ಉಪವಿಭಾಗ ಮಟ್ಟದ ನೂರು ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಮಸ್ಯೆಗಳು ಹೆಚ್ಚಳವಾಗಿದ್ದು, ಭ್ರೂಣಹತ್ಯೆ ನಡೆಯುತ್ತಿದ್ದರೂ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿಜಯನಗರ ಜಿಲ್ಲಾ ಡಿವೈಎಫ್‌ಐ ಆರೋಪಿಸಿದೆ.
ವಿಜಯನಗರ ಜಿಲ್ಲೆ ಮತ್ತು ತಾಲೂಕು ವೈದ್ಯಾಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ ಎಚ್ ಆರ್ ಅವಿಯಪ್ಪ ಅವರಿಗೆ ಮನವಿ ಸಲ್ಲಿಸಿ, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
“80ರ ದಶಕದಿಂದಲೂ ಡಿವೈಎಫ್‌ಐ ಸಂಘಟನೆಯು ಸಾರ್ವಜನಿಕ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಅನೇಕ ಜನಪರ ಹೋರಾಟ ಮಾಡುತ್ತ ಯಶಸ್ವಿಯಾಗಿದೆ. ಹೋರಾಟದ ಭಾಗವಾಗಿ ನೂರು ಹಾಸಿಗೆಯುಳ್ಳ ಆಸ್ಪತ್ರೆ ಆರಂಭವಾಯಿತು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ವಿಜಯನಗರ ಕಾಣುವಂತಾಯಿತು” ಎಂದರು.

“ನೆಪ ಮಾತ್ರಕ್ಕೆ ಉಪವಿಭಾಗ ಮಟ್ಟದ ಆಸ್ಪತ್ರೆಯಾದರೂ ಅದು ಪ್ರಯೋಜನವಿಲ್ಲ. ಹೆಸರಿಗೆ ಮಾತ್ರ ಕಾಮಗಾರಿ ನಡೆದಿದೆ. ರಕ್ತ ಪರೀಕ್ಷೆ ಘಟಕದಲ್ಲಿ ಸಿಬಿಸಿ ಯಂತ್ರ ಕೆಟ್ಟರೂ ಈವರೆಗೂ ರೋಗಿಗಳಿಗೆ ಸುಸಜ್ಜಿತ ಯಂತ್ರ ಅಳವಡಿಸಿಲ್ಲ. ಇದರಿಂದ ಜನರು ಪರದಾಡುವಂತಾಗಿದೆ. ಶಿಶು ಭ್ರೂಣಹತ್ಯೆ ಅಪರಾಧದ ಚಟುವಟಿಕೆ ನಡೆಯುತ್ತಿದ್ದರೂ ವೈದ್ಯಾಧಿಕಾರಿಗಳು, ಸಂಬಂಧಿಸಿದ ಇಲಾಖೆಯವರು ಕಂಡೂ ಕಾಣದವರಂತೆ ಜಾಣ ಕುರುಡರಾಗಿದ್ದಾರೆ” ಎಂದು ಡಿವೈಎಫ್‌ಐ ಕಾರ್ಯಕರ್ತರು ಆರೋಪಿಸಿದರು.

“ಹೊಸಪೇಟೆಯಲ್ಲಿ ಸುರಕ್ಷಿತ ಮಾತೃತ್ವ ಆಶ್ವಾಸನೆ(ಹೆರಿಗೆ ಆಸ್ಪತ್ರೆ) ಆಸ್ಪತ್ರೆಯ ಕಾಯಂ ಸಿಬ್ಬಂದಿಗಳು ರೋಗಿಗಳ ಜತೆಯಲ್ಲಿ ಅನುಚಿತವಾಗಿ ನೆಡೆದುಕೊಳ್ಳುವುದಲ್ಲದೇ ರೊಗಿಗಳಿಗೆ, ಸಂಬಂಧಿಕರಿಕೆ ಗದರಿಸುತ್ತಾರೆ. ರೋಗಿಗಳನ್ನು ಸರಿಯಾಗಿ ಪರೀಕ್ಷಿಸದೆ ಪಕ್ಕದ ಜಿಲ್ಲೆಗಳಿಗೆ ಶಿಫಾರಸು ಮಾಡುತ್ತಾರೆ. ಇದರಿಂದ ಎಷ್ಟೋ ರೋಗಿಗಳು ಮಾರ್ಗ ಮಧ್ಯದಲ್ಲೇ ಸಾವನಪ್ಪಿರುವ ಉದಾಹರಣೆಗಳಿವೆ. ಕೂಡಲೇ ಆರೋಗ್ಯ ಇಲಾಖೆಯ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಎದುರು ಡಿವೈಎಫ್‌ಐ ನೇತೃತ್ವದಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಡಿವೈಎಫ್‌ಐ ಅಧ್ಯಕ್ಷ ವಿ ಸ್ವಾಮಿ ಮಾತನಾಡಿ, “ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗೋಸ್ಕರ ಬಂದ ಕುಟುಂಬದವರ ಹತ್ತಿರ ಹಣ ವಸೂಲಿ ಮಾಡಲಾಗುತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಹಣ ಕೊಟ್ಟರೆ ಸಾಮಾನ್ಯ ಹೆರಿಗೆ, ಇಲ್ಲವಾದರೆ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ವೈದ್ಯರು ಮಾನವೀಯತೆ ಮರೆತು ನಡೆದುಕೊಳ್ಳುತ್ತಿದ್ದಾರೆ. ಭ್ರೂಣಹತ್ಯೆ ಜೋರಾಗಿಯೇ ನಡೆಯುತ್ತಿದೆ. ಇದರ ಬಗ್ಗೆ ಹಲವು ಬಾರಿ ಮಾಧ್ಯಮ, ಪತ್ರಿಕೆಗಳಲ್ಲಿ ವರದಿಯಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಇಲಾಖೆ ಅಧಿಕಾರಿಗಳೂ ಕೂಡಾ ಇತ್ತ ಗಮನಹರಿಸುತ್ತಿಲ್ಲ” ಎಂದು ಆಕ್ರೋಶದಿಂದ ನುಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಸ್ಟೇಷನ್‌ನಲ್ಲೇ ಕಾನ್ಸ್‌ಟೇಬಲ್ ಕೆನ್ನೆಗೆ ಬಾರಿಸಿದ ಯುವಕ: ವಿಡಿಯೋ ವೈರಲ್
“ಖಾಲಿಯಿರುವ ಚರ್ಮ ತಜ್ಞ ಹುದ್ದೆ, ರೇಡಿಯೋ ಲಾಜಿಸ್ಟ್, ಹಿರಿಯ ತಜ್ಞರು, ಇಸಿಜಿ ಟೆಕ್ನಿಷಿಯನ್ ನೇಮಕ ಹಾಗೂ ಡಿ ಗ್ರೂಪ್ ನೌಕರರನ್ನು ನೇಮಕ ಮಾಡಿಕೊಳ್ಳಬೇಕು. ಅಲ್ಲದೇ ಆಸ್ಪತ್ರೆ ರೋಗಿಗಳಿಗೆ ಯಾವುದೇ ಚಿಕಿತ್ಸೆಗೆ ತೊಂದರೆ ಆಗದಂತೆ, ಚಿಕಿತ್ಸಾ ಉಪಕರಣಗಳು ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕು” ಎಂದು ಒತ್ತಾಯಿಸಿದರು.
ಈಡಿಗೇರ ಮಂಜುನಾಥ, ವಿ ಸ್ವಾಮಿ, ಬಂಡೆ ತಿರುಕಪ್ಪ, ಅಲ್ತಾಫ್, ದಿವಾಕರ್, ಅಂಬರೀಶ್, ಮಾಲತೇಶ್ ಸೇರಿದಂತೆ ಇತರರು ಇದ್ದರು.