ಬೀದರ್ ಹೊರವಲಯದ ನಂದಿನಗರದಲ್ಲಿರುವ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜನವರಿ 17 ರಿಂದ 19 ರವರೆಗೆ ನಡೆಯುವ ಜಾನುವಾರು ಕುಕ್ಕುಟ ಮತ್ತು ಮತ್ಸ್ಯಮೇಳ-2025ರ ಸದುಪಯೋಗವನ್ನು ರೈತರು, ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು.
ʼಈ ಮೇಳದಲ್ಲಿ ಜಾನುವಾರು ಮತ್ತು ಕುಕ್ಕಟ ತಳಿಗಳ ಪ್ರದರ್ಶನ, ಶ್ವಾನ ಪ್ರದರ್ಶನ, ಸಣ್ಣ ಮತ್ತು ಮುದ್ದು ಪ್ರಾಣಿ ಪಕ್ಷಿಗಳ ಪ್ರದರ್ಶನ, ಮೀನು ತಳಿಗಳು, ಅಲಂಕಾರಿಕ ಮೀನುಗಳ ಪ್ರದರ್ಶನ, ಮಾದ್ಯವರ್ಧಿತ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರದರ್ಶನ, ವಿವಿಧ ಹೊಸ ತಂತ್ರಜ್ಞಾನಗಳ ಯಂತ್ರೋಪಕರಣಗಳ ಪ್ರದರ್ಶನ ಇರುವುದರಿಂದ ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಮೇಳದಲ್ಲಿ ರೈತರು ಭಾಗವಹಿಸುವಂತೆ ನೋಡಿಕೊಳ್ಳಬೇಕುʼ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಇಲಾಖೆಗಳಿಂದ 15-20 ಮಳಿಗೆಗಳನ್ನು ನಿರ್ಮಿಸಿ ಎನ್‌ಆರ್‌ಎಲ್‌ಎಂ ಮತ್ತು ಮಹಿಳಾ ರೈತರಿಗೆ ಶಕ್ತಿ ಯೋಜನೆಯಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯತಿಗಳಿಂದ ಹೆಚ್ಚಿನ ಪ್ರಚಾರ ನೀಡಿ ರೈತರಿಗೆ ಸೇರಿಸಬೇಕು. ಈ ಮೇಳದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಮಾಡಬೇಕು ಮತ್ತು ಶಾಲೆಗಳ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯ ಬೀದರನ ವಿಸ್ತರಣಾ ನಿರ್ದೇಶಕ ಡಾ.ಬಸವರಾಜು ಅವಟಿ ಮಾತನಾಡಿ, ʼಕಾರ್ಯಕ್ರಮದ ಉದ್ದೇಶಗಳು ಮತ್ತು ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇರುವ ಪ್ರಾಮುಖ್ಯತೆಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಜಾನುವಾರು ಕುಕ್ಕುಟ ಮತ್ತು ಮತ್ಸ್ಯಮೇಳ-2025ರ ಪೋಸ್ಟರ ಬಿಡುಗಡೆಗೊಳಿಸಿದರು.
ಈ ಸುದ್ದಿ ಓದಿದ್ದೀರಾ? ಪ್ರಿಯಾಂಕ್ ಖರ್ಗೆ ಆಪ್ತನಿಂದ ಬೆದರಿಕೆ ಪ್ರಕರಣ; ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳ ಅಮಾನತು
ಕಾರ್ಯಕ್ರಮದಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ.ಚನ್ನಪ್ಪಗೌಡ ಬಿರಾದಾರ, ಪ್ರಾದ್ಯಾಪಕರಾದ ಡಾ.ಎಂ.ಕೆ.ತಾಂದಳೆ, ಡಾ.ಶ್ರೀಕಾಂತ ಕುಲಕರ್ಣಿ, ಸಹ ಪ್ರಾಧ್ಯಾಪಕರಾದ ಡಾ.ಪ್ರಕಾಶ ಕುಮಾರ ರಾಠೋಡ, ಡಾ.ವೆಂಕನಗೌಡ, ಡಾ.ಅಕ್ಷಯಕುಮಾರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ನರಸಪ್ಪ, ಡಾ.ಗೌತಮ ಅರಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.