ರಾಯಚೂರು ನಗರಕ್ಕೆ ಏಮ್ಸ್ ಆರೋಗ್ಯ ಸಂಸ್ಥೆ ಸ್ಥಾಪಿಸುವಂತೆ ಒತ್ತಾಯಿಸಿ ಜಿಲ್ಲಾ ಏಮ್ಸ್ ಸಮಿತಿಯು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ರಾಯಚೂರು ನಗರಕ್ಕೆ ಸಚಿವರು ಆಗಮಿಸಿದ ವೇಳೆ ಮನವಿ ಸಲ್ಲಿಸಿದ ಅವರು, “ಏಮ್ಸ್ ಆರೋಗ್ಯ ಸಂಸ್ಥೆ ಮಂಜೂರಾತಿಗಾಗಿ ಸುದೀರ್ಘ 960 ದಿನಗಳಿಂದ ಹೋರಾಟ ನಡೆದಿದ್ದು, ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರೊಂದಿಗೆ ಚರ್ಚಿಸಿ ಮಂಜೂರು ಮಾಡಿಸುವಲ್ಲಿ ತಾವು ನಿರ್ಣಾಯಕ ಪಾತ್ರ ವಹಿಸಬೇಕು” ಎಂದು ಮನವಿ ಮಾಡಿಕೊಂಡರು.
“ಶಿಕ್ಷಣದಲ್ಲಿ ಜಿಲ್ಲೆಯು ಹಿಂದುಳಿದ ಭಾಗವಾಗಿದ್ದ ಕಾರಣಕ್ಕೆ ಐಐಟಿ ಮಂಜೂರಾಗಿತ್ತು. ಆದರೂ ಇದನ್ನು ಧಾರವಾಡ ಜಿಲ್ಲೆಗೆ ಸ್ಥಳಾಂತರಿಸಿದರು. ಜಿಲ್ಲೆಗೆ ಏಮ್ಸ್ ಸಂಸ್ಥೆಯನ್ನಾದರೂ ನೀಡಬೇಕು” ಎಂದು ಸಮಿತಿಯು ಮುಖಂಡರು ಕೋರಿದರು.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ವಿಜಯಕುಮಾರ್ ಮಾತನಾಡಿ, “ಏಮ್ಸ್ ಆರೋಗ್ಯ ಸಂಸ್ಥೆ ಸ್ಥಾಪನೆಗಾಗಿ ಸುದೀರ್ಘ ಹೋರಾಟ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ನಾನು ಆದಷ್ಟು ಶೀಘ್ರದಲ್ಲಿಯೇ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ರಾಯಚೂರಿನಲ್ಲಿ ಏಮ್ಸ್ ಆರೋಗ್ಯ ಸಂಸ್ಥೆ ಸ್ಥಾಪಿಸುವ ಬಗ್ಗೆ ಚರ್ಚಿಸುತ್ತೇನೆ” ಎಂದು ಏಮ್ಸ್ ಹೋರಾಟಗಾರರಿಗೆ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಮಹಿಳೆಯರು ವಿಶೇಷ ತರಬೇತಿ ಪಡೆದು ಸ್ವಾವಲಂಬಿಯಾಗಬೇಕು: ಡಾ. ದೇವಾನಂದ ದೊಡ್ಡಮನಿ
ಈ ಸಂದರ್ಭದಲ್ಲಿ ನಗರ ಶಾಸಕ ಡಾ ಶಿವರಾಜ ಪಾಟೀಲ್, ಜಿಲ್ಲಾಧಿಕಾರಿಗಳು ಮತ್ತು ಏಮ್ಸ್ ಹೋರಾಟ ಸಮಿತಿ ಸಂಚಾಲಕ ಡಾ. ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ಜಾನ್ ವೆಸ್ಲಿ, ಎಂ ಆರ್ ಭೇರಿ, ಜಗದೀಶ್ ಪಾಟೀಲ್ ಪೂರತಿಪ್ಪಲಿ, ವಿನಯ್ ಕುಮಾರ್ ಚಿತ್ರಗಾರ, ಡಾ ಎಸ್ ಎಸ್ ಪಾಟೀಲ್ ಮುಂತಾದವರು ಇದ್ದರು.
