ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೂವರು ಗಂಭೀರವಾಗಿರುವ ಘಟನೆ ಬಳ್ಳಾರಿ ತಾಲೂಕಿನ ಮದಿರೆ ಕ್ರಾಸ್ ಬಳಿ ನಡೆದಿದೆ.
ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ರಂಗಸ್ವಾಮಿ(40), ಕಲ್ಲುಕಂಬ ಗ್ರಾಮದ ಪರಮೇಶ್(32) ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಕ್ರಮವಾಗಿ ಪಡಿತರ ಅಕ್ಕಿ ಸಾಗಟ ಮಾಡುತ್ತಿದ್ದ ವೇಳೆ ಅತಿ ವೇಗವಾಗಿ ವಾಹನ ಚಲಾಯಿಸಿದ ಕಾರಣ ವಾಹನ ಪಲ್ಟಿಯಾಗಿದ್ದು, ಕಾಲುವೆಗೆ ಬಿದ್ದಿದೆ. ಬೊಲೆರೋ ವಾಹನದಲ್ಲಿ ಐವರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುರುಗೋಡಿನ ಎರ್ರಿಗೌಡ ಮತ್ತು ಉಮೇಶ್ ಗೌಡ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಬೊಲೆರೋ ವಾಹನ ಪಲ್ಟಿಯಾಗಿ ಕಾಲುವೆಗೆ ಬಿದ್ದ ಬಳಿಕ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಚೀಲಗಳನ್ನು ಬೇರೊಂದು ವಾಹನದ ಮೂಲಕ ಸಾಗಾಟ ಮಾಡಲಾಗಿದೆ. ಹಲವು ವರ್ಷಗಳಿಂದ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟ ಮಾಡುವ ದಂಧೆಯಲ್ಲಿ ಸಕ್ರಿಯರಾಗಿದ್ದ ಕುರುಗೋಡಿನ ಉಜ್ಜಲ ಪೇಟೆ ನಿವಾಸಿಗಳಾದ ಎರ್ರಿಗೌಡ ಮತ್ತು ಉಮೇಶ್ ಎನ್ನುವ ಸಹೋದರರಿಗೆ ಸೇರಿದ ಅಕ್ಕಿ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ
“ಈ ಇಬ್ಬರು ಸಹೋದರರು ಕಡಿಮೆ ಬೆಲೆಗೆ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇವರ ಮೇಲೆ ಹಲವು ಬಾರಿ ಠಾಣೆಯಲ್ಲಿ ಈ ಹಿಂದೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಪಡಿತರ ಅಕ್ಕಿಯ ಸಾಗಾಟಕ್ಕೆ ಬಳಕೆ ಮಾಡಿದ ವಾಹನದ ನಂಬರ್ ಪ್ಲೇಟ್ ಬದಲಿಸಿ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ” ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
