ಬೀದರ್ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಮರಣ ಪತ್ರದಲ್ಲಿ ಬಿಜೆಪಿ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಶುಕ್ರವಾರ ರಾತ್ರಿ ನೀಡಿರುವ ದೂರಿನ ಆಧಾರದ ಮೇಲೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ ಇನ್ನಿತರರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಂದೋಲಾಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತು ಮೂವರು ಬಿಜೆಪಿ ನಾಯರು ಬಿಜೆಪಿ ನಾಯಕರನ್ನು ಹತ್ಯೆ ಮಾಡುವುದಾಗಿ ಸಂಚು ರೂಪಿಸಿದ್ದಾರೆಂದು ಆರೋಪಿಸಿ, ಬಿಜೆಪಿ ಮುಖಂಡರು ಶುಕ್ರವಾರ ರಾತ್ರಿ ಕಮಿಷನರ್ ಅವರಿಗೆ ದೂರು ಕೊಟ್ಟಿದ್ದರು. ಇದಕ್ಕೂ ಮುಂಚೆ ಶುಕ್ರವಾರ ರಾತ್ರಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಹೋಗಿದ್ದ ಬಿಜೆಪಿ ನಾಯಕರ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿತ್ತು.
ಶನಿವಾರ ಬೆಳಗ್ಗಿನವರೆಗೆ ಕೊಲೆಗೆ ಸಂಚು ಹೂಡಿದ್ದ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸದೆ ಇರುವುದರಿಂದ ಬಿಜೆಪಿ ಮುಖಂಡರು ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಕೋರ್ಟ್ ಗಮನಕ್ಕೆ ತಂದ ಪೊಲೀಸರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಾಜು ಕಪನೂರ್ ಸೇರಿದಂತೆ 6 ಜನರ ವಿರುದ್ಧ ಬಿಎನ್ಎಸ್ ಸೆಕ್ಷನ್ 351 (2) ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಆನ್‌ಲೈನ್ ಗೇಮಿಂಗ್ : ₹15 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಯುವಕ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆ
ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಅವರ ದೂರಿನನ್ವಯ, ಮಾಜಿ ಕಾರ್ಪೊರೇಟರ್ ರಾಜು ಕಪನೂರ್, ನಂದಕುಮಾರ್ ನಾಗಭುಜಂಗೆ, ಪ್ರತಾಪ್ ಧೀರ ಪಾಟೀಲ್, ಮನೋಜ್ ಶೇಜೇವಾಲ, ಗೋರಖನಾಥ್ ಸಜ್ಜನ್, ರಾಮನಗೌಡ ಪಾಟೀಲ್ ಅವರ ವಿರುದ್ಧ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.