ರಾಜ್ಯಾದ್ಯಂತ ಸರ್ಕಾರದ ಆದೇಶದನ್ವಯ ನಡೆಯುತ್ತಿರುವಂತಹ ಮಕ್ಕಳ ಗ್ರಾಮಸಭೆಗಳು ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಲು ನಡೆಸುವಂತಹ ಪ್ರಕ್ರಿಯೆ. ಈ ಸಭೆಗಳಲ್ಲಿ ಮಕ್ಕಳೇ ಹೆಚ್ಚು ಮಾತನಾಡುವ ಸಭೆಗಳಾಗಲಿ ಎಂದು ಸಾಮಾಜಿಕ ಕಾರ್ಯಕರ್ತ ಶಶಿರಾಜ್ ಹರತಲೆ ಅವರು ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೋನಪ್ಪಲ್ಲಿ ಗ್ರಾಮ ಪಂಚಾಯಿತಿ ಸಭಾಗಂಣದಲ್ಲಿ ಶುಕ್ರವಾರ ಎಸ್‌ಡಿಎಂಸಿ ಗ್ರಾಮಾಂತರ ಟ್ರಸ್ಟ್ ಹಾಗೂ ಜನಪರ ಫೌಂಡೇಷನ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ “ಮಕ್ಕಳ ಗ್ರಾಮಸಭೆ”ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಆಡಳಿತದಲ್ಲಿ ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಭಾಗವಹಿಸಲು ಹಕ್ಕಿದೆ. ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ಭಾಗವಹಿಸಿ, ತಾವು ವಾಸಿಸುವ ಪ್ರದೇಶ, ಓದುವ ಶಾಲೆಯಿಂದ ತಮ್ಮ ಕೌಟುಂಭಿಕ ಬದುಕಿನ ಸಮಸ್ಯೆಗಳನ್ನು ಮುಕ್ತವಾಗಿ ಮಾತನಾಡಲು ಅವಕಾಶ ಮಾಡಿಕೊಡಬೇಕು. ಪಂಚಾಯತ್ ರಾಜ್ ಕಾಯಿದೆ ಅಡಿಯಲ್ಲಿ ಉಪಸಮಿತಿಯಾಗಿ ರಚಿತವಾಗಿರುವ ಎಸ್.ಡಿ.ಎಮ್.ಸಿ ಸಮಿತಿಯು ಮಕ್ಕಳ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ವಾತವರಣವನ್ನು ನಿರ್ಮಾಣ ಮಾಡಬೇಕು. ಪ್ರಶ್ನೆ ಕೇಳುವುದು, ಪ್ರತಿರೋಧಿಸುವುದು, ಹಕ್ಕೋತ್ತಾಯಿಸುವುದು ಪ್ರಜಾಪ್ರತ್ವದ ಅಸ್ತ್ರವಾಗಿದೆ. ಇದನ್ನು ಆಡಳಿತ ನಡೆಸುವವರು ಸ್ವೀಕರಿಸಬೇಕು ಎಂದರು.
ಮಕ್ಕಳು ಎತ್ತಿದ ಸಮಸ್ಯೆಗಳನ್ನು ದಾಖಲೀಕರಿಸಿ ಸಂಭಂದಪಟ್ಟ ಇಲಾಖೆಗಳು ಬಗೆಹರಿಸುವ ಕಡೆ ಗಮನವಹಿಸಬೇಕು. ಆಗ ಮಾತ್ರ ಆಡಳಿತ ಬಗ್ಗೆ ಮಕ್ಕಳಿಗೆ ಗೌರವ, ನಂಬಿಕೆ ಬರುತ್ತೆ, ಆ ಮೂಲಕ ದೇಶ ಪ್ರೇಮ ಹೆಚ್ಚಾಗತ್ತೆ ಕೇವಲ ಸಾಂಕೇತಿಕ ಸಭೆ ಆದ್ರೆ ಮಕ್ಕಳ ಮನಸ್ಸಿನಲ್ಲಿ ಸರ್ಕಾರದ ಆಡಳಿತ ಬಗ್ಗೆ ನಕರಾತ್ಮಕ ಆಲೋಚನೆ ಮೂಡತ್ತೆ. ಇದಕ್ಕೆ ಅವಕಾಶ ಮಾಡಿಕೊಡ ಬಾರದು. ಭವಿಷ್ಯದಲ್ಲಿ ಭಾರತ ಜಾಗತೀಕವಾಗಿ ಅಭಿವೃದ್ಧಿಹೊಂದಬೇಕು ಅಂದ್ರೆ ಮಕ್ಕಳಿಗೆ ಸಂವಿಧಾನಿಕ ಮೌಲ್ಯಗಳನ್ನು ಕಲಿಸಿಕೊಡಬೇಕು ಮಕ್ಕಳ ಮನಸ್ಸಲ್ಲಿ ಜಾತಿ, ಧರ್ಮ ಲಿಂಗತಾರಮ್ಯ ಭೇದಗಳನ್ನು ಬಿತ್ತಬಾರದು ಎಂದರು.
ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆಯು ಮಕ್ಕಳಿಗೆ ಜೀವನ ಕೌಶಲ್ಯ, ಸಕ್ರಿಯ ನಾಗರೀಕತೆ, ಭಾಗವಹಿಸುವಿಕೆ ಮತ್ತಿತರೆ ಮೌಲ್ಯಗಳನ್ನು ಉತ್ತೇಜಿಸುವ ಕೆಲಸ ನಿರ್ವಹಿಸಲಾಗುತ್ತಿದೆ. ಮಕ್ಕಳ ಗ್ರಾಮ ಸಭೆಗೆ ಪೂರಕವಾಗಿ ಅವರ ಹಕ್ಕನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುವ ಹಿನ್ನೆಲೆಯಲ್ಲಿ ಜಾಗೃತಿ ಸಭೆಗಳನ್ನು ನಡೆಸಿ ಈ ಸಭೆಗೆ ಮಕ್ಕಳನ್ನು ಆಯೋಜಿಸಲಾಗಿದ್ದು ಮಕ್ಕಳನ್ನು ಸಮಾನ ನಾಗರೀಕರೆಂದು ಗುರುತಿಸುವ ಮೂಲಕ ಅವರ ಭಾಗವಹಿಸುವಿಕೆಯನ್ನು ಖಾತ್ರಪಡಿಸಿ ಮಕ್ಕಳಿಗೆ ಸಂವಿಧಾನ ಬದ್ಧವಾಗಿ ಜೀವಿಸುವ ಹಕ್ಕು, ರಕ್ಷಣೆಯ ಹಕ್ಕು, ಭಾಗವಹಿಸುವ ಹಕ್ಕು, ವಿಕಾಸ ಹೊಂದುವ ಹಕ್ಕು ಇವೆ ಇವು ಮಕ್ಕಳಿಗೆ ಕಡ್ಡಾಯವಾಗಿ ತಲುಪುವಂತಾಗಬೇಕು. ಪ್ರಸ್ತುತ ದಿನಗಳಲ್ಲಿ ಮಕ್ಕಳ ಹಕ್ಕುಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮಕ್ಕಳನ್ನು ಜೀವನದ ಮುಖ್ಯ ಭಾಗ ಎಂದು ಪರಿಗಣಿಸಲ್ಪಡದೇ ದೂರ ಉಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಮಗುವಿಗೂ ನೆಮ್ಮದಿಯಿಂದ ಬದುಕಲು ಅವಕಾಶ ಸಿಗಬೇಕು ಹಾಗೂ ಮಕ್ಕಳು ಎಲ್ಲದರಲ್ಲಿಯೂ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಪ್ರತಿಪಾದಿಸಿದರು.
ಸಭೆಯಲ್ಲಿ ಮಕ್ಕಳೆ ಹೆಚ್ಚಾಗಿ ಮಾತನಾಡಿ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ, ಸಿಬ್ಬಂದಿಯ ಕೊರತೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಬಸ್ ನಿಲ್ದಾಣ, ರಸ್ತೆಗಳು, ನೈರ್ಮಲೀಕರಣ, ಶಾಲೆಯ ಆಟದ ಮೈದಾನ, ಶೌಚಾಲಯ, ಅಂಗನವಾಡಿ ಕಟ್ಟಡ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು ಮಕ್ಕಳು ಎತ್ತಿರುವಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಮುಂದಿನ ದಿನಗಳಲ್ಲಿ ಮೊದಲ ಹಂತದಲ್ಲಿಯೇ ಈ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಕೆಲವೊಂದನ್ನು ಈಗಾಗಲೇ ಬೇಡಿಕೆಯ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದ್ದು, ಶೀಘ್ರದಲ್ಲಿಯೇ ಕೆಲಸ ಆರಂಭಿಸುತ್ತೇವೆ ಎಂಬ ಭರವಸೆಯನ್ನು ನೀಡಿದರು.
ಸಭೆಯಲ್ಲಿ ಕೋನಪ್ಪಲ್ಲಿ, ಮಹಮದ್ ಪುರ, ಧನಮಿಟ್ಟೇನಹಳ್ಳಿ ನಾಯನಹಳ್ಳಿ, ಚೊಕ್ಕಹಳ್ಳಿ, ಗ್ರಾಮಗಳ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಸರಸ್ಪತಿ ವಿದ್ಯಾನಿಕೇತನ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಸಿಲಿಂಡರ್ ಸ್ಫೋಟ, ಹೊತ್ತಿ ಉರಿದ ಲಾರಿಗಳು
ಮಕ್ಕಳ ಗ್ರಾಮ ಸಭೆಯಲ್ಲಿ ತಾಲ್ಲೂಕು ಶಿಕ್ಷಣಾಧಿಕಾರಿ ಉಮಾದೇವಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತ, ಉಪಾಧ್ಯಕ್ಷರಾದ ಗಿರೀಶ್.ಎ, ಪಂಚಾಯತ್ ನೋಡಲ್ ಅಧಿಕಾರಿಗಳಾದ ರೇಷ್ಮೆ ಇಲಾಖೆ ರಾಮ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಯಾಸ್ಮಿನ್, ಕಾರ್ಯದರ್ಶಿ ಆರ್.ಚಲಪತಿ, ಗ್ರಾಮಾಂತರ ಟ್ರಸ್ಟ್ ನ ಅನಂತ ಲಕ್ಷ್ಮಿ, ಜನಪರ ಪೌಂಡೇಷನ್ ಬಾಬುರೆಡ್ಡಿ, ಅನುಪ್ರಿಯ, ಚಂದ್ರತೇಜ್, ನವೀನ್ ಸೇರಿದಂತೆ ವಿವಿಧ ಗ್ರಾಪಂ ಸದಸ್ಯರು, ಶಾಲೆಗಳ ಮುಖ್ಯಸ್ಥರು, ಮುಖ್ಯೋಪಾಧ್ಯಾಯರು, ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.