ಜ್ಞಾನಪೀಠ ಪುರಸ್ಕೃತ ಮಲಯಾಳಂ ಸಾಹಿತಿ ವಾಸುದೇವನ್ ನಾಯರ್ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಬುಧವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
91 ವರ್ಷದ ವಾಸುದೇವನ್ ಅವರು ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಹೃದ್ರೋಗ ತಜ್ಞರು ಅವರಿಗೆ ಚಿಕಿತ್ಸೆ ನೀಡುತ್ತಿದ್ದರು.
ಇದನ್ನು ಓದಿದ್ದೀರಾ? ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ
ಎಂ ಟಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ಒಂಬತ್ತು ಕಾದಂಬರಿಗಳನ್ನು, 19 ಸಣ್ಣ ಕಥೆಗಳ ಸಂಗ್ರಹಗಳನ್ನು ಬರೆದಿದ್ದಾರೆ. ಆರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು 54 ಚಿತ್ರಕಥೆಗಳನ್ನು ಬರೆದಿದ್ದಾರೆ. ಏಳು ದಶಕಗಳ ವೃತ್ತಿಜೀವನದಲ್ಲಿ ಹಲವಾರು ಪ್ರಬಂಧಗಳು ಮತ್ತು ಆತ್ಮಚರಿತ್ರೆಗಳನ್ನು ಪ್ರಕಟಿಸಿದ್ದಾರೆ.
ಅವರ ಕಾದಂಬರಿ ನಾಲುಕೆಟ್ (ಪೂರ್ವಜರ ಮನೆ) ಅತೀ ಜನಪ್ರಿಯವಾಗಿದೆ. ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಶ್ರೇಷ್ಠ ಕೃತಿ ಎಂದು ಪರಿಗಣಿಸಲಾಗಿದೆ. ಅಸುರವಿತ್ತು, ಮಂಜು ಮತ್ತು ಕಾಲಂ ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದಾರೆ.
ಎಂಟಿ ಅವರ ಸಾಹಿತ್ಯಿಕ ಸಾಧನೆಗೆ ಅವರಿಗೆ 1995ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಯಲಾರ್ ಪ್ರಶಸ್ತಿ, ವಲ್ಲತ್ತೋಲ್ ಪ್ರಶಸ್ತಿ, ಎಳುತಚ್ಚನ್ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪ್ರಶಸ್ತಿ, ಮತ್ತು ಓ ಎನ್. ಸಾಹಿತ್ಯ ಪ್ರಶಸ್ತಿ ಲಭಿಸಿದೆ. 2005ರಲ್ಲಿ ಎಂಟಿ ಅವರಿಗೆ ಪದ್ಮಭೂಷಣ ಗೌರವ ಸಂದಿದೆ.
ಇದನ್ನು ಓದಿದ್ದೀರಾ? ಹರಿಯಾಣ ಮಾಜಿ ಸಿಎಂ ಓಂಪ್ರಕಾಶ್ ಚೌಟಾಲಾ ನಿಧನ
2013ರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಜೀವಮಾನದ ಸಾಧನೆಗಾಗಿ ಜೆ ಸಿ ಡೇನಿಯಲ್ ಪ್ರಶಸ್ತಿಯನ್ನು ಪಡೆದರು. ಮತ್ತು 2022ರಲ್ಲಿ ಅವರು ಕೇರಳ ಸರ್ಕಾರದಿಂದ ಉದ್ಘಾಟನಾ ಕೇರಳ ಜ್ಯೋತಿ ಪ್ರಶಸ್ತಿಯನ್ನು ಪಡೆದರು. ಹಲವಾರು ವರ್ಷಗಳ ಕಾಲ ಮಾತೃಭೂಮಿ ವಾರಪತ್ರಿಕೆಯ ಸಂಪಾದಕರಾಗಿಯೂ ಎಂ ಟಿ ಸೇವೆ ಸಲ್ಲಿಸಿದ್ದಾರೆ.
ಎಂಟಿ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
