- ಪ್ರಣಾಳಿಕೆಯಲ್ಲಿ ಘೋಷಿತ ಮೊದಲ ಗ್ಯಾರಂಟಿ ಜಾರಿಗೆ ಮುಂದಾದ ಸರ್ಕಾರ
- ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣದ ಭರವಸೆ ನೀಡಿದ ಸಾರಿಗೆ ಸಚಿವ
ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟಿ ಯೋಜನೆ ಜಾರಿಗೆ ಮುಹೂರ್ತ ಕೂಡಿ ಬಂದಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ರಾಜ್ಯ ಸರ್ಕಾರ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮೇ 31 ಅಥವಾ ಜೂನ್ 1 ರಿಂದ ಮಹಿಳೆಯ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿದೆ.
ಶಾಂತಿನಗರದ ಕೆಎಸ್ಆರ್‌ಟಿಸಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಇದಕ್ಕೆ ಎಪಿಎಲ್ – ಬಿಪಿಎಲ್ ಎಂಬ ಯಾವುದೇ ನಿಬಂಧನೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಇಲಾಖೆ ಅಧಿಕಾರಿಗಳೊಂದಿಗಿನ ಸಭೆ ಬಳಿಕ ಉಚಿತ ಪ್ರಯಾಣದ ಬಗ್ಗೆ ಮಾಹಿತಿ ನೀಡಿದ ಅವರು, ಇಂದಿನ ಸಭೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸುತ್ತೇವೆ. ಅವರು ಅಂತಿಮ ಕ್ರಮ ಕೈಗೊಳ್ಳುತ್ತಾರೆ ಎಂದರು.
ಈ ಯೋಜನೆ ಪ್ರತಿ ವರ್ಷ ಅಂದಾಜು 3,200 ಕೋಟಿ ಹಣ ಬೇಕಾಗುತ್ತದೆ. ಸಾರಿಗೆ ಇಲಾಖೆಯ ನಾಲ್ಕು ನಿಗಮಗಳು ನಷ್ಟದಲ್ಲಿರುವ ಹಿನ್ನೆಲೆ ಸರ್ಕಾರ ಸಹಾಯಧನ ನೀಡಿದರೆ ಯೋಜನೆ ಜಾರಿಗೆ ಮಾಡಲು ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಸಾರಿಗೆ ಸಚಿವರು ತಿಳಿಸಿದರು.
ನಾಲ್ಕು ನಿಗಮಗಳಲ್ಲಿ ನೌಕರರ ಸಂಖ್ಯೆ ಕಡಿಮೆ ಇದೆ. ಮೊದಲು ಈ ಕಾರ್ಯಕ್ಕೆ ಒತ್ತು ಕೊಟ್ಟು ನೇಮಕಾತಿ ಮಾಡಿಕೊಳ್ಳಬೇಕು. ಬಸ್ಸುಗಳ ಸಂಖ್ಯೆ ಕೂಡ ತುಂಬಾ ಕಡಿಮೆ ಇದೆ. ಇದನ್ನು ಹೆಚ್ಚಳ ಮಾಡಬೇಕು. ಆರ್ಥಿಕ ಪರಿಸ್ಥಿತಿ, ಕೋವಿಡ್ ವೇಳೆ ಆಗಿರುವ ನಷ್ಟ, ಹಾಗೂ ಇದರಿಂದ ನೌಕರರ ನೇಮಕ್ಕೆ ಆಗಿದ್ದ ತಡೆ ವಿಚಾರದ ಬಗೆಗೂ ಗಮನಹರಿಸಬೇಕಿದೆ.
ಹಾಗೆಯೇ ಹೊಸ ಬಸ್ ಗಳ ಸಂಚಾರಕ್ಕೆ ಎಲ್ಲೆಲ್ಲಿ ತೊಂದರೆ ಇದೆ. ಇವೆಲ್ಲವುಗಳ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗಿದೆ. ಅಗತ್ಯಕ್ಕೆ ಅನುಸಾರವಾಗಿ ಹೊಸ ಬಸ್‌ಗಳನ್ನು ಎಲ್ಲ ನಿಗಮಗಳಿಗೆ ಸೇರ್ಪಡೆ ಮಾಡುತ್ತೇವೆ ಎಂದವರು ತಿಳಿಸಿದರು.
ನಾಲ್ಕು ಸಾರಿಗೆ ಸಂಸ್ಥೆಗಳ ವಿಭಾಗಗಳಿಂದ 240 ಘಟಕಗಳಿವೆ. ಒಟ್ಟು 23,978 ವಾಹನಗಳಿವೆ. 1 ಲಕ್ಷ 4,450 ಸಿಬ್ಬಂದಿಗಳಿದ್ದಾರೆ.
ಕೆಎಸ್ಆರ್ಟಿಸಿಯಲ್ಲಿ 918 ಬಸ್‌ಗಳಿವೆ. ಬಿಎಂಟಿಸಿಯಲ್ಲಿ 1894 ಬಸ್ಗಳು, ಕಿತ್ತೂರು ಕರ್ನಾಟಕ ಭಾಗದ ಸಾರಿಗೆ ಸಂಸ್ಥೆಯಲ್ಲಿ ಆರುನೂರು ಬಸ್ ಗಳು, ಕಲ್ಯಾಣ ಕರ್ನಾಟಕ ಭಾಗದಲ್ಲಿ 850 ಸೇರಿ ಒಟ್ಟು 4250 ಹೊಸ ಬಸ್‌ಗಳಿವೆ.
ಕೇಂದ್ರ ಸರ್ಕಾರ 15 ವರ್ಷ ಆಗಿರುವ ಬಸ್ ಗಳಿಗೆ ಎಫ್‌ಸಿ ಕೊಡದಂತೆ ನಿರ್ಬಂಧಿಸಿದೆ. ಹಾಗಾಗಿ ಹೊಸ ಬಸ್ ಗಳ ಖರೀದಿ ಮಾಡಬೇಕಿದೆ ಎಂದರು. ಸಾರಿಗೆ ಬಸ್ ಗಳಲ್ಲಿ ಪ್ರತಿದಿನ 85,054 ಮ೦ದಿ ಪ್ರಯಾಣ ಮಾಡುತ್ತಾರೆ.
ಪ್ರತಿ ದಿನ 23.13 ಕೋಟಿ ರೂಪಾಯಿ ಆದಾಯ ಬರುತ್ತಿದೆ. ವಾರ್ಷಿಕ ಆದಾಯ 8946 ಕೋಟಿ ರೂಪಾಯಿಗಳಾಗಿದೆ. ನಾಲ್ಕು ಸಾರಿಗೆ ನಿಗಮಗಳಲ್ಲಿನ ಕಾರ್ಯಾಚರಣೆ ವೆಚ್ಚ ಹಾಗೂ ಆದಾಯದ ನಡುವೆ 100 ಕೋಟಿ ರೂಪಾಯಿ ನಷ್ಟವಾಗಬಹುದು ಎಂದರು.
ನಾಳೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು. ಉಚಿತ ಪ್ರಯಾಣ ಸೌಲಭ್ಯದಿಂದ ದೈನಂದಿನ ಆದಾಯ 23 ಕೋಟಿ ರೂಪಾಯಿಯಲ್ಲಿ ಅರ್ಧದಷ್ಟು ಕಡಿಮೆಯಾಗಬಹುದು. ಸುಮಾರು 13 ಕೋಟಿ ಹೊರೆಯಾಗಬಹುದು.
ಈ ಸುದ್ದಿ ಓದಿದ್ದೀರಾ:ಮುಖ್ಯಮಂತ್ರಿಗಳೇ ಜನರಿಗೆ ನೇರವಾಗಿ ಗ್ಯಾರಂಟಿ ಖಾತರಿ ಬಗ್ಗೆ ಹೇಳಲಿ: ಮಾಜಿ ಸಿಎಂ ಎಚ್‌ಡಿಕೆ ಒತ್ತಾಯ
ಸಾರಿಗೆ ಸಂಸ್ಥೆಗಳು ದೈನಂದಿನ ಡಿಸೆಲ್‌ಗೆ 15 ಕೋಟಿ ರೂಪಾಯಿ ಖರ್ಚು ಮಾಡುತ್ತಿವೆ. ಡಿಸೆಲ್ ಬಿಲ್ ಅನ್ನು ಹದಿನೈದು ದಿನಕ್ಕೊಮ್ಮೆ ಪಾವತಿಸಲಾಗುತ್ತಿದೆ. ಉಚಿತ ಪ್ರಯಾಣದಿಂದ ಹೊರೆಯಾಗುವ ಮೊತ್ತವನ್ನು ಭರಿಸಲು ಸರ್ಕಾರದೊಂದಿಗೆ ಲಿಖಿತ ಒಪ್ಪಂದ ಮಾಡಿಕೊಳ್ಳಲಾಗುವುದು. ಕಾಲಕಾಲಕ್ಕೆ ಡಿಸೆಲ್ ಬಿಲ್ ಪಾವತಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಗ್ಯಾರಂಟಿ ಜಾರಿಯಾಗದಿದ್ದರೆ ಪ್ರತಿಭಟನೆ ಮಾಡುವುದಾಗಿ ಹೇಳಿಕೊಂಡಿದ್ದ ಬಿಜೆಪಿ ನಿರ್ಧಾರದ ಬಗ್ಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಜೆಪಿಯವರಿಗೆ ಪ್ರತಿಭಟನೆ ಮಾಡಲು ಅವಕಾಶ ಕೊಡುವುದಿಲ್ಲ. ಜನ ಬಿಜೆಪಿಗೆ ರೆಸ್ಟ್ ಮಾಡಲು ಹೇಳಿದ್ದಾರೆ. ಅವರು ಮನೆಯಲ್ಲಿ ರೆಸ್ಟ್ ಮಾಡಲಿ ಎಂದು ಸಚಿವರು ಹೇಳಿದರು.