ಗೃಹಮಂತ್ರಿ ಅಮಿತ್ ಶಾರ ಮೇಲಿರುವ ಗುರುತರ 'ಅಂಬೇಡ್ಕರ್' ವಿವಾದದಿಂದ ಬಚಾವು ಮಾಡುವುದು, ಬಿಜೆಪಿಯೊಳಗಿನ ಒಕ್ಕಲಿಗ ನಾಯಕರನ್ನು ಎತ್ತಿಕಟ್ಟಿ ವಿಜಯೇಂದ್ರರಿಗೆ ಕೊಕ್ ಕೊಡಿಸುವುದು ಮತ್ತು ಬಿಜೆಪಿಯಲ್ಲಿ ಒಕ್ಕಲಿಗರನ್ನು ಬೆಳೆಸುತ್ತಲೇ, ಜೆಡಿಎಸ್‌ಗೆ ಹಳೇ ಮೈಸೂರು ಭಾಗದಲ್ಲಿ ನೆಲೆ ಇಲ್ಲದಂತೆ ಮಾಡುವ ಷಡ್ಯಂತ್ರ ಅಡಗಿದೆ. ಸದ್ಯಕ್ಕೆ ಸಂತೋಷ್ ಆ ನಿಟ್ಟಿನಲ್ಲಿ ಯಶಸ್ವಿಯೂ ಆಗಿದ್ದಾರೆ.
ಇಳಿವಯಸ್ಸಿನಲ್ಲೂ ಬಹು ಜಾಣ್ಮೆಯ ರಾಜಕೀಯ ನಡೆಗಳನ್ನು, ಲೆಕ್ಕಾಚಾರಗಳನ್ನು ಹಾಕಬಲ್ಲ ಮುತ್ಸದ್ಧಿ ರಾಜಕಾರಣಿ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು “ತಮ್ಮ ರಾಜಕೀಯ ಗುರುಗಳನ್ನು ನಿಮ್ಮ ರೂಪದಲ್ಲಿ ಕಾಣುತ್ತಿದ್ದೇನೆ” ಎಂದು ಹಾಡಿ ಹೊಗಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ಆಯೋಜಿಸಿದ್ದ ‘ಸುಶಾಸನ ದಿನ’ ಕಾರ್ಯಕ್ರಮದಲ್ಲಿ ಬಿ ಎಲ್ ಸಂತೋಷ್ ಅವರ ಮಾತುಗಳನ್ನು ಬಹುವಾಗಿ ಮೆಚ್ಚಿಕೊಂಡು, “ಸಂತೋಷ್ ಅವರು ಯಾವುದೇ ಅಧಿಕಾರಕ್ಕೆ ಆಸೆಪಟ್ಟವರಲ್ಲ. ಕೇಂದ್ರ, ರಾಜ್ಯದಲ್ಲಿ ಮಂತ್ರಿ ಆಗಬೇಕು ಎಂದು ಆಸೆಪಟ್ಟವರಲ್ಲ. ನಿಸ್ವಾರ್ಥದಿಂದ ಪಕ್ಷ ಕಟ್ಟುತ್ತಿದ್ದಾರೆ. ಮೊದಲ ಬಾರಿಗೆ ಅವರ ಭಾಷಣ ಕೇಳಿದ್ದೇನೆ. ಪ್ರಜಾಪ್ರಭುತ್ವದ ಬಗ್ಗೆ, ಮೋದಿ, ಶಾ ಅವರ ಬಗ್ಗೆ ಎದುರಾಳಿಗಳು ಮಾತನಾಡುತ್ತಾರೆ. ಅವರ ಮಾತು ಪೊಳ್ಳು. ಅದಕ್ಕೆ ಬೆಲೆ ಇಲ್ಲ ಎನ್ನುವುದನ್ನು ಜನರ ಮನ ಮುಟ್ಟುವಂತೆ ಮಾತಾಡಿದ್ದಾರೆ. ಮೊದಲ ಬಾರಿಗೆ ನಿಮ್ಮ ಜೊತೆ ನಾನು ವೇದಿಕೆ ಹಂಚಿಕೊಂಡಿದ್ದೇನೆ. ನಿಮ್ಮಲ್ಲಿ ಏನು ಶಕ್ತಿ ಇದೆ ಎಂದು ಅರ್ಥ ಮಾಡಿಕೊಂಡಿದ್ದೇನೆ” ಎಂದು ಓಲೈಸಿ ದೇವೇಗೌಡರು ಮಾತನಾಡಿದ್ದಾರೆ.
ಬಿ ಎಲ್ ಸಂತೋಷ್ ಅವರು ಹಿಂಬಾಗಿಲಿನ ಮೂಲಕ ಕೋಟೆ ಕಟ್ಟಿಕೊಳ್ಳುತ್ತಿರುವುದು, ಅದಕ್ಕೆ ಬೇಕಾದ ರಾಜಕೀಯ ತಂತ್ರಗಳನ್ನು ಪ್ರಯೋಗ ಮಾಡುತ್ತಿರುವುದು, ಬಿ ಎಸ್ ಯಡಿಯೂರಪ್ಪ ಕೋಟೆ ಕೆಡವಲು ಸಂಚು ರೂಪಿಸಿರುವುದು, ಬಿಜೆಪಿಯನ್ನು ಲಿಂಗಾಯತ ಸಮುದಾಯದಿಂದ ಹೊರತರಲು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಅಖಾಡದಲ್ಲಿ ಬಿಟ್ಟಿರುವುದು ದೇವೇಗೌಡರಿಗೆ ತಿಳಿಯದ ಸಂಗತಿಗಳಲ್ಲ. ಆದರೂ ದೇವೇಗೌಡರು ತಮ್ಮ ಅಂತರ್ ದೃಷ್ಟಿ ಮತ್ತು ದೂರದೃಷ್ಟಿಯನ್ನು ಅರಿವಿನಿಂದಲೇ ಮರೆಮಾಚಿ ಕಣ್ಮುಂದಿನ ಸಂಗತಿಗಳನ್ನು ಸತ್ಯವೆಂದು ಬಹಿರಂಗವಾಗಿ ಕೊಂಡಾಡುತ್ತಿದ್ದಾರೆ.
ಆರು ತಿಂಗಳ ಹಿಂದಿದ್ದ ದೇವೇಗೌಡ ಮತ್ತು ಕುಮಾರಸ್ವಾಮಿ ಈಗಿಲ್ಲ. ತಂದೆ-ಮಗ ಹಾಗೂ ಮೊಮ್ಮಕ್ಕಳಿಗೆ ಒಮ್ಮಿಂದೊಮ್ಮೆಲೆ ಜ್ಞಾನೋದಯವಾಗಿದೆ. ಆರ್‌ಎಸ್‌ಎಸ್ ಪ್ರಣೀತ ಬಿಜೆಪಿ ರಾಜಕಾರಣವನ್ನು ಟೀಕಿಸಿ ಪತ್ರಿಕೆಗಳಲ್ಲಿ ಅಂಕಣ ಬರೆದ ಕುಮಾರಸ್ವಾಮಿ ಈಗ ನಿತ್ಯ ಮೋದಿ ಜಪ ಮಾಡುತ್ತಿದ್ದಾರೆ. ಇನ್ನು, “ಮೋದಿಗೆ ದೇಶ ಮುನ್ನಡೆಸುವ ಶಕ್ತಿ, ಅನುಭವ ಇಲ್ಲ. ಗುಜರಾತ್ ಗಲಭೆ ಸಂದರ್ಭ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮೋದಿ ರಾಜಧರ್ಮ ಪಾಲಿಸಿಲ್ಲ ಎಂದು ಹೇಳಿದ್ದರು. ಬಿಜೆಪಿ ಕಟ್ಟಿ ಬೆಳೆಸಿದ್ದ ಲಾಲ್‌ಕೃಷ್ಣ ಆಡ್ವಾಣಿ ಅವರನ್ನು ಮೂಲೆಗೆ ಸೇರಿಸಿದ್ದಾರೆ. ಮಾಧ್ಯಮಗಳು, ಕಾರ್ಪೊರೇಟ್ ಸಂಸ್ಥೆಗಳಿಂದಲೇ ನಾಯಕರಾಗಿರುವ ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ತಾವು ರಾಜಕೀಯ ನಿವೃತ್ತಿ ಹೊಂದುವುದಾಗಿ” ಏಪ್ರಿಲ್ 13, 2014ರಲ್ಲಿ ಶಿವಮೊಗ್ಗದಲ್ಲಿ ಘೋಷಿಸಿದ್ದ ದೇವೇಗೌಡರು ಕೂಡ ಈಗ ಮೋದಿ ಭಜನೆ ಮಾಡುತ್ತಿದ್ದಾರೆ.

ವಾಜಪೇಯಿ ಅವರ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಅಟಲ್ ಪುರಸ್ಕಾರವನ್ನು ಬಿ ಎಲ್ ಸಂತೋಷ್ ಅವರಿಂದ ಬಹಳ ವಿನಯದಿಂದ ದೇವೇಗೌಡರು ಸ್ವೀಕರಿಸಿ ಮಾಡಿದ ಭಾಷಣ ಸುತ್ತ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಅವಕಾಶ ಮಾಡಿಕೊಡುವುದಕ್ಕಾಗಿ ಎರಡು ಮಸೂದೆಗಳನ್ನು ಸಂಸತ್ತಿನಲ್ಲಿ ಮೋದಿ ಸರ್ಕಾರ ಮಂಡಿಸಿದೆ. ‘ಒಂದು ದೇಶ, ಒಂದು ಚುನಾವಣೆ’ ಎಂಬ ಚಿಂತನೆಯನ್ನು ಜಾರಿಗೆ ತರಲು ಬಿಜೆಪಿ ಪಟ್ಟು ಹಿಡಿದಿದೆ. ಈ ಕುರಿತು ದೇಶದಾದ್ಯಂತ ವ್ಯಾಪಕ ಚರ್ಚೆ ನಡೆದಿದೆ ಮತ್ತು ಬಲವಾದ ವಿರೋಧವೂ ವ್ಯಕ್ತವಾಗಿದೆ. ಆದರೆ ಪ್ರಾದೇಶಿಕ ಪಕ್ಷದ ಅಸ್ಮಿತೆಯ ಹೋರಾಟದಲ್ಲಿ ಪ್ರಧಾನಿ ಹುದ್ದೆಗೆ ಏರಿ, ರಾಜಕೀಯ ಜೀವನ ಕಂಡುಕೊಂಡ ದೇವೇಗೌಡರು ಈ ಬಗ್ಗೆ ವೇದಿಕೆಯಲ್ಲಿ ಮತ್ತು ಹೊರಗಡೆ ತುಟಿ ಬಿಚ್ಚಲಿಲ್ಲ.
“ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ವ್ಯಸನ ಆಗಿಬಿಟ್ಟಿದೆ. ಇಷ್ಟು ಸಲ ದೇವರ ನಾಮವನ್ನು ಜಪಿಸಿದ್ದರೆ ನಿಮಗೆ ಏಳೇಳು ಜನ್ಮಗಳಲ್ಲೂ ಸ್ವರ್ಗ ಪ್ರಾಪ್ತಿಯಾಗುತಿತ್ತು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಆದರೆ, ದೇವೇಗೌಡರು, “ಪ್ರಜಾಪ್ರಭುತ್ವದ ಹೆಸರಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಳ್ಳುತ್ತಿದೆ ಎಂದರೆ ದೇಶದ ಜನರು ತಲೆ ತಗ್ಗಿಸುವಂತೆ ಮಾಡುತ್ತಿದೆ. ಅಧಿವೇಶನದಲ್ಲಿ ನಾನು ಅಮಿತ್ ಶಾ ಭಾಷಣ ಕೇಳಿದ್ದೇನೆ. ಅವರ ಭಾಷಣ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ತಪ್ಪು ಮಾಡುತ್ತಿದೆ” ಎಂದು ತಮ್ಮ ಘನತೆಯನ್ನು ನೆಲಸಮ ಮಾಡಿ ದೇವೇಗೌಡರು ಮಾತನಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಬರಿ ಮಸೀದಿ ಕೆಡವಿದಾಗಲೇ ‘ಸಾಮರಸ್ಯ’ ಸಮಾಧಿಯಾಗಿತ್ತಲ್ಲವೇ?
ಬಿಜೆಪಿಯವರು ಸಂವಿಧಾನ ಹಾಗೂ ಮೀಸಲಾತಿ ವಿರೋಧಿಗಳು ಎಂಬುದು ದೇಶವೇ ಬಲ್ಲ ಸತ್ಯ. ಜಾತಿಯ ಶ್ರೇಣಿಕೃತ ವ್ಯವಸ್ಥೆ ಸದಾಕಾಲಕ್ಕೂ ಜೀವಂತವಾಗಿರಬೇಕು ಎಂಬುದು ಆರ್‌ಎಸ್‌ಎಸ್ ಅಜೆಂಡಾ. ಸಂಘಪರಿವಾರ ಪ್ರಣೀತ ಜಾತಿ ವ್ಯಸನದ ಶ್ರೇಷ್ಠತೆಯಲ್ಲಿ ಮುಳುಗಿರುವ ಬಿಜೆಪಿ ರಾಜಕೀಯವನ್ನು ದಶಕಗಳ ಕಾಲ ರಾಜ್ಯ, ದೇಶ ಮಟ್ಟದಲ್ಲಿ ಬಲ್ಲ ದೇವೇಗೌಡರ ಆತ್ಮವಂಚನೆಯ ಮಾತುಗಳ ಹಿಂದೆ ಬೇರೊಂದು ಮರ್ಜಿ ಇದೆ. ದೇವೇಗೌಡರ ಕುಟುಂಬದ ಅಳಿವು-ಉಳಿವನ್ನೇ ಪಕ್ಷದ ತುರ್ತು ಎಂಬಂತೆ ಬಿಂಬಿಸಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಾಗಿದೆ. ಇ.ಡಿ, ಸಿಬಿಐ, ಐಟಿ ಹಾಗೂ ಮಾಧ್ಯಮ ಎಂಬ ಸಾಕು ನಾಯಿಗಳನ್ನು ಜೊತೆಯಲ್ಲಿಟ್ಟುಕೊಂಡ ಮೋದಿ-ಶಾ ಜೋಡಿಗೆ ತಮ್ಮ ವಿರುದ್ಧವಾಗಿರುವ ನಾಯಕರನ್ನು ಬಗ್ಗು ಬಡಿಯುವುದು ಕ್ಷಣ ಮಾತ್ರ ಸಾಕು ಎಂಬುದು ಮೋದಿ ಪ್ರಧಾನಿಯಾದ ಹತ್ತು ವರ್ಷದ ಇತಿಹಾಸ ಒತ್ತಿ ಹೇಳಿದೆ. ಈ ಸತ್ಯ ಬಲ್ಲ ಎಷ್ಟೋ ನಾಯಕರು ದೊರೆ ಹೇಳುವ ಮುನ್ನವೇ ಕಾಲು ಒತ್ತುವುದನ್ನು ರೂಢಿಸಿಕೊಂಡಾಗಿದೆ. ದೇವೇಗೌಡರ ಕುಟುಂಬವೂ ಈಗ ಇದಕ್ಕೆ ಹೊರತಾಗಿಲ್ಲ.
ಇಷ್ಟೇ ಅಲ್ಲ, ತಾವು ಹೆಜ್ಜೆ ಇಟ್ಟಲ್ಲೆಲ್ಲ ಮುಳ್ಳಾಗುವ ರಾಜಕೀಯ ಬದ್ಧವೈರಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅನ್ನು ಬಡಿಯಲು ಬಿಜೆಪಿಯನ್ನು ಆಶ್ರಯಿಸಿದ್ದಾರೆ. ಮುಡಾ ಪ್ರಕರಣದ ಹೋರಾಟವನ್ನು ಜೆಡಿಎಸ್‌ಗೆ ಲಾಭವಾಗುವ ರೀತಿ ಬಳಸಿಕೊಂಡರು. ಚನ್ನಪಟ್ಟಣ ಉಪಚುನಾವಣೆ ವೇಳೆ ‘ಸಿದ್ದರಾಮಯ್ಯ ಸರ್ಕಾರ ಕಿತ್ತೊಗೆಯುವರೆಗೂ ನನ್ನ ಹೋರಾಟ ನಿಲ್ಲಲ್ಲ’ ಎಂದು ದೇವೇಗೌಡರು ಬಹಿರಂಗವಾಗಿ ಹೇಳಿದ್ದು ನೋಡಿದರೆ ಕಾಂಗ್ರೆಸ್ ಬಗ್ಗೆ ಅವರೊಳಗೆ ಎಷ್ಟು ಅಸಹನೆ ಇದೆ ಎಂಬುದು ನಿಚ್ಚಳವಾಗುತ್ತದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲೇ ಕಾಲ ಕಳೆಯುತ್ತಿದ್ದ ಬಿ ಎಲ್ ಸಂತೋಷ್ ಅವರು ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ದೆಹಲಿಗೆ ಶಿಫ್ಟ್ ಆಗಿದ್ದರು. ತನ್ನ ಶಿಷ್ಯ ಸಿ ಟಿ ರವಿ ಪೊಲೀಸರಿಂದ ಬಂಧನವಾಗುತ್ತಿದ್ದಂತೆ ರಾಜ್ಯಕ್ಕೆ ದೌಡಾಯಿಸಿ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯುವ ತಂತ್ರ ಅನುಸರಿಸಿದ್ದಾರೆ. ಮಾಧ್ಯಮಗಳನ್ನು ಮುಂದಿಟ್ಟುಕೊಂಡ ಬಿ ಎಲ್ ಸಂತೋಷ್, ಅಮಿತ್ ಶಾ ಅಂಬೇಡ್ಕರ್‌ಗೆ ಮಾಡಿದ ಅವಹೇಳನದ ವಿವಾದವನ್ನು ತೆರೆಗೆ ಸರಿಸಲು ಶಕ್ತಿ ಮೀರಿ ಶ್ರಮಿಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದದಲ್ಲಿ ನಿಂದಿಸಿರುವ ಆರೋಪ ಹೊತ್ತ ಬಿಜೆಪಿ ಎಂಎಲ್‌ಸಿ ಸಿ ಟಿ ರವಿ ವಿವಾದವನ್ನು ದೊಡ್ಡದು ಮಾಡಿ ಅಮಿತ್ ಶಾ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದರು.
ಯಡಿಯೂರಪ್ಪ ಬೆಂಬಲಿತ ಲಿಂಗಾಯತ ಸಮುದಾಯದಿಂದ ಬಿಜೆಪಿಯನ್ನು ಹೊರಗೆ ತರಲು ಪಂಚಮಸಾಲಿ ಸಮುದಾಯ ಹೋರಾಟವನ್ನು ಯತ್ನಾಳ್ ಮೂಲಕ ಬಿ ಎಲ್ ಸಂತೋಷ್ ಈಗಾಗಲೇ ನಡೆಸುತ್ತಿದ್ದಾರೆ. ಹಿಂಬಾಗಿಲಿನಲ್ಲಿ ನಿಂತುಕೊಂಡು ಒಕ್ಕಲಿಗ ಸಮುದಾಯದ ಸಿ ಟಿ ರವಿ ಮತ್ತು ಅಶ್ವತ್ಥನಾರಾಯಣ ಅವರನ್ನು ವಿಜಯೇಂದ್ರನಿಗೆ ಎದುರಾಗಿ ಬೆಳೆಸುತ್ತಿರುವ ಬಿ ಎಲ್ ಸಂತೋಷ್, ಈಗಿನ ಅವಕಾಶವನ್ನು ಬಳಸಿಕೊಂಡು ಸಿ ಟಿ ರವಿ ಪ್ರಕರಣವನ್ನು ಮಾಧ್ಯಮಗಳಲ್ಲಿ ಜೀವಂತವಾಗಿಟ್ಟು, ಇನ್ನಿಲ್ಲದ ಪ್ರಚಾರ ಕೊಡಿಸಿದರು. ರಾಜ್ಯದ ದೊಡ್ಡ ನಾಯಕ ಎಂಬಂತೆ ಬಿಂಬಿಸಿದರು. ಇದು ವಿಜಯೇಂದ್ರನಿಗೆ ಕೌಂಟರ್ ಕೊಡಲಾಗುತ್ತಿದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಯಡಿಯೂರಪ್ಪ ಬಣದವರು ಪ್ರತಿಕ್ರಿಯೆಗಷ್ಟೇ ಸೀಮಿತವಾದರು.
ಬಿ ಎಲ್ ಸಂತೋಷ್ ಏಕಾಏಕಿ ಈಗ ದೇವೇಗೌಡರನ್ನು ಹೊಗಳಿ ಮಾತನಾಡಿರುವುದು ಮತ್ತು ದೇವೇಗೌಡರು ಸಂತೋಷ್ ಅವರ ಮಾತುಗಳನ್ನು ಕೊಂಡಾಡಿದ್ದು ಬರೀ ಆ ಕಾರ್ಯಕ್ರಮಕಷ್ಟೇ ಸೀಮಿತವಾಗಿಲ್ಲ. ಬಿ ಎಲ್ ಸಂತೋಷ್ ರಾಜ್ಯಕ್ಕೆ ಆಗಮಿಸಿರುವುದರ ಹಿಂದೆ, ಗೃಹಮಂತ್ರಿ ಅಮಿತ್ ಶಾರ ಮೇಲಿರುವ ಗುರುತರ ‘ಅಂಬೇಡ್ಕರ್’ ವಿವಾದದಿಂದ ಬಚಾವು ಮಾಡುವುದು, ಬಿಜೆಪಿಯೊಳಗಿನ ಒಕ್ಕಲಿಗ ನಾಯಕರನ್ನು ಎತ್ತಿಕಟ್ಟಿ ವಿಜಯೇಂದ್ರರಿಗೆ ಕೊಕ್ ಕೊಡಿಸುವುದು ಮತ್ತು ಬಿಜೆಪಿಯಲ್ಲಿ ಒಕ್ಕಲಿಗರನ್ನು ಬೆಳೆಸುತ್ತಲೇ, ಜೆಡಿಎಸ್‌ಗೆ ಹಳೇ ಮೈಸೂರು ಭಾಗದಲ್ಲಿ ನೆಲೆ ಇಲ್ಲದಂತೆ ಮಾಡುವ ಷಡ್ಯಂತ್ರ ಅಡಗಿದೆ. ಸದ್ಯಕ್ಕೆ ಸಂತೋಷ್ ಆ ನಿಟ್ಟಿನಲ್ಲಿ ಯಶಸ್ವಿಯೂ ಆಗಿದ್ದಾರೆ.
ಸೋಜಿಗದ ಸಂಗತಿ ಎಂದರೆ, ಆರ್‌ಎಸ್ಎಸ್ ಮೂಲದ ಸಂತೋಷರ ಆಟ ದೇವೇಗೌಡರಂತಹ ದೇವೇಗೌಡರಿಗೆ ಅರ್ಥವಾಗುವುದಿಲ್ಲವೇ? ಅಥವಾ ಅರ್ಥವಾಗಿದ್ದೂ ಮೋದಿ ದಾಳಿಗೆದರಿ ಅಲ್ಪರನ್ನು ಅಟ್ಟಕ್ಕೇರಿಸುತ್ತಿದ್ದಾರೆಯೇ? ಕಾಲವೇ ಹೇಳಬೇಕು…

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.