ಶಿಕ್ಷಣ ಕ್ಷೇತ್ರಕ್ಕೆ ಅಡಿಪಾಯ ಹಾಕುವ ಪ್ರಾಥಮಿಕ ಶಾಲಾ ಶಿಕ್ಷಕರ ಶ್ರಮ ಅಪರಿಮಿತ. ಅವರು ತಿದ್ದಿತೀಡಿ ಸಿದ್ಧಪಡಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರೊಫೆಸರ್ ಗಳು ಉಪನ್ಯಾಸ ಮಾಡುತ್ತಾರೆ. ಆದರೆ ಇಲ್ಲಿ ಯಾರ ಶ್ರಮಕ್ಕೆ ಬೆಲೆ ಎನ್ನುವುದಾದರೆ ಹೆಚ್ಚಿನ ವೇತನ ಪ್ರೈಮರಿ ಶಿಕ್ಷಕರಿಗೆ ನೀಡಬೇಕು ಎಂದು ಪಿಯು ಡಿಡಿಪಿಐ ಡಾ. ಬಾಲಗುರುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶುಭೋದಯ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ನಾಟ್ಯ ಸಂಭ್ರಮ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ನೈಸರ್ಗಿಕದಲ್ಲಿ ಏನೇನೆಲ್ಲಾ ಅಡಗಿದೆ. ಅದರಲ್ಲಿ ಕೇವಲ ಶೇಕಡಾ 2 ರಷ್ಟು ಮಾತ್ರ ನಾವು ಆವಿಷ್ಕಾರ ಮಾಡಿದ್ದೇವೆ. ಉಳಿದ 98 ರಷ್ಟು ಹುಡುಕಾಟಕ್ಕೆ ಶಿಕ್ಷಣ ಒಂದೇ ಮಾರ್ಗ ಎಂದು ತಿಳಿಸಿದರು.
ಶಿಕ್ಷಣದಲ್ಲಿ ಪ್ರಾಥಮಿಕ ಸಾಮಾನ್ಯ ಅರಿವು ಅತೀ ಮುಖ್ಯ. ನಮ್ಮ ಸಂಸ್ಕೃತಿ, ಪರಂಪರೆ ಮೂಲ ಕಾರಣ ತಿಳಿಯದ ಮಕ್ಕಳಿಗೆ ಕೇವಲ ಅಂಕಪಟ್ಟಿ ಶಿಕ್ಷಣ ನೀಡಿ ಒಂದು ಸೀಮಿತ ಚೌಕಟ್ಟಿಗೆ ಮೀಸಲಾಗಿಟ್ಟಿದ್ದೇವೆ. ಮಕ್ಕಳಲ್ಲಿ ಕುತೂಹಲ ಪ್ರಶ್ನೆ ಮಾಡುವ ಗುಣ ಬರಬೇಕು. ಅಲ್ಲಿ ಉತ್ತಮ ಶಿಕ್ಷಣ ಪಡೆಯುವ ಆಸಕ್ತಿ ಕಾಣುತ್ತದೆ. ಕೇವಲ ಉದ್ಯೋಗಕ್ಕೆ ಶಿಕ್ಷಣ ಆಗಬಾರದು. ಉತ್ತಮ ಬದುಕು ರೂಢಿಸಿಕೊಳ್ಳುವ ಜೊತೆಗೆ ಅರಿವಿಗೆ ಶಿಕ್ಷಣ ಪಡೆಯಬೇಕಿದೆ ಎಂದು ತಿಳಿಸಿದರು.

ಸಿಪಿಐ ಗೋಪಿನಾಥ್ ಮಾತನಾಡಿ ಮಕ್ಕಳಲ್ಲಿ ನಾಲ್ಕು ಗೋಡೆಗಳ ಶಿಕ್ಷಣ ಜೊತೆಗೆ ಹೊರಗಿನ ಪ್ರಪಂಚ ಬಗ್ಗೆ ತಿಳಿ ಹೇಳಬೇಕಿದೆ. ಜೀವನಕ್ಕೆ ಅಗತ್ಯ ಕಾನೂನು ನಿಯಮಪಾಲನೆ ಹದಿಹರೆಯದಲ್ಲಿ ಕಲಿಯಬೇಕಿದೆ. ಶಿಸ್ತು ಸಂಯಮ ಶಾಲೆಯಲ್ಲಿ ಕಲಿತಂತೆ ನಾಗರೀಕ ಸಮಾಜದಲ್ಲೂ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಿನ ಪ್ರಜೆಗಳು ಸಜ್ಜಾಗಬೇಕು ಎಂದು ಕರೆ ನೀಡಿದರು.
ಶುಭೋದಯ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಅಮರ್ ಮಾತನಾಡಿ ಗುಬ್ಬಿ ತಾಲ್ಲೂಕಿನಲ್ಲಿ ಶಿಕ್ಷಣ ಸೇವೆ ನಿರಂತರವಾಗಿ ನೀಡಿದ ಶುಭೋದಯ ಸಂಸ್ಥೆ ಇಂದಿಗೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದೆ. ಸಂಸ್ಥೆಯ ಸಂಸ್ಥಾಪಕರಾದ ರಾಜಶೇಖರ್ ಅವರ ಅಭಿಲಾಷೆಯಂತೆ ಶೈಕ್ಷಣಿಕ ಸೇವೆಯ ಜೊತೆ ಬಡ ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಸಹ ಮಾಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷೆ ಮಮತಾ ಶಿವಪ್ಪ, ಸದಸ್ಯರಾದ ಜಿ.ಆರ್.ಶಿವಕುಮಾರ್, ಬಿಆರ್ ಸಿ ಮಧುಸೂದನ್, ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಜಿಲ್ಲಾಧ್ಯಕ್ಷ ಬಸವರಾಜು, ಪ್ರಾಂಶುಪಾಲ ಗಂಗರಾಜು, ಮುಖ್ಯಶಿಕ್ಷಕ ರಾಜು ಇತರರು ಇದ್ದರು.
