ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಲಾಲನೆ, ಪಾಲನೆ, ಅಕ್ಷರಾಭ್ಯಾಸ ಸೇರಿದಂತೆ ಎಲ್ಲ ರೀತಿಯ ಪೋಷಣೆಗಳನ್ನು ಮಾಡುತ್ತಾರೆ. ಹಾಗಾಗಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಎರಡನೇ ತಾಯಿಯ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಶ್ಲಾಘಿಸಿದರು.
ದಾವಣಗೆರೆ ನಗರದ ಪಾಲಿಕೆ ಆವರಣದಲ್ಲಿ ರಾಧಮ್ಮ ರಂಗಪ್ಪ ಬಯಲು ರಂಗಮಂದಿರದಲ್ಲಿ ಎಚ್ ಕೆ ರಾಮಚಂದ್ರಪ್ಪ ಬಣದ ಅಂಗನವಾಡಿ ಕಾರ್ಯಕರ್ತೆಯರ ನೂತನ ಸಂಘಟನೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು “ಸಮಾಜಕ್ಕೆ ಸಂಘಟನೆಯ ಧ್ಯೇಯ, ಉದ್ದೇಶಗಳು ಮುಖ್ಯವಾಗುತ್ತದೆ. ಸಂಘಟನೆ ಜನಪರವಾಗಿರಬೇಕು ಮತ್ತು ನೊಂದಿರುವವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಸಮಾಜಕ್ಕೆ ಅಂತಹ ಸಂಘಟನೆಗಳ ಅಗತ್ಯವಿದೆ” ಎಂದು ಹೇಳಿದರು.
“ಅಂಗನವಾಡಿ ಕಾರ್ಯಕರ್ತೆಯರು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಹಲವಾರು ಸರ್ಕಾರಗಳು ಭರವಸೆಗಳನ್ನು ನೀಡಿ ಹೋಗಿವೆ. ಕಾರ್ಮಿಕ ಕಾಯ್ದೆ ಅನ್ವಯ ಕನಿಷ್ಠ ವೇತನವೇ ₹17,500 ವೇತನವಿದೆ. ಆ ಕನಿಷ್ಠ ವೇತನವೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗುತ್ತಿಲ್ಲ. ಯಾವುದೇ ಸರ್ಕಾರಗಳಿರಲಿ ಕನಿಷ್ಠ ವೇತನ ವಿಚಾರವಾಗಿ ನಾನು ಮುಂದಿನ ದಿನಗಳಲ್ಲಿ ನಿಮ್ಮ ಪರವಾಗಿ ನಿಲ್ಲುತ್ತೇನೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಜಾರಿಗೆ ನಾನು ಸರ್ಕಾರದ ಗಮನಸೆಳೆಯಲು ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.
“ನೀವು ಮಕ್ಕಳಿಗೆ ಎರಡನೇ ತಾಯಂದಿರಿದ್ದ ಹಾಗೆ. ಮಗುವಿನ ತಾಯಿ ಮಕ್ಕಳಿಗೆ ಯಾವ ರೀತಿ ಪೋಷಣೆ ಮಾಡುತ್ತಾಳೋ, ಅದೇ ರೀತಿ ಇಡೀ ದಿನ ಮಕ್ಕಳನ್ನು ನಿಮ್ಮೊಟ್ಟಿಗೆ ಇಟ್ಟುಕೊಂಡು ಆ ಎಲ್ಲ ರೀತಿಯ ಆರೈಕೆ, ಪೋಷಣೆ ಮಾಡುತ್ತೀರಿ. ಮುಂದೆ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಮ್ಮರವಾಗಿ ಬೆಳೆದು ಕೆಲಸ ಮಾಡುವ ಸಣ್ಣ ಸಣ್ಣ ಮಕ್ಕಳು ನಿಮ್ಮ ಕೈಯಲ್ಲಿ ಬೆಳೆಯುತ್ತಾರೆ. ಆ ಮಕ್ಕಳು ದೇವರು ಇದ್ದಂತೆ. ಅವರುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವ, ಆರೈಕೆ ಮಾಡುವ ಹೊಣೆ ಅಂಗನವಾಡಿ ಕಾರ್ಯಕರ್ತೆಯರ ಮಹತ್ವದ ಕೆಲಸ” ಎಂದು ಪ್ರಶಂಸೆ ವ್ಯಕ್ತಪಡಿಸಿ ಸಂಘಟನೆಗೆ ಶುಭ ಕೋರಿದರು.
ರೈತ ಮತ್ತು ಕಾರ್ಮಿಕ ರಾಜ್ಯ ಮುಖಂಡ ಎಂ ಗೋಪಾಲ್ ಮಾತನಾಡಿ, “ಅಂಗನವಾಡಿ ಕಾರ್ಯಕರ್ತೆಯರು 1975ರಲ್ಲಿ ₹3 ವೇತನದಿಂದ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಎಂದೂ ಕೂಡ ಅವರಿಗೆ ಸರಿಯಾದ ವೇತನ ಸೌಲಭ್ಯಗಳು ದೊರಕುತ್ತಿಲ್ಲ. ಅವರಿಗೆ ಸೌಲಭ್ಯಗಳು ದೊರಕಬೇಕಾದರೆ ಸಂಘಟನೆ ಮತ್ತು ಹೋರಾಟಗಳಿಂದ ಮಾತ್ರ ಸಾಧ್ಯ. 1975ರಲ್ಲಿ ಇಂದಿರಾಗಾಂಧಿಯವರು ಅಂಗನವಾಡಿ ವ್ಯವಸ್ಥೆ ಪ್ರಾರಂಭಿಸಿದಾಗ ಒಂದು ಸದೃಢ ಸಮಾಜ ಕಟ್ಟುವ ಮಕ್ಕಳಿಗೆ ತಾಯಿಯ ಗರ್ಭದಿಂದಲೇ ಪೋಷಕಾಂಶಗಳ ಆರೈಕೆ ನೀಡುವ ಉನ್ನತ ಧ್ಯೇಯೋದ್ದೇಶದೊಂದಿಗೆ ಅಂಗನವಾಡಿಗಳನ್ನು ಹೆಗ್ಡೆ ಪ್ರಾರಂಭಿಸಿದ್ದಾರೆ. ಇಂಥ ಮಹತ್ವದ ಯೋಜನೆಯಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ಸೌಲಭ್ಯಗಳು ದೊರಕಬೇಕಿದೆ. ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು” ಎಂದು ಒತ್ತಾಯಿಸಿದರು.
ಸಂಘಟನೆಯ ವಿಶಾಲಾಕ್ಷಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, “ನಾವು 40 ವರ್ಷಗಳಿಂದಲೂ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯನ್ನು ಸಕ್ರಿಯವಾಗಿ ಮಾಡಿಕೊಂಡು ಬಂದಿದ್ದೇವೆ. ಇತ್ತೀಚೆಗೆ ಪಕ್ಷದ ಕೆಲವರಿಂದ ಸಂಘಟನೆಯಲ್ಲಿ ಒಡಕುಂಟಾದ ಕಾರಣ ಅಲ್ಲಿರುವುದು ಸೂಕ್ತವಲ್ಲ ಎನಿಸಿ ಹೊಸ ಸಂಘಟನೆ ಕಟ್ಟುತ್ತಿದ್ದೇವೆ. ಇದಕ್ಕೆ ಕಮ್ಯುನಿಸ್ಟ್ ನಾಯಕ ರಾಮಚಂದ್ರಪ್ಪನವರ ಹೆಸರಿಟ್ಟು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಕಾರಣ ಮೊಟ್ಟಮೊದಲು ಎಚ್ ಕೆ ರಾಮಚಂದ್ರಪ್ಪನವರ ಮುಂದಾಳತ್ವದಲ್ಲಿ ಸಂಘಟನೆ ಪ್ರಾರಂಭವಾಗಿದ್ದು, ಅವರು ನಮಗೆ ಮಾರ್ಗದರ್ಶಕರು ಮತ್ತು ದಾರಿದೀಪವಾಗಿದ್ದರು. ಸಂಘಟನೆಗೆ ಕೆಲಸ ಮಾಡುವಲ್ಲಿ ಆದರ್ಶಪ್ರಾಯರಾಗಿದ್ದರು. ಹಾಗಾಗಿ ಅವರ ಹೆಸರಿನಲ್ಲಿ ಎಚ್ ಕೆ ಆರ್ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಪ್ರಾರಂಭಿಸಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಮಿತ್ ಶಾ ರಾಜೀನಾಮೆಗೆ ಮುಸ್ಲಿಂ ಒಕ್ಕೂಟ ಆಗ್ರಹ
ಗುರುವಾರ ನಿಧನ ಹೊಂದಿದ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಕಾರ್ಯಕ್ರಮದಲ್ಲಿ ಮೌನಾಚಾರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್ ಹೆಚ್ ಅರುಣಕುಮಾರ್, ಸಾಹಿತಿ, ಪ್ರಗತಿಪರ ಚಿಂತಕ ಬಿ ಎನ್ ಮಲ್ಲೇಶ್, ವಕೀಲ ಎ ವೈ ಕೃಷ್ಣಮೂರ್ತಿ, ಸಂಘಟನೆ ಮುಖ್ಯಸ್ಥೆಯರಾದ ಡಿ ಎಂ ರೇಣುಕ, ವೀಣಾ, ವಿಶಾಲಾಕ್ಷಿ ಮೃತ್ಯುಂಜಯ, ಉಮಾ ಜೆ ಎಂ, ಕಾಳಮ್ಮ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.