ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅನನ್ಯ. ಅವರ ಆರ್ಥಿಕ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲ. ಅವರು ಪುಸ್ತಕ ಪ್ರೇಮಿಯಾಗಿದ್ದು, ಅಘಾದ ಜ್ಞಾನವನ್ನು ಹೊಂದಿದ್ದರು ಎಂದು ಮುಖ್ಯ ಶಿಕ್ಷಕ ಸುರೇಶ್ ಅಂಗಡಿ ಸ್ಮರಿಸಿದರು.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ಸರ್ಕಾರಿ ಅನುದಾನಿತ ತುಂಗಭದ್ರಾ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಅಲ್ಪಸಂಖ್ಯಾತರ ಸಿಖ್ ಸಮುದಾಯದ ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆ ಅಲಂಕರಿಸಿದ್ದು ಅವಿಸ್ಮರಣೀಯ. ಅವರು ದೇಶ ಕಂಡ ಅತ್ಯಂತ ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದು, ಅವರು ಪ್ರಧಾನಿಯಾಗಿದ್ದ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆ ಸುಧಾರಣೆಯಾಗಿ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭಾರತ ಐದನೇ ಸ್ಥಾನದಲ್ಲಿತ್ತು. ಒಂದು ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರು ಅಮೆರಿಕಾ ಆರ್ಥಿಕ ಸುಧಾರಣೆಗೆ “ಸಿಂಗ್” ಅವರ ಸಲಹೆ ಪಡೆಯುತ್ತಿದ್ದುದ್ದಾಗಿ ಒಬಾಮಾ ಅವರೇ ಹೇಳಿಕೊಂಡಿದ್ದಾರೆ” ಎಂದು ಶಿಕ್ಷಕರು ಗುಣಗಾನ ಮಾಡಿದರು.
“ನೆಹರು, ಇಂದಿರಾಗಾಂಧಿ, ಅವರಂತೆ ಬಡಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದವರು ಮನಮೋಹನ್ ಸಿಂಗ್. ಪ್ರಧಾನಿ ಪಿ ವಿ ನರಸಿಂಹರಾವ್ ಅವಧಿಯಲ್ಲಿ ಹಣಕಾಸು ಸಚಿವರಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಸಾಧಕರು. ಮನರೇಗಾ(ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ) ಅನುಷ್ಠಾನ, ಆಧಾರ್ ಕಾರ್ಡ್ ಜಾರಿ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಭ್ರೂಣಹತ್ಯೆ ನಡೆಯುತ್ತಿದ್ದರೂ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ: ಡಿವೈಎಫ್‌ಐ ಅರೋಪ
“ಮನಮೋಹನ್ ಸಿಂಗ್ ಓರ್ವ ಪುಸ್ತಕ ಪ್ರೇಮಿ, ಖಾದ್ಯ ಪ್ರಿಯರು. ಅವರಲ್ಲಿ ಇದ್ದಂತಹ ಸಹನೆ, ತಾಳ್ಮೆ, ಸತತ ದುಡಿಮೆ
ಮೊದಲಾದ ಒಳ್ಳೆಯ ವಿಚಾರಗಳನ್ನು ಮಕ್ಕಳು ಅನುಸರಿಸಬೇಕು” ಎಂದು ಹೇಳಿದರು.
ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ, ಬಸಪ್ಪ ಕೆ ಲಂಬಾಣಿ, ಗಿಡ್ಡನಾಯ್ಕ್ ಪ್ರತಿಮಾ, ಎನ್ ಗೀತಾ, ಪಿ ಎಂ ರೇಖಾ, ಎಸ್ ಸಂಗಮೇಶ, ಸುಂಕದ ಪ್ರಸಾದ್, ಸಂತೋಷ ಕುಮಾರ್ ಎಸ್ ಸೇರಿದಂತೆ ಇತರರು ಇದ್ದರು.