ಬಿಹಾರ ಲೋಕಸೇವಾ ಆಯೋಗವು (ಬಿಪಿಎಸ್‌ಸಿ) ಡಿಸೆಂಬರ್ 13ರಂದು ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಪರೀಕ್ಷೆಗೂ ಮುನ್ನವೇ ಸೋರಿಕೆಯಾಗಿದ್ದವು ಎಂದು ಆರೋಪಿಸಲಾಗಿದೆ. ಹೀಗಾಗಿ, ನಡೆದಿರುವ ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ ಹಲವಾರು ಆಕಾಂಕ್ಷಿಗಳು ಬಿಹಾರದ ಪಾಟ್ನಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆ ಪ್ರತಿಭಟನಾಕಾರರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ.
ಪಾಟ್ನಾದಲ್ಲಿ ಪ್ರತಿಭಟನೆ ನಡೆಸಿದ ಆಕಾಂಕ್ಷಿಗಳಲ್ಲಿ ಕೆಲವು ಪ್ರತಿಭಟನಾಕಾರರು ಬಿಪಿಎಸ್‌ಸಿ ಕಚೇರಿಯ ಆವರಣಕ್ಕೆ ತೆರಳಲು ಪ್ರಯತ್ನಿಸಿದ್ದಾರೆ. ಈ ವೇಳೆ, ಅವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
“ಹಲವಾರು ಪ್ರತಿಭಟನಾಕಾರರು ಪಾಟ್ನಾದ ಬೈಲಿ ರಸ್ತೆಯಲ್ಲಿರುವ ಬಿಪಿಎಸ್‌ಸಿ ಕಚೇರಿ ಬಳಿ ಜಮಾಯಿಸಿದ್ದರು. ಅವರು ಬಿಪಿಎಸ್‌ಸಿ ಕಚೇರಿಯ ಆವರಣಕ್ಕೆ ತೆರಳಲು ಮುಂದಾಗಿದ್ದರು. ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಆದರೆ, ಕೆಲವರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾರಿ, ಬಿಪಿಎಸ್‌ಸಿ ಕಚೇರಿಯ ಆವರಣಕ್ಕೆ ನುಗ್ಗಿದರು. ರಸ್ತೆಯಲ್ಲಿ ಅಡ್ಡಗಟ್ಟಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಭದ್ರತಾ ಸಿಬ್ಬಂದಿ ಪದೇ ಪದೇ ಮನವಿ ಮಾಡಿದರೂ, ಪ್ರತಿಭಟನಾಕಾರರು ರಸ್ತೆ ತೆರವು ಮಾಡಲು ನಿರಾಕರಿಸಿದರು. ಅಂತಿಮವಾಗಿ, ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಲಾಯಿತು” ಎಂದು ಪಾಟ್ನಾ ಎಸ್‌ಎಸ್‌ಪಿ ರಾಜೀವ್ ಮಿಶ್ರಾ ತಿಳಿಸಿದ್ದಾರೆ.
मैंने संसद में कहा था कि जिस तरह एकलव्य का अंगूठा कटवाया गया था उसी तरह पेपर लीक करवाकर युवाओं का अंगूठा काटा जाता है।
— Rahul Gandhi (@RahulGandhi) December 26, 2024
इसका ताज़ा उदाहरण बिहार है। BPSC अभ्यार्थी पेपर लीक के ख़िलाफ़ आवाज़ उठा रहे हैं और एग्जाम को रद्द करने की मांग कर रहे हैं।
लेकिन NDA की सरकार अपनी नाकामी को… pic.twitter.com/tJLFzT7GPh
ಲಾಠಿ ಚಾರ್ಜ್‌ನಲ್ಲಿ ಇಬ್ಬರು ಅಥವಾ ಮೂವರು ಗಾಯಗೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಆದರೆ, ಆರೋಪವನ್ನು ಎಸ್‌ಎಸ್‌ಪಿ ನಿರಾಕರಿಸಿದ್ದಾರೆ.
ಡಿಸೆಂಬರ್ 20 ರಿಂದ ಆಮರಣಾಂತ ಉಪವಾಸ ನಡೆಸುತ್ತಿರುವ ಸತ್ಯಂ ಎಂಬಾತನ ಮೇಲೆಯೂ ಪೊಲೀಸರು ಲಾಠಿ ಬೀಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
“ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ನನ್ನ ತೋಳುಗಳು ಮತ್ತು ಹೊಟ್ಟೆಯ ಮೇಲೆ ತುಂಬಾ ಬಲವಾಗಿ ಹೊಡೆದರು. ನಾನು ಕುಸಿದುಬಿದ್ದು, ಪ್ರಜ್ಞಾಹೀನಳಾಗಿದ್ದೆ. ಬಳಿಕ ನನ್ನನ್ನು ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಲ್ಪನಾ ರಾಥೋಡ್ ಆರೋಪಿಸಿದ್ದಾರೆ.
ಡಿಸೆಂಬರ್ 13ರಂದು ನಡೆದಿರುವ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ರಾಜ್ಯಾದ್ಯಂತ ಮರುಪರೀಕ್ಷೆ ನಡೆಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. ಆದರೆ, BPSC ಪಾಟ್ನಾ ಕೇಂದ್ರದಲ್ಲಿ ಮಾತ್ರವೇ ಮರುಪರೀಕ್ಷೆ ನಡೆಸಲು ಮುಂದಾಗಿದ್ದು, ಜನವರಿ 4 ರಂದು ಪರೀಕ್ಷೆ ನಡೆಸಲು ನಿರ್ಧರಿಸಿದೆ.
ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ”ಏಕಲವ್ಯನ ಹೆಬ್ಬೆರಳು ಕತ್ತರಿಸಿದಂತೆಯೇ, ಪೇಪರ್ ಸೋರಿಕೆಯ ಮೂಲಕ ಯುವಕರ ಹೆಬ್ಬೆರಳು ಕತ್ತರಿಸಲಾಗುತ್ತದೆ ಎಂದು ನಾನು ಸಂಸತ್ತಿನಲ್ಲಿ ಹೇಳಿದ್ದೆ. ಇದಕ್ಕೆ ಉದಾಹರಣೆಯಾಗಿ, ಬಿಹಾರದಲ್ಲಿ BPSC ಅಭ್ಯರ್ಥಿಗಳು ಪತ್ರಿಕೆ ಸೋರಿಕೆ ವಿರುದ್ಧ ಧ್ವನಿ ಎತ್ತಿದ್ದು, ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ತನ್ನ ವೈಫಲ್ಯವನ್ನು ಮರೆಮಾಚಲು ಎನ್‌ಡಿಎ ಸರ್ಕಾರ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸುತ್ತಿದೆ. ಇದು ಅತ್ಯಂತ ನಾಚಿಕೆಗೇಡಿನ ಮತ್ತು ಖಂಡನೀಯ ಕೃತ್ಯ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ನಾವು ಸಹಿಸುವುದಿಲ್ಲ. ನಾವು ಅಭ್ಯರ್ಥಿಗಳೊಂದಿಗೆ ಇದ್ದೇವೆ. ಅವರಿಗೆ ನ್ಯಾಯ ದೊರಕಿಸಲು ಹೋರಾಟ ಮಾಡುತ್ತೇವೆ” ಎಂದು ಹೇಳಿದ್ದಾರೆ.