ಕೇಂದ್ರಕ್ಕೆ ಪಾವತಿಯಾಗುವ ಶೇಕಡ 100ರಷ್ಟು ತೆರಿಗೆಯಲ್ಲಿ ಶೇ.85 ರಷ್ಟು ಹಣವನ್ನು ಸಾಮಾನ್ಯ ಜನರು ಪಾವತಿಸಿದರೆ, ಶೇ.15ರಷ್ಟನ್ನು ಮಾತ್ರ ಶ್ರೀಮಂತರು, ಬಂಡವಾಳಶಾಹಿಗಳು ಪಾವತಿಸುತ್ತಾರೆ. ಸೋಪು, ಪೆನ್ನು, ತರಕಾರಿ, ಆಹಾರ ಪದಾರ್ಥ ಮುಂತಾದ ಸಾಮಗ್ರಿಗಳಿಂದ ಜಿಎಸ್‌ಟಿ ಹಾಗೂ ಪರೋಕ್ಷ ತೆರಿಗೆಯನ್ನು ಸರ್ಕಾರಗಳಿಗೆ ನೀಡುತ್ತಾರೆ.
ಡಿಸೆಂಬರ್ 21ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಹಲವು ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಸಾಮಾನ್ಯ ಜನರ ತಿನಿಸಾದ ಪ್ಯಾಕ್ ಮಾಡದ ಪಾಪ್‌ಕಾರ್ನ್ ಮೇಲೆ ಜಿಎಸ್‌ಟಿ ತೆರಿಗೆಯನ್ನು ಶೇ.5 ಕ್ಕೆ ಹೆಚ್ಚಿಸಲಾಯಿತು. ಇಲ್ಲಿ ಮುಖ್ಯವಾದ ಸಂಗತಿಯೆಂದರೆ ಪಾಪ್‌ಕಾರ್ನ್‌ಗೆ ಪ್ಯಾಕ್ ಮಾಡಿ ಲೇಬಲ್ ಮಾಡಿದರೆ ಅದಕ್ಕೆ ಶೇ.12 ಕ್ಕೆ ಜಿಎಸ್‌ಟಿ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ಆದರೆ ಕ್ಯಾರಮೆಲ್‌ನಿಂದ(ಪಾಪ್‌ಕಾರ್ನ್ ಅನ್ನು ಸಕ್ಕರೆಯೊಂದಿಗೆ ಬೆರೆಸಿದಾಗ) ತಯಾರಿಸಿದ ಪಾಪ್‌ಕಾರ್ನ್ ಅನ್ನು ‘ಚೈನೀಸ್ ಮಿಠಾಯಿ’ ವಿಭಾಗದಲ್ಲಿ ಇರಿಸಲಾಗಿತ್ತು. ಇದರ ಮೇಲೆ ಶೇ.18 ಜಿಎಸ್‌ಟಿ ವಿಧಿಸಲಾಗಿದೆ. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕ್ಯಾರಮೆಲ್ ಪಾಪ್ ಕಾರ್ನ್ ಮೇಲೆ ಅತಿ ಹೆಚ್ಚು ತೆರಿಗೆಯನ್ನು ಹೇರಲಾಗಿದೆ. ಜಿಎಸ್‌ಟಿ ಮಂಡಳಿಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನದ ಪ್ರಕಾರ, ಮೊದಲು ಪ್ಯಾಕ್ ಮಾಡಲಾದ ಉಪ್ಪು ಮತ್ತು ಮಸಾಲೆಗಳೊಂದಿಗೆ ಬೆರೆಸಿದ ಪಾಪ್‌ಕಾರ್ನ್‌ಗೆ ಶೇ.12 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ ಕ್ಯಾರಮೆಲ್ ಪಾಪ್‌ಕಾರ್ನ್‌ಗೆ ಶೇ. 18 ತೆರಿಗೆ ವಿಧಿಸಲಾಗುತ್ತದೆ. ಮೊದಲೇ ಪ್ಯಾಕ್ ಮಾಡದ ಮತ್ತು ಲೇಬಲ್ ಮಾಡದ ಪಾಪ್‌ಕಾರ್ನ್‌ಗೆ ಜಿಎಸ್‌ಟಿ ತೆರಿಗೆಯನ್ನು ಶೇ. 5ರಷ್ಟು ಏರಿಸಲಾಗಿದೆ.
ಜನರಿಂದ ದುಡ್ಡು ಸುಲಿಗೆ ಮಾಡಲು ವಿಚಿತ್ರ ತಂತ್ರಗಳನ್ನು ಅನುಸರಿಸಿರುವ ಬಗ್ಗೆ ಸಾರ್ವಜನಿಕರು, ಪ್ರತಿಪಕ್ಷಗಳು ಪ್ರಶ್ನಿಸಿದರೆ ಕ್ಯಾರಮೆಲ್ ಪಾಪ್‌ಕಾರ್ನ್ ಬೆರೆಸಿದಾಗ ಅದರ ಅಗತ್ಯ ಸ್ವರೂಪವು ಸಕ್ಕರೆ ಕ್ಯಾಂಡಿಯಾಗಿ ಬದಲಾಗುತ್ತದೆ ಮತ್ತು ಆದ್ದರಿಂದ ಮೂರು ರೀತಿಯಲ್ಲಿ ಶೇ. 18 ರಷ್ಟು ಜಿಎಸ್‌ಟಿಯನ್ನು ಹೆಚ್ಚಿಸಲಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಾರೆ. ವಿಮೆ, ಮುಂತಾದವುಗಳ ಮೇಲಿನ ಜಿಎಸ್‌ಟಿ ತೆರವುಗೊಳಿಸುವುದಕ್ಕಿಂತ ಪಾಪ್‌ಕಾರ್ನ್ ಮೇಲಿನ ಜಿಎಸ್‌ಟಿ ಸರ್ಕಾರಕ್ಕೆ ಹೆಚ್ಚು ಮುಖ್ಯವಾಗಿದೆ. ದೇಶದ ಅಸ್ತವ್ಯಸ್ತ ಆರ್ಥಿಕ ನೀತಿಗಳಿಂದ ದಿನನಿತ್ಯ ಸುದ್ದಿಯಾಗುವ ನಿರ್ಮಲಾ ಸೀತಾರಾಮನ್ ಪಾಪ್‌ಕಾರ್ನ್ ಬೆಲೆ ಏರಿಕೆಯಿಂದ ಮತ್ತಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬಡವರು ಜೀವನ ನಡೆಸುವುದೇ ಕಷ್ಟವಾಗಬಹುದು. ನೀರು ಕುಡಿದರೆ ಶೇ.5 ಜಿಎಸ್‌ಟಿ, ಊಟ ಮಾಡಿದರೆ ಶೇ.10 ಜಿಎಸ್‌ಟಿ, ಇದನ್ನೆಲ್ಲ ಅರಗಿಸಿಕೊಂಡರೆ ಶೇ. 20 ಜಿಎಸ್‌ಟಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಒಂದು ರಾಷ್ಟ್ರ- ಒಂದು ಚುನಾವಣೆ – ಒಂದು ಧರ್ಮ- ಒಂದು ಭಾಷೆಯ ಬಗ್ಗೆ ಮಾತನಾಡುವ ಅರ್ಥ ಸಚಿವರು ಪಾಪ್‌ಕಾರ್ನ್ ಒಳಗೊಂಡು ಎಲ್ಲ ಪದಾರ್ಥಗಳಿಗೆ ಏಕೆ ಒಂದೇ ರೀತಿಯ ತೆರಿಗೆಯನ್ನು ವಿಧಿಸಬಾರದು ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಸಾಮಾನ್ಯ ಜನರು ಉಪಯೋಗಿಸುವ ಪಾಪ್‌ಕಾರ್ನ್‌ಗೆ ಶೇ.18 ಜಿಎಸ್‌ಟಿ ಹೇರಲಾಗಿದೆ. ಶ್ರೀಮಂತರು ಖರೀದಿಸುವ ಕಾರುಗಳು, ವಸ್ತುಗಳು, ಮುಂತಾದವುಗಳ ಮೇಲೆ ಕಡಿಮೆ ತೆರಿಗೆಯನ್ನು ವಿಧಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ವಾದ. ಸಾಮಾನ್ಯರಿಗೆ ಸರಳ ಹಾಗೂ ಸುಲಭದ ತೆರಿಗೆ ಅಗತ್ಯ ಹೊರತು, ಹೆಚ್ಚಿನ ಸುಲಿಗೆ ಮಾಡುವುದಲ್ಲ. ಒಂದೇ ಉತ್ಪನ್ನಕ್ಕೆ ಮೂರು ರೀತಿಯ ತೆರಿಗೆ ನಿಜಕ್ಕೂ ಹಗಲು ದರೋಡೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಶ್ರೀಮಂತರಿಗೆ ಬೆಣ್ಣೆ, ಬಡವರಿಗೆ ಸುಣ್ಣ: ಇದು ನಿರ್ಮಲಾ ಸೀತಾರಾಮನ್ ಆರ್ಥಿಕ ನೀತಿ
ಈ ಹಿಂದೆ ದೇಶದಲ್ಲಿ ಈರುಳ್ಳಿ ಬೆಲೆ 150 ರೂಪಾಯಿ ಸಮೀಪಕ್ಕೆ ಬಂದಾಗ ಸಂಸತ್‌ನಲ್ಲಿ ಈ ವಿಚಾರವಾಗಿ ಉತ್ತರ ನೀಡುವಾಗ ನಿರ್ಮಲಾ ಅವರು ನಾನು ಜಾಸ್ತಿ ಈರುಳ್ಳಿ ತಿನ್ನಲ್ಲ. ಈರುಳ್ಳಿ ತಿನ್ನುವ ಮನೆತನದಿಂದ ಬಂದಿಲ್ಲ ಎಂದು ನಗೆಪಾಟಲಿಗೆ ಈಡಾಗಿದ್ದರು. ಈಗ ಪಾಪ್‌ಕಾರ್ನ್ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನೂ ಸಮರ್ಥನೆ ಮಾಡಿಕೊಂಡಿದ್ದಾರೆ. ಹಣಕಾಸು ಸಚಿವರು ಏನೇ ತೀರ್ಮಾನ ತೆಗೆದುಕೊಂಡರೂ ಬೆಂಬಲಕ್ಕೆ ನಿಲ್ಲುವ ಪ್ರಧಾನಿ ಸೇರಿದಂತೆ ಮುಂಚೂಣಿ ನಾಯಕರು ದೇಶವನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿದ್ದಾರೆ.
ಪರೋಕ್ಷ ತೆರಿಗೆ – ಬಡ್ಡಿಯ ಮೂಲಕ ಬಡವರ ಸುಲಿಗೆ
ನಮ್ಮ ದೇಶದಲ್ಲಿ ವಿಧಿಸಲಾಗುವ ತೆರಿಗೆಗಳಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಮೊದಲನೆಯದು ಪ್ರತ್ಯಕ್ಷ ತೆರಿಗೆ, ಮತ್ತೊಂದು ಪರೋಕ್ಷ ತೆರಿಗೆ. ಪ್ರತ್ಯಕ್ಷ ತೆರಿಗೆಯಲ್ಲಿ ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ಜಿಎಸ್‌ಟಿ ಮುಂತಾದವುಗಳು ಇದರಲ್ಲಿ ಸೇರ್ಪಡೆಯಾಗಿವೆ. ಹಲವು ವಸ್ತು, ಪದಾರ್ಥಗಳ ಮೇಲೆ ವಿಧಿಸಲಾಗುವ ತೆರಿಗೆಗಳು ಹಾಗೂ ಮತ್ತೊಂದು ರೀತಿಯ ಜಿಎಸ್‌ಟಿ ಕೂಡ ಪರೋಕ್ಷ ತೆರಿಗೆಗಳಲ್ಲಿರುತ್ತವೆ. ವಿವಿಧ ಪರಿಕರಗಳ ಮೇಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಾರೆ ಶೇ.63 ರಷ್ಟು ಪರೋಕ್ಷ ತೆರಿಗೆಯನ್ನು ಸಂಗ್ರಹಿಸುತ್ತವೆ. ಉಳಿದ ಶೇ. 37 ರಷ್ಟು ತೆರಿಗೆಯನ್ನು ಪ್ರತ್ಯಕ್ಷ ತೆರಿಗೆಗಳಿಂದ ಕೇಂದ್ರವು ಸಂಗ್ರಹಿಸುತ್ತದೆ. ಮುಖೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ದೇಶದ ಅತಿ ಶ್ರೀಮಂತರು ನೇರ ತೆರಿಗೆಯನ್ನು ಶೇಕಡವಾರು ಸಾಧ್ಯವಾದಷ್ಟು ಕಡಿಮೆ ಪಾವತಿಸುತ್ತಾರೆ. ಇಂತಹ ಬಂಡವಾಳಶಾಹಿಗಳು ವಿವಿಧ ಮಾರ್ಗಗಳ ಮೂಲಕ ಜಿಎಸ್‌ಟಿಯಲ್ಲೂ ರಿಯಾಯಿತಿ ಪಡೆದುಕೊಳ್ಳುತ್ತಾರೆ. ಅದಲ್ಲದೆ ತೆರಿಗೆಯಲ್ಲೂ ಹಲವು ವಿನಾಯಿತಿ ನೀಡಲಾಗುತ್ತದೆ.
ನಗರ ಪ್ರದೇಶಗಳಲ್ಲಿ 15, 20 ಸಾವಿರ ರೂ.ಗಳು ಸಂಬಳ ಪಡೆಯುವ ಮಧ್ಯಮ ವರ್ಗದವರು, ದಿನಕ್ಕೆ ನೂರು, ಇನ್ನೂರು ರೂ.ಗಳು ದುಡಿಯುವ ಬಡ ವರ್ಗದವರು ತಮಗೆ ಗೊತ್ತಿಲ್ಲದ ಹಾಗೆ ಶೇ. 50 ರಿಂದ 60ರಷ್ಟು ತಮ್ಮ ಪಾಲಿನ ಹಣವನ್ನು ತಮ್ಮ ಜೀವನಕ್ಕೆ ಬೇಕಾಗುವ ಸರಕುಗಳ ಖರೀದಿ ಮುಂತಾದವುಗಳ ಮೂಲಕ ಪಾವತಿಸುತ್ತಾರೆ. ಅವರಿಗೆ ಹಣ ಉಳಿತಾಯ ಎನ್ನುವುದು ಗಗನಕುಸುಮ. ಜಿಎಸ್‌ಟಿ ವಿಚಾರಕ್ಕೆ ಬರುವುದಾದರೆ ಕೇಂದ್ರಕ್ಕೆ ಪಾವತಿಯಾಗುವ ಶೇಕಡ 100ರಷ್ಟು ತೆರಿಗೆಯಲ್ಲಿ ಶೇ.85 ರಷ್ಟು ಹಣವನ್ನು ಸಾಮಾನ್ಯ ಜನರು ಪಾವತಿಸಿದರೆ, ಶೇ.15ರಷ್ಟನ್ನು ಮಾತ್ರ ಶ್ರೀಮಂತರು, ಬಂಡವಾಳಶಾಹಿಗಳು ಪಾವತಿಸುತ್ತಾರೆ. ಸೋಪು, ಪೆನ್ನು, ತರಕಾರಿ, ಆಹಾರ ಪದಾರ್ಥ ಮುಂತಾದ ಸಾಮಗ್ರಿಗಳಿಂದ ಜಿಎಸ್‌ಟಿ ಹಾಗೂ ಪರೋಕ್ಷ ತೆರಿಗೆಯನ್ನು ಸರ್ಕಾರಗಳಿಗೆ ನೀಡುತ್ತಾರೆ. ಬಡವರಿಂದ ಪಡೆದ ಹಣವನ್ನು ಸರ್ಕಾರವು ಶ್ರೀಮಂತರ ಸಾಲ ತೀರಿಸಲು, ಅವರಿಗೆ ಅನುಕೂಲ ಮಾಡಿಕೊಡಲು, ಇಷ್ಟಕಷ್ಟಗಳನ್ನು ನೆರವೇರಿಸಲು ಬಳಸುತ್ತದೆ. ಹಣ ಇಲ್ಲದವರ ಸ್ಥಿತಿ ಏನಿದ್ದರೂ ಬಲಿಪಶುಗಳಾಗುದಷ್ಟೆ.
ಸಾಲ ಪಡೆಯುವ ವಿಷಯದಲ್ಲಿ ಸಾಮಾನ್ಯರ ಗೋಳು ಕೇಳುವವರಿಲ್ಲ. ಸಾಲ ನೀಡಿಕೆಯಲ್ಲಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು ಬಡವರು ಹಾಗೂ ಮಧ್ಯಮ ವರ್ಗದವರನ್ನು ಬಲಿಪಶುಗಳನ್ನಾಗಿ ಮಾಡುತ್ತವೆ. ಶ್ರೀಮಂತರು ಸಾಲ ಪಡೆದರೆ ಅವರು ಶೇ. 5 ರಿಂದ 6 ರಷ್ಟು ಮಾತ್ರ ಬಡ್ಡಿ ಪಾವತಿಸಬೇಕಾಗುತ್ತದೆ. ಆದರೆ ಬಡವರಿಗೆ ಸಾಲ ನೀಡಿದರೆ ಅವರು ಶೇ. 10 ರಿಂದ 14 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಸಾಮಾನ್ಯ ಜನರು ಸಾಲ ತೀರಿಸಲಿಲ್ಲವೆಂದರೆ ಜೈಲಿಗೆ ಹೋಗಬೇಕಾಗುತ್ತದೆ. ಶ್ರೀಮಂತರು ಹಣ ಪಾವತಿಸದಿದ್ದರೆ ಬ್ಯಾಂಕುಗಳು ಮಾತ್ರವಲ್ಲ, ಸರ್ಕಾರವೂ ಕೆಲವೊಮ್ಮೆ ರಕ್ಷಣೆಗೆ ಧಾವಿಸುತ್ತವೆ. ಹಣವಂತರನ್ನು ಸಾಲದಿಂದ ಮುಕ್ತಿಗೊಳಿಸುವುದು ಕೂಡ ಜನಸಾಮಾನ್ಯರು ನೀಡಿರುವ ಬಹುಪಾಲು ತೆರಿಗೆ ಹಣದಲ್ಲಿ. ಇವೆಲ್ಲ ಆರ್ಥಿಕ ಅಸಮಾನತೆಯ ಮೂಲ ಸೂತ್ರದಾರರು ನಿರ್ಮಲಾ ಸೀತಾರಾಮನ್.
ಪೆಟ್ರೋಲ್, ದಿನಸಿ, ತೆರಿಗೆ ಹೆಚ್ಚಳ ಶ್ರೀಮಂತರಿಗೆ ವಿಷಯವೇ ಆಗುವುದಿಲ್ಲ, ಆದರೆ ಸಾಮಾನ್ಯರು ಇದರಿಂದ ಭಾರಿ ಪರಿತಪಿಸಬೇಕಾಗುತ್ತದೆ. ಉಳಿತಾಯದ ದುಡ್ಡೆಲ್ಲ ಹೆಚ್ಚುವರಿ ಹಣಕ್ಕೆ ಕಡಿತಗೊಳ್ಳುತ್ತದೆ. ಹಣಕಾಸು ಸಚಿವರ ಆರ್ಥಿಕ ನಿಯಮಗಳು ಶ್ರೀಮಂತರನ್ನು ಮತ್ತಷ್ಟು ಉಳ್ಳವರನ್ನಾಗಿಸಿದರೆ, ಬಡವರನ್ನು ಸಾಲದ ಕೂಪಕ್ಕೆ ತಳ್ಳಿ ಇನ್ನಷ್ಟು ಹೈರಾಣುಗೊಳಿಸಲಾಗುತ್ತದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬಡವರಿಗೆ ಇನ್ನಷ್ಟು ಕಷ್ಟದ ದಿನಗಳು ಬರುವ ಕಾಲ ದೂರವಿಲ್ಲ.

dis is daylight robbery,in the open public.
ಬಡವರನ್ನು ನಿರ್ಮೂಲನೆಗೊಳಿಸುವ ಮಲ ಸೀತಾರಾಮನ್ ರ ನಿರ್ಮಲ ತೆರಿಗೆ ನೀತಿ