ಲೇಖನಿಯನ್ನು ಪರಿಣಾಮಕಾರಿಯಾಗಿ ಬಳಸಿ ದೇಶವನ್ನು ಮುನ್ನಡೆಸಿದ ಅಪ್ರತಿಮ ಪ್ರಧಾನಿ, ಮಹಾತ್ಮಗಾಂಧಿ ನರೇಗಾ ಕ್ರಾಂತಿಯ ಮೂಲಕ ಬಡವರ ಒಡಲಿಗೆ ಅನ್ನ ಕಲ್ಪಿಸಿಕೊಟ್ಟ ಜ್ಞಾನಮೌನಿ ಡಾ. ಮನಮೋಹನ್ ಸಿಂಗ್ ಎಂದು ಮಾಜಿ ಶಾಸಕ ಕೆ ಎಸ್ ಕಿರಣ ಕುಮಾರ್ ಸ್ಮರಿಸಿದರು.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ ಮಾಡಿ, ಮಾತನಾಡಿದರು.
“ಅಬ್ಬರದ ಭಾಷಣ ಮಾಡುವವರು ಮಾತ್ರವೇ ದೇಶದ ನಾಯಕರಲ್ಲ. ತಮ್ಮ ಬಳಿಯಿರುವ ಲೇಖನಿಯ ಪರಿಣಾಮಕಾರಿ ಸದ್ಬಳಕೆಯಿಂದ ದೇಶ ಮುನ್ನಡೆಸುವ ಸಾಮರ್ಥ್ಯ ಹೊಂದಿದವರೇ ನಿಜವಾದ ಜನನಾಯಕರು. ಹಳಿ ತಪ್ಪಿದ್ದ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಮತ್ತೆ ಆರ್ಥಿಕ ಪ್ರಗತಿಯ ಗತಿಶೀಲತೆಯನ್ನು ತಂದುಕೊಟ್ಟಂಥವರು ಡಾ. ಮನಮೋಹನ್ ಸಿಂಗ್’. ಅವರು ಪ್ರಧಾನಿಯಾಗಿದ್ದಾಗ, ಹೊರಗೆ ಅಡಮಾನ ಇಟ್ಟಿದ್ದ ದೇಶದ ಚಿನ್ನವನ್ನು ಮತ್ತೆ ದೇಶಕ್ಕೆ ಮರಳಿ ಗಳಿಸಿಕೊಟ್ಟರು. ಪ್ರಪ್ರಥಮವಾಗಿ ₹71 ಸಾವಿರ ಕೋಟಿಗಳಷ್ಟು ರೈತರ ಸಾಲಮನ್ನಾ ಮಾಡಿದ ಮೌನದಿರಿಸಿನ ಧೀರ ವ್ಯಕ್ತಿತ್ವ ಡಾ ಮನಮೋಹನ್ ಸಿಂಗ್’ರವರದು. ಅಬ್ಬರದ ಭಾಷಣ ಮಾಡುತ್ತ, ಜನರನ್ನು ಮರುಳು ಮಾಡುತ್ತ ಕಾಲತಳ್ಳುವ ವ್ಯಕ್ತಿ ಅವರಾಗಿರಲಿಲ್ಲ. ಮಾತಾಡದೇ ಕೆಲಸ ಮಾಡುತ್ತ ದೇಶದ ಜನರ ಬದುಕು-ಭವಿಷ್ಯ ಎರಡನ್ನೂ ಸುಭದ್ರಗೊಳಿಸಲು ಅವಿರತ ಪ್ರಯತ್ನಿಸುತ್ತಿದ್ದವರು. ಅವರ ನಿಧನದಿಂದ ದೇಶ ನಿಜಕ್ಕೂ ಇಂದು ಬಡವಾಗಿದೆ” ಎಂದು ವಿಷಾದಿಸಿದರು.
ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ ಡಿ ಚಂದ್ರಶೇಖರ್ ಮಾತನಾಡಿ, “ಗ್ರಾಮೀಣ ಪ್ರದೇಶದ ಆರೋಗ್ಯ ಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ ಜಾರಿಗೆ ತಂದಂತಹ ಮಹಾವ್ಯಕ್ತಿ ಡಾ ಮನಮೋಹನ್ ಸಿಂಗ್. ಜನ-ಸಾಮಾನ್ಯರ ಕೈಗೆ ಅಸಾಮಾನ್ಯ ಬಲ ತಂದುಕೊಟ್ಟಂತಹ ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆಗಳನ್ನು ದೇಶಕ್ಕೆ ಕೊಟ್ಟ ಶ್ರೇಯಸ್ಸು ಡಾ ಸಿಂಗ್’ ಅವರದ್ದು. ಬಡವರಿಗಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಜಾರಿಗೆ ತಂದು, ವರ್ಷವಿಡೀ ಯಾರಿಗೂ ಅನ್ನಾಹಾರಗಳ ಕೊರತೆ ಎದುರಾಗದಂತೆ ಕಾಳಜಿ ವಹಿಸಿದ್ದರು. ತಮ್ಮ ಅಧಿಕಾರಾವಧಿಯ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಅವರೊಬ್ಬ ಮಹಾನ್ ಆರ್ಥಿಕ ತಜ್ಞರಾಗಿದ್ದರು” ಎಂದು ನೆನಪಿಸಿಕೊಂಡರು.

“ಮಾರುತಿ ಕಾರು ಎಂದರೆ, ಅವರಿಗೆ ಅತಿಯಾದ ಪ್ರೀತಿ. ಆಗೆಲ್ಲ ಕೇವಲ ಮಾರುತಿ ಕಾರು ಮಾತ್ರ ಕಾಣಿಸುತ್ತಿದ್ದ ಇಂಡಿಯಾದ ರಸ್ತೆಗಳಲ್ಲಿ, ನೂರಾರು ಮಾದರಿಯ ಬೇರೆ ಬೇರೆ ಕಾರುಗಳೂ ಕಾಣುವಷ್ಟರ ಮಟ್ಟಿಗೆ, ದೇಶದ ವಾಹನ ಉತ್ಪಾದನಾ ಕ್ಷೇತ್ರಕ್ಕೂ ಒತ್ತು ಕೊಟ್ಟವರು. ಕಂಪ್ಯೂಟರ್, ಮೊಬೈಲ್, ಟ್ಯಾಬ್ ಇತ್ಯಾದಿ ಗ್ಯಾಜೆಟ್‌ಗಳು ದೇಶದ ಜನರಿಗೆ ಸುಲಭ ದರಗಳಲ್ಲಿ ದೊರೆಯುವಂತೆ ಮಾಡಿದ್ದ ಆರ್ಥಿಕ ಕ್ಷೇತ್ರದ ಅಪರೂಪದ ಸಾಧಕ. ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿ ನಲುಗುತ್ತಿದ್ದಾಗ, ಆ ಎಲ್ಲ ಆರ್ಥಿಕ ಸಂಕಟಗಳಿಗೆ ದೇಶ ಬಲಿಯಾಗದಂತೆ ಎಚ್ಚರವಹಿಸಿ ಭಾರತವನ್ನು ಕಾಪಾಡಿಕೊಂಡ ಮೌನ ಕ್ರಾಂತಿಕಾರ. ದೇಶದ ಜನರಿಗೆ ಸುಗಮವಾಗಿ ಸಕಾಲದಲ್ಲಿ ಸೇವೆಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಆಧಾರ್ ಕಾರ್ಡ್ ತಂದ ಪ್ರವರ್ತಕರು. ಅವರನ್ನು ಮೌನಿ ಮೌನಿ ಎಂದು ಮೂದಲಿಸಿ ಜರೆಯುತ್ತಿದ್ದ ವಿರೋಧಿಗಳೂ ಕೂಡ ಇಂದು, ಡಾ. ಸಿಂಗ್ ಸಾಹೇಬರು, ದೇಶಕ್ಕೆ ನೀಡಿರುವ ಅತ್ಯಮೂಲ್ಯ ಕೊಡುಗೆಗಳನ್ನು ಎಣಿಸುತ್ತ ಕೂತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇಶದ ಅಪ್ರತಿಮ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ
ಹುಳಿಯಾರ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ ಟಿ ಚಿಕ್ಕಣ್ಣ, ರಾಜ್ಯ ಸೇವಾದಳದ ಕಾರ್ಯದರ್ಶಿ ಕೆ ಜಿ ಕೃಷ್ಣೆಗೌಡ, ಬಗರ್ ಹುಕುಂ ಸಮಿತಿ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ಪುರಸಭೆ ಸದಸ್ಯ ಸುಗಂಧರಾಜು, ಕೆಂಪಮ್ಮ, ಪುರಸಭೆ ಆಶ್ರಯ ಸಮಿತಿ ಸದಸ್ಯ ಸಿ ಕೆ ಪೀರ್ ಪಾಷಾ, ಸೇವಾದಳ ಅಧ್ಯಕ್ಷರಾದ ಗೋವಿಂದರಾಜು, ಸಣ್ಣತಾಯಮ್ಮ, ಜಾಣೆಹಾರ್ ಬಸವರಾಜ್, ಕೆಡಿಪಿ ಸದಸ್ಯ ರಾಮಚಂದ್ರಯ್ಯ, ಗ್ಯಾರಂಟಿ ಸಮಿತಿ ಸದಸ್ಯರಾದ ರೇಣುಕಾಸ್ವಾಮಿ, ಚಂದ್ರಯ್ಯ, ಓಂಕಾರಮೂರ್ತಿ, ಸಿದ್ದರಾಮಯ್ಯ, ಅಗಸರಹಳ್ಳಿ ನರಸಿಂಮೂರ್ತಿ, ಸೇವಾದಳದ ಮಾಜಿ ಜಿಲ್ಲಾಧ್ಯಕ್ಷ ನಿಶಾನಿ ಕಿರಣ್, ರಾಜು ಕರಿಯಪ್ಪ, ನೀಲಕಂಠಯ್ಯ, ದರ್ಘಾ ಜಾವೇದ್, ಚಿ ನಾ ಹಳ್ಳಿ ಜ಼ಾಕಿರ್ ಹುಸೇನ್, ಹೊನ್ನೇಬಾಗಿ ಜಾಫರ್, ಪ್ರಸನ್ನಕುಮಾರ್ ಸೇರಿದಂತೆ ಬಹುತೇಕರು ಇದ್ದರು.
ವರದಿ : ಸಂಚಲನ, ಚಿಕ್ಕನಾಯಕನ ಸೀಮೆಯಿಂದ