ಲಿಂಗತ್ವ ಅಲ್ಪಸಂಖ್ಯಾತೆಯನ್ನು ಪ್ರೀತಿಸಿದ್ದ ಯುವಕ, ಆಕೆಯನ್ನು ವಿವಾಹವಾಗಲು ನಿರ್ಧರಿಸಿದ್ದನ್ನು ವಿರೋಧಿಸಿದ್ದ ಆತನ ಪೋಷಕರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ನಡೆದಿದೆ.
ಆತ್ಮಹತ್ಯೆಯಿಂದ ಸಾವನ್ನಪ್ಪಿದ ದಂಪತಿಯನ್ನು ಸುಬ್ಬಾ ರಾಯುಡು ಮತ್ತು ಸರತ್ವತಿ ಎಂದು ಹೇಳಲಾಗಿದೆ. ಅವರ ಪುತ್ರ, 24 ವರ್ಷದ ಸುನೀಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತೆಯನ್ನು ಪ್ರೀತಿಸುತ್ತಿದ್ದರು. ಆಕೆಯನ್ನು ಮದುವೆಯಾಗುವುದಾಗಿ ತನ್ನ ಪೋಷಕರ ಬಳಿ ಪ್ರಸ್ತಾಪಿಸಿದ್ದರು.
ಆತನ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಆತ ಆಕೆಯನ್ನೇ ವಿವಾಹವಾಗುವುದಾಗಿ ಹಠ ಹಿಡಿದಿದ್ದ ಎಂದು ಹೇಳಲಾಗಿದೆ. ತಮ್ಮ ಮಗ ಲಿಂಗತ್ವ ಅಲ್ಪಸಂಖ್ಯಾತೆಯನ್ನು ವಿವಾಹವಾದರೆ ನೆರೆಹೊರೆಯವರು ಜರಿಯುತ್ತಾರೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ನಂದ್ಯಾಲ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪಿ ಶ್ರೀನಿವಾಸ್ ರೆಡ್ಡಿ, “ಸಂತೋಷ್ ಕುಮಾರ್ ಅವರು ಲಿಂಗತ್ವ ಅಲ್ಪಸಂಖ್ಯಾತರ ಬಳಿಯಿದ್ದ 1.5 ರೂ.ಗಳನ್ನು ಖರ್ಚು ಮಾಡಿದ್ದರು. ಆ ಹಣವನ್ನು ಕೊಡುವಂತೆ ತನ್ನ ಪೋಷಕರಿಗೆ ಒತ್ತಾಯಿಸಿದ್ದರು. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸದಸ್ಯರೊಬ್ಬರು ಸಂತೋಷ್ ಅವರ ಪೋಷಕರನ್ನು ನಿಂದಿಸಿದ್ದರು ಇದರಿಂದ ನೊಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ” ಎಂದು ತಿಳಿಸಿದ್ದಾರೆ.
