ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರೀಯ ತನಿಖಾ ಸಂಸ್ಥೆಗಳ ಸರ್ಕಾರದ ಕೈಗೊಂಬೆಗಳಾಗಿವೆ ಎಂದು ಆರೋಪ ಹೆಚ್ಚಾಗಿದೆ. ಮೋದಿ ಸರ್ಕಾರ ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯಲು ಯತ್ನಿಸುತ್ತಿದೆ ಎಂಬುದು ಎದ್ದುಕಾಣುತ್ತಿದೆ. ಆ ಕಾರಣಕ್ಕಾಗಿಯೇ ಸಿಬಿಐಅನ್ನು ಸರ್ಕಾರದ ಪಂಜರದ ಗಿಳಿ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ. ಇದೆಲ್ಲದರ ನಡುವೆ, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಲಂಚ, ಅಕ್ರಮ ಹಣ ವರ್ಗಾವಣೆಯಂತಹ ಆರ್ಥಿಕ ಅಪರಾಧಗಳ ತನಿಖೆ ನಡೆಸಬೇಕಾದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳೇ ಲಂಚ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಇಡಿ ಕಚೇರಿಯ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ. ಇಡಿ ಅಧಿಕಾರಿಗಳು ಪರಾರಿಯಾಗಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಇಡಿ ಅಧಿಕಾರಿ ವಿಶಾಲ್ ದೀಪ್ ಲಂಚ ಪ್ರಕರಣದ ಆರೋಪಿಯಾಗಿದ್ದು, ಅವರು ಪರಾರಿಯಾಗಿದ್ದಾರೆ. ವಿಶಾಲ್ ಅವರು ಓರ್ವ ವ್ಯಕ್ತಿಯಿಂದ ಭಾರೀ ಮೊತ್ತದ ಹಣವನ್ನು ಲಂಚವಾಗಿ ಪಡೆದಿದ್ದಾರೆ. ಈ ವೇಳೆ, ಅವರನ್ನು ‘ರೆಡ್ ಹ್ಯಾಂಡ್’ಆಗಿ ಹಿಡಿಯಲು ಸಿಬಿಐ ಯತ್ನಿಸಿದೆ. ಆದರೆ, ವಿಶಾಲ್ ತಾವು ಲಂಚವಾಗಿ ಪಡೆದಿದ್ದ ಎಲ್ಲ ಹಣವನ್ನು ಕಾರಿನಲ್ಲಿ ತುಂಬಿಕೊಂಡು, ಪರಾರಿಯಾಗಿದ್ದಾರೆ.
ವಿಶಾಲ್ ಅವರನ್ನು ಶಿಮ್ಲಾದ ಇಡಿ ಕಚೇರಿಯಲ್ಲಿ ಸಹಾಯಕ ನಿರ್ದೇಶಕ (ಅಸಿಸ್ಟಂಟ್ ಡೈರೆಕ್ಟರ್) ಶ್ರೇಣಿಯ ಹುದ್ದೆಗೆ ನಿಯೋಜನೆ ಮಾಡಲಾಗಿತ್ತು. ಅವರು ವ್ಯಕ್ತಿಯೊಬ್ಬರ ಬಳಿ 55 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದರು. ವಿಶಾಲ್ ಅವರನ್ನು ‘ರೆಡ್ ಹ್ಯಾಂಡ್’ಆಗಿ ಹಿಡಿಯಲು ಚಂಡೀಗಢ ಸಿಬಿಐ ಘಟಕವು ತಂತ್ರ ರೂಪಿಸಿತ್ತು.
ದೂರುದಾರ ಲಂಚ ಕೊಡುವಾಗ ವಿಶಾಲ್ ಅವರನ್ನು ಹಿಡಿಯಲು ವಿಶಾಲ್ ಮತ್ತು ದೂರುದಾರ ಭೇಟಿಯಾಗುವ ಸ್ಥಳದಿಂದ ಸ್ವಲ್ಪ ದೂರದಲ್ಲೇ ಸಿಬಿಐ ಅಧಿಕಾರಿಗಳಿದ್ದರು. ದೂರುದಾರ ವ್ಯಕ್ತಿ ಲಂಚ ನೀಡುವಾಗ ದಾಳಿ ನಡೆಸಲು ಸಿಬಿಐ ಅಧಿಕಾರಿಗಳು ಮುಂದಾಗಿದ್ದರು. ಆದಾಗ್ಯೂ, ವಿಶಾಲ್ ಲಂಚದ ಹಣ ಪಡೆದು, ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ.
ಇಡಿ ಅಧಿಕಾರಿ ವಿಶಾಲ್‌ಗೆ ಸಂಬಂಧಿಸಿದ ಕಚೇರಿ, ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಸುಮಾರು 56 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕರಾಗಿರುವ ವಿಶಾಲ್ ಅವರ ಸಹೋದರನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
“ವಿಶಾಲ್ ವಿರುದ್ಧದ ಪ್ರಕರಣದ ಬಗ್ಗೆ ಇಡಿ ಕೇಂದ್ರ ಕಚೇರಿಗೆ ಸಿಬಿಐ ಮಾಹಿತಿ ನೀಡಿದೆ. ಮಾಹಿತಿ ಪಡೆದ ಬೆನ್ನಲ್ಲೇ, ವಿಶಾಲ್ ಮತ್ತು ಶಿಮ್ಲಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೇಲ್ವಿಚಾರಣಾ ಅಧಿಕಾರಿಯನ್ನು ದೆಹಲಿ ಕಚೇರಿಗೆ ವರ್ಗಾಯಿಸಲಾಗಿದೆ. ಸಿಬಿಐನಿಂದ ಹೆಚ್ಚಿನ ಮಾಹಿತಿ ಪಡೆದ ಬಳಿಕ, ಆರೋಪಿತ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು” ಎಂದು ಇಡಿ ತಿಳಿಸಿದೆ.
ಇತ್ತೀಚೆಗೆ, ದೆಹಲಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆಯೇ ಇಡಿ ಅಧಿಕಾರಿಯೊಬ್ಬರನ್ನು ಸಿಬಿಐ ಬಂಧಿಸಿತ್ತು. ಇದೀಗ, ಎರಡನೇ ಪ್ರಕರಣದಲ್ಲಿ ಮತ್ತೊಬ್ಬ ಇಡಿ ಅಧಿಕಾರಿ ಸಿಕ್ಕಿಕೊಂಡಿದ್ದಾರೆ. ದೆಹಲಿಯಲ್ಲಿ ಇಡಿ ಅಧಿಕಾರಿಯನ್ನು ಬಂಧಿಸಿದ ಪ್ರಕರಣದಲ್ಲಿ, ಮುಂಬೈ ಮೂಲದ ಉದ್ಯಮಿಯೊಬ್ಬರು ತಮ್ಮ ಮಗನನ್ನು ಬಂಧಿಸುವುದಾಗಿ ಬೆದರಿಕೆ ಹಾಕಿ, 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆಎಂದು ದೆಹಲಿಯ ಇಡಿ ಕಚೇರಿಯ ಸಹಾಯಕ ನಿರ್ದೇಶಕ ಸಂದೀಪ್ ಸಿಂಗ್ ಯಾದವ್ ವಿರುದ್ಧ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಸಂದೀಪ್ ಸಿಂಗ್ ಅವರನ್ನು ಬಂಧಿಸಿದ್ದ ಸಿಬಿಐ, ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
ಇದೀಗ, ಇಡಿ ಅಧಿಕಾರಿ ವಿಶಾಲ್ ಅವರ ಪ್ರಕರಣ ಮುನ್ನೆಲೆಗೆ ಬಂದಿದೆ. ವಿಶಾಲ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಸೆಕ್ಷನ್ 7A (ಭ್ರಷ್ಟ ಅಥವಾ ಕಾನೂನುಬಾಹಿರ ವಿಧಾನಗಳಿಂದ ಅಥವಾ ವೈಯಕ್ತಿಕ ಪ್ರಭಾವದ ಮೂಲಕ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರಲು ಅನಗತ್ಯ ಲಾಭವನ್ನು ಪಡೆಯುವುದು) ಅಡಿಯಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿದೆ.