ಹೊಸ ವರ್ಷ ಸಂದರ್ಭದಲ್ಲಿ ಮಾರಾಟ ಮಾಡಿ, ಹೆಚ್ಚಿನ ಹಣ ಗಳಿಸಲು ಸಂಗ್ರಹಿಸಿ ಇಡಲಾಗಿದ್ದ ನಶೆ ಗುಳಿಗೆ, ಸಿರಪ್‌ಗಳನ್ನು ನಗರದ ಗಾಂಧಿ ಗಂಜ್ ಪೊಲೀಸರು ಜಪ್ತಿ ಮಾಡಿ, ಶುಕ್ರವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗುರುವಾರ (ಡಿ.26)ರಂದು ನಗರದ ಹಾರೂರಗೇರಿ-ಲಾಡಗೇರಿ ರಸ್ತೆಯಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಗೆ ನಾರ್ಕೊಟಿಕ್ ಅಂಶ ಇರುವ ಗುಳಿಗೆ ಮತ್ತು ಸಿರ್‌ಪ್‌ಗಳು ಮಾರಾಟ ಮಾಡುತಿದ್ದ. ಖಚಿತ ಮಾಹಿತಿ ಮೇರೆಗೆ ಗಾಂಧಿ ಗಂಜ್ ಠಾಣೆಯ ಸಿಪಿಐ ಹನುಮರೆಡ್ಡೆಪ್ಪ ನೇತ್ರತ್ವದಲ್ಲಿ ದಾಳಿ ನಡೆಸಿ ನಶೆ ವಸ್ತುಗಳನ್ನು ಜಪ್ತಿ ಮಾಡಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಶದಿಂದ ಹಾಗೂ ಮನೆಯಲ್ಲಿದ್ದ ಒಟ್ಟು ₹1.29 ಲಕ್ಷ ಮೌಲ್ಯದ 584 ನಶೆ ತರಿಸುವ ನಾರ್ಕೋಟಿಕ್ ಸಿರಪ್ ಬಾಟಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಶೆಯುಕ್ತ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಿದ ಬಳಿಕ ಹೆಚ್ಚಿನ ವಿಚಾರಣೆಗೆ ಒಪಡಿಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇವುಗಳನ್ನು ನಿಗದಿತ ದರಕ್ಕಿಂತ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು ಎಂದು ಎಸ್ಪಿ ಪ್ರದೀಪ ಗುಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೆಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮೀನಕೇರಾ ಗ್ರಾಮದ ಬೊಮ್ಮಗೊಂಡೇಶ್ವರ ವೃತ್ತ ಹತ್ತಿರ ಓರ್ವ ವ್ಯಕ್ತಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮನ್ನಾಏಖೆಳ್ಳಿ ಠಾಣೆ ಪಿಎಸ್‌ಐ ಮಹೇಂದ್ರಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿತನಿಂದ ₹1.50 ಲಕ್ಷ ಮೌಲ್ಯದ ಒಂದೂವರೆ ಕೆಜಿ ಗಾಂಜಾ ಜಪ್ತಿ ಮಾಡಿ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಿಯಾಂಕ್ ಖರ್ಗೆ ಆಪ್ತನಿಂದ ಬೆದರಿಕೆ ಪ್ರಕರಣ; ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳ ಅಮಾನತು
ಪತ್ರಿಗೋಷ್ಠಿಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್, ಚಂದ್ರಕಾಂತ ಪೂಜಾರಿ, ಡಿಎಆರ್ ಡಿವೈಎಸ್ಪಿ ಶರಣಬಸಪ್ಪ ಕೂಡ್ಲಿ, ಗಾಂಧಿ ಗಂಜ್ ಠಾಣೆ ಸಿಪಿಐ ಹನುಮರೆಡ್ಡೆಪ್ಪ, ಚಿಟಗುಪ್ಪ ಠಾಣೆ ಸಿಪಿಐ ಶ್ರೀನಿವಾಸ ಅಲ್ಲಾಪುರೆ ಸೇರಿದಂತೆ ಮತ್ತಿತರರು ಹಾಜರಿದ್ದರು.