ಪುರುಷರು ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಮಾನ ಹಾಗೂ ಘನತೆಯ ಭಾವನೆಯಿಂದ ನಾವು ಮಹಿಳೆಯರನ್ನು ನೋಡಿದಾಗ ಪ್ರತಿ ಪುರುಷ ಉನ್ನತ ಮೌಲ್ಯ ಹೊಂದಲು ಸಾದ್ಯ ಎಂದು ಕೆವಿಜಿಬಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಸಿ ಎ ಘಂಟೆಪ್ಪಗೋಳ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರ ನಗರದ ಕಸಾಪ ಆವರಣದಲ್ಲಿ ಮಹಿಳೆಯರ ಘನತೆ ಹಾಗೂ ಮಾನವ ಮೌಲ್ಯ ಉಳಿಸೋಣ ಎಂಬ ದ್ಯೇಯದೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
“ಹಲವಾರು ಹಳ್ಳಿಗಳಲ್ಲಿ ಮಹಿಳೆಯರ ದುಡಿಮೆಯಲ್ಲಿಯೇ ಜೀವನ ಸಾಗಿಸುವ ಪುರುಷರು ಮಹಿಳೆಯರ ಮೇಲೆಯೇ ದೌರ್ಜನ್ಯ ಮಾಡುವುದನ್ನು ನೋಡುತ್ತೇವೆ. ಈ ಪರಿಸ್ಥಿತಿಯನ್ನು ಎಲ್ಲರೂ, ಮುಖ್ಯವಾಗಿ ಮಹಿಳೆಯರು ವಿರೋಧಿಸಬೇಕು. ಗಂಡನೇ ಶ್ರೇಷ್ಠ ಎಂಬ ಹಳೆಯ ಮಾತಿಗೆ ಕಟ್ಟು ಬೀಳದೇ ಇಬ್ಬರೂ ಸಮಾನರೆಂಬ ಧೋರಣೆಯನ್ನು ಹೊಂದಬೇಕು. ಕುಟುಂಬ ಹಾಗೂ ಸಾಮಾಜಿಕ ಜವಾಬ್ದಾರಿ ಎರಡನ್ನೂ ನಿಭಾಯಿಸುವ ಮಹಿಳೆಯರು ಪುರುಷನಿಗಿಂತಲೂ ಮೇಲಾಗಿ ನಿಲ್ಲುತ್ತಾರೆ. ಅತ್ಯಾಚಾರ ಮನೋಭಾವ ವಯೋಮಿತಿಯನ್ನೂ ಮೀರಿ ಇಂದು ಕಂಡುಬರುತ್ತಿದೆ. ಈ ಸ್ಥಿತಿಯನ್ನು ಬದಲಾಯಿಸುವ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ” ಎಂದು ಹೇಳಿದರು.
ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, “ಉನ್ನತ ನೀತಿ, ನೈತಿಕತೆ, ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪವನ್ನು ನಾವು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಎಐಡಿವೈಒ ಯುವಜನ ಸಂಘಟನೆಯು ದೇಶದಾದ್ಯಂತ ಈ ಸಾಂಸ್ಕೃತಿಕ ಚಳುವಳಿಯನ್ನು ಹರಿಬಿಟ್ಟಿದೆ. ನಾವಿಂದು ಅತ್ಯಂತ ಕ್ಲಿಷ್ಟಕರ ಸಾಮಾಜಿಕ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ಮನಸ್ಸಿಗೆ ತೀವ್ರ ನೋವಾಗುತ್ತದೆ. ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಘಟನೆಗಳು, ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೀತಿಸಿದಾಕೆಯನ್ನೇ ಕೊಲೆ ಮಾಡುತ್ತಿರುವುದನ್ನು ನೋಡಿದಾಗ ನಾವು ಸಭ್ಯ, ನಾಗರಿಕ ಸಮಾಜದಲ್ಲಿದ್ದೇವೆಯೇ ಎಂದೆನಿಸುತ್ತದೆ. ಆದ್ದರಿಂದ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು ಕಂಡ ಸಮಸಮಾಜದ ಕನಸನ್ನು ನನಸು ಮಾಡುವ ಸಂಕಲ್ಪವನ್ನು ನಾವೂ ಮಾಡಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಶಾಲೆ ಕಾಲೇಜುಗಳಿಗೆ ರಜೆ; ಬೆಂಗಳೂರು ಉತ್ತರ ವಿವಿಯಲ್ಲಿ ಪರೀಕ್ಷೆ!
ಜಿಲ್ಲಾ ಉಪಾಧ್ಯಕ್ಷ ಅಶೋಕ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಶಶಾಂಕ ಪಾಟೀಲ, ಮಲ್ಲಿಕಾರ್ಜುನ ಕರ್ಕಲ್, ಅಮರೇಶ ಕೊಣ್ಣೂರ, ಅಜಯ ರಾಠೋಡ, ಬಾಷಾ, ಸಂಗಮೇಶ ಉಕ್ಕಲಿ, ಕಾವೇರಿ ಸೇರಿದಂತೆ ಹಲವಾರು ಯುವಕ-ಯುವತಿಯರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಹಾಗೂ ಮಹಿಳೆಯರ ಘನತೆಯನ್ನು ಕಾಪಾಡುವ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.