಾಬಾಸಾಹೇಬರು 1928ರಲ್ಲಿ ಕೇಳಿದ್ದ ಪ್ರಶ್ನೆ ಇಂದಿಗೂ ಪ್ರಸ್ತುತ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X