ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಂಸತ್ ಅಧಿವೇಶನದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಮಾತನಾಡಿರುವ ನಿಂದನಾತ್ಮಕ, ಅವಮಾನಕಾರಿ ಹೇಳಿಕೆಯನ್ನು ಖಂಡಿಸಿ ದಾವಣಗೆರೆಯಲ್ಲಿ ಮುಸ್ಲಿಂ ಒಕ್ಕೂಟ ಪ್ರತಿಭಟನೆ ನಡೆಸಿ ಅಮಿತ್ ಶಾ ರಾಜೀನಾಮೆ ಮತ್ತು ಗಡಿಪಾರಿಗೆ ಒತ್ತಾಯಿಸಿತು.
ದಾವಣಗೆರೆ ನಗರದ ಅಂಬೇಡ್ಕರ್ ವೃತ್ತದಿಂದ, ಜಯದೇವ ವೃತ್ತ ಮತ್ತು ಗಾಂಧಿ ವೃತ್ತದ ಮೂಲಕ ಉಪವಿಭಾಗಾಧಿಕಾರಿ ಕಚೇರಿವರೆಗೆ ಸಾಗಿದ ಪ್ರತಿಭಟನಾಕಾರರು ಅಮಿತ್ ಶಾ ವಜಾಕ್ಕೆ ಆಗ್ರಹಿಸಿ, ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಮುಸ್ಲಿಂ ಒಕ್ಕೂಟದ ಮುಖಂಡ ಅಸ್ಗರ್ ಅಲಿ ಮಾತನಾಡಿ, “ಸಂಸತ್ತಿನಲ್ಲಿ ನಿಂತು ಅಮಿತ್ ಶಾ, ಅಂಬೇಡ್ಕರ್ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಭಾರತ ಸಂವಿಧಾನದ ಒಕ್ಕೂಟದಲ್ಲಿ ಡಾ. ಅಂಬೇಡ್ಕರ್ ಪಾತ್ರ ಮಹತ್ವದ್ದು. ಅವರು ಸಂವಿಧಾನ ರಚಿಸಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸಮನಾದ ಹಕ್ಕುಗಳನ್ನು ನೀಡಿದ್ದಾರೆ. ಅಂತಹ ಮಹಾನಾಯಕನ ಬಗ್ಗೆ ಅಮಿತ್ ಶಾ ಅವರ ಹೇಳಿಕೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳೂ ಸೇರಿದಂತೆ ಎಲ್ಲ ಸಮುದಾಯಗಳಿಗೆ ನೋವುಂಟು ಮಾಡಿರುತ್ತದೆ. ಅವರ ಹೇಳಿಕೆ ದೇಶದ್ರೋಹಕ್ಕೆ ಸಮವೆಂದು ಪರಿಗಣಿಸಿ ರಾಷ್ಟ್ರಪತಿಯವರು, ಸಭಾಧ್ಯಕ್ಷರು ಈ ಕೂಡಲೇ ಅವರನ್ನು ಗೃಹ ಮಂತ್ರಿ ಮತ್ತು ಸಂಸದ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಒತ್ತಾಯಿಸಿದರು.
ಮುಸ್ಲಿಂ ಒಕ್ಕೂಟದ ಮುಖಂಡ ಮತ್ತು ವಕೀಲ ಇಬ್ರಾಹಿಂ ಕಲೀಲ್ ಉಲ್ಲಾ ಮಾತನಾಡಿ, “ಸಂವಿಧಾನವೆಂದರೆ ಈ ದೇಶದ ಇತಿಹಾಸ. ದೇಶದ ಇತಿಹಾಸವೆಂದರೆ ಅಂಬೇಡ್ಕರ್ ಮತ್ತು ಸಂವಿಧಾನ. ಅಂಬೇಡ್ಕರ್ ಇಲ್ಲದೇ ಸಂವಿಧಾನವಿಲ್ಲ, ಸಂವಿಧಾನವಿಲ್ಲದೆ ಅಂಬೇಡ್ಕರ್ ಇಲ್ಲ. ಸಂವಿಧಾನ ರಚನಾಕಾರ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ, ದೇಶದ ಪ್ರಜೆಗಳಿಗೆ ಮಾಡಿದ ಅವಮಾನವಾಗಿದೆ. ಆದ್ದರಿಂದ ಅಮಿತ್ ಶಾ ಅವರನ್ನು ಕೂಡಲೇ ಎಲ್ಲ ಹುದ್ದೆಗಳಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಒಕ್ಕೂಟದ ಮತ್ತೊಬ್ಬ ಮುಖಂಡ ಮೊಹಮ್ಮದ್ ರಿಯಾಜ್ ರಜ್ವಿ ಮಾತನಾಡಿ, “ಕೇಂದ್ರದ ಗೃಹಮಂತ್ರಿ ಅಮಿತ್ ಶಾ ಅವರು ಸಂಸತ್ತಿನಲ್ಲಿ ಕುಳಿತೇ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಾರೆ ಎಂದರೆ, ಅದು ಸಂವಿಧಾನವನ್ನು ಅವಮಾನಿಸಿದಂತೆ. ಅವರಿಗೆ ತಿಳುವಳಿಕೆ ಇದ್ದಂತೆ ಕಾಣುತ್ತಿಲ್ಲ. ಏಕೆಂದರೆ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿದ ಹಕ್ಕಿನಿಂದಾಗಿ ಅಮಿತ್ ಶಾ ಇಂದು ಗೃಹಮಂತ್ರಿಯಾಗಿರುವುದು, ಸಂಸದನಾಗಿರುವುದು ಮತ್ತು ಸಂಸತ್ತಿನಲ್ಲಿ ನಿಂತು ಮಾತನಾಡುತ್ತಿರುವುದು. ಆ ಹಕ್ಕು ಇಲ್ಲದಿದ್ದರೆ ಇವರು ಮಾತನಾಡಲು ಅವಕಾಶವೇ ಇರುತ್ತಿರಲಿಲ್ಲ. ಈ ಬಗ್ಗೆ ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಯಾವುದೇ ಚಕಾರವೆತ್ತಿಲ್ಲ. ಇದು ಅಶಾಂತಿಗೆ ಕಾರಣವಾಗಿದೆ. ಅವರು ಮನುವಾದಿ ಸರ್ಕಾರವನ್ನು ಸ್ಥಾಪಿಸಲು ಹೊರಟಿರುವುದು ದುರಂತ. ಅವರನ್ನು ಈ ಕೂಡಲೇ ವಜಾಗೊಳಿಸದಿದ್ದರೆ ಈ ಮನುವಾದದ ಸರ್ಕಾರವನ್ನು ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ಕಿತ್ತೊಗೆಯುವ ಕೆಲಸ ಮಾಡುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಅಮಿತ್ ಶಾ ಗೃಹಮಂತ್ರಿ ಮತ್ತು ಸಂಸದ ಸ್ಥಾನದಿಂದ ಕೆಳಗಿಳಿಯಬೇಕು. ಅವರನ್ನು ವಜಾಗೊಳಿಸಿ, ದೇಶದಿಂದಲೇ ಗಡಿಪಾರು ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕನಾಯಕನಹಳ್ಳಿ | ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಶ್ರದ್ಧಾಂಜಲಿ
ಪ್ರತಿಭಟನೆಯಲ್ಲಿ ಜಬೀವುಲ್ಲಾ, ತಾಹಿರ್ ಸಮೀರ್, ಭಾಷಾ, ಮಹಮ್ಮದ್ ಅಲಿ ಶೋಯಿಬ್, ರಫೀಕ್, ದಾದಾ ಪೀರ್, ನೂರು, ಸೈಯದ್ ರಿಯಾಜ್, ಲಿಯಾಕತ್ ಅಲಿ, ಖಾಜಾ ಮೊಹಿದ್ದೀನ್, ಅಬ್ರಾರ್, ಮುಜಾಮಿಲ್ ಪಾಷಾ, ಅಬ್ದುಲ್ ರಹೀಂ, ಅಬು ತಾಲಿಬ್, ರಜ್ವಿ ರಿಯಾಜ್, ಅಫ್ತಾಬ್, ಹಿದಾಯತ್, ಆದಿಲ್ ಖಾನ್ ಸೇರಿದಂತೆ ಇತರರು ಇದ್ದರು.