ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ವಿರೋಧಿಸಿ ಬೀದಿಬದಿ ವ್ಯಾಪಾರಿಗಳ ಹೋರಾಟ ಸಮಿತಿಯು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪ್ರವಾಸಿ ಮಂದಿರದಿಂದ ಕಾಲ್ನಡಿಗೆ ರ್‍ಯಾಲಿ ನಡೆಸಿ ಬಳಿಕ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸಿಂಧನೂರು ನಗರದ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ಖಂಡಿಸಿ ಬೀದಿಬದಿ ವ್ಯಾಪಾರಿಗಳ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ ಸ್ಥಳೀಯ ಆಡಳಿತದ ವಿರುದ್ಧ ಘೋಷಣೆ ಕೂಗಿ ನಂತರ ತಹಶೀಲ್ದಾರ್ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
“ನಗರದಲ್ಲಿ ಕೆಲವು ಬೀದಿಬದಿ ವ್ಯಾಪಾರಸ್ಥರಿಗೆ ಯಾವುದೇ ನೋಟಿಸ್ ನೀಡದೆ ರಸ್ತೆ ಬದಿಯಲ್ಲಿದ್ದ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ. ಅನೇಕ ವರ್ಷಗಳಿಂದ ವಿವಿಧ ರೀತಿಯ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಒಕ್ಕೆಲೆಬ್ಬಿಸಿರುವುದು ಖಂಡನೀಯ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಹಾಸನ ಇಂಟರ್‌ಸಿಟಿ ರೈಲು ಸಂಚಾರ ವಿಸ್ತರಣೆಗೆ ಶಾಸಕ ಸಿಮೆಂಟ್ ಮಂಜು ಮನವಿ
“ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು” ಎಂದು ಮನವಿ ಮಾಡಿದರು.
ಈ ವೇಳೆ ನಾಗರಾಜ್ ಪೂಜಾರ, ಚಿಟ್ಟಿಬಾಬು, ಬಸವರಾಜ್ ಬಾದರ್ಲಿ, ಚಂದ್ರಶೇಖರ ಗೋರೆಬಾಳ, ರಾಮಣ್ಣ ಹಿರೇಬೆಡಗಿ, ಹುಸೇನ್ ಸಾಬ್ ಜಮಾತ್ ಇಸ್ಲಾಂ ಹಿಂದ್, ಬಿ ಎನ್ ಮಂಜುನಾಥ್ ಗಾಂಧಿ ನಗರ, ಡಿ ಎಚ್ ಪೂಜಾರ ಸೇರಿದಂತೆ ಇತರರು ಇದ್ದರು.
