ವಿಜಯನಗರ | ದ್ವೇಷವಿರುವ ಸಮಾಜದಲ್ಲಿ ಮಾನವೀಯ ಸಾಹಿತ್ಯ ಅನುವಾದ, ಸೇತುವೆ ನಿರ್ಮಾಣವಿದ್ದಂತೆ: ರಹಮತ್ ತರೀಕೆರೆ

Date:

Advertisements

ವಿದ್ವೇಷಗಳಿರುವ ಸಮಾಜದಲ್ಲಿ ಮಾನವೀಯ ಸಾಹಿತ್ಯ ಅನುವಾದ ಮಾಡುವುದು ಸೇತುವೆ ಕಟ್ಟುವ ಕೆಲಸದಂತಿದೆ ಎಂದು ಚಿಂತಕ ರಹಮತ್ ತರೀಕೆರೆ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಸಾಹಿತಿ, ಲೇಖಕಿ ನೂರ್ ಜಹಾನ್ ಅವರು ಅನುವಾದಿಸಿದ “ಗಾಲಿಬ್‌ರವರ ಗಜಲ್” ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಯ ಬಿಡುಗಡೆ ಮತ್ತು ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಕನ್ನಡದಲ್ಲಿ ಅನುವಾದಕರೆಂದರೆ ಸೇತುವೆ ಕಟ್ಟುವ ಕೆಲಸ ಮಾಡುವವರು. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ ಎಂದು ಅಲ್ಲಮ ವಿಸ್ಮಯದಿಂದ ಹೇಳುತ್ತಾನೆ. ಈ ವಿಸ್ಮಯದ ಮಾತು ಸಾಹಿತ್ಯ ಲೋಕದಲ್ಲಿ ಲೇಖಕರು ಪ್ರೇರಣೆ ಪ್ರಭಾವ ಪಡೆಯುವುದಕ್ಕೂ ಅನ್ವಯವಾಗುತ್ತದೆ. ಅತ್ಯಂತ ಗ್ರಾಮೀಣ ಸ್ಥಳೀಯ ಕವಿ ಎನ್ನಲಾದ ಬೇಂದ್ರೆಯವರು ಅರಬ್ಬಿಯಲ್ಲಿ ಬರೆಯುತ್ತಿದ್ದ ಲೆಬನಾನಿನ ಲೇಖಕ ಖಲೀಲ್ ಗಿಬ್ರಾನ್ ಮತ್ತು ಇಂಗ್ಲೆಂಡಿನ ರಸೆಲ್ ಅವರಿಂದ ಪ್ರಭಾವಿತನಾದೆನೆಂದು ಬರೆಯುತ್ತಾರೆ. ಬೆಳಗು ಜಾವ ಕವಿತೆಯಲ್ಲಿ-ಉಮರಖಯಾಮನ ಚೌಪದಿಯನ್ನು ಬೇಂದ್ರೆ ಮರುಸೃಷ್ಟಿಸುತ್ತಾರೆ” ಎಂದು ಹೇಳಿದರು.

Advertisements

“ಕುವೆಂಪು ಅವರು ರಾಮಾಯಣ ದರ್ಶನಂ ಬರೆಯುವಾಗ ಮಿಲ್ಟನ್ ಡಾಂಟೆ ಫಿರ್ದೂಸಿ ಅವರನ್ನು ನೆನೆಯುತ್ತಾರೆ. ಮಾರ್ಕ್ವೆಜ್‌ನ ಕಾದಂಬರಿಯ ಒಂದು ಸಾಲಿನಿಂದ ಪ್ರೇರಿತನಾಗಿ ನಾನು ಕುಸುಮಬಾಲೆ ಬರೆದೆನೆಂದು ದೇವನೂರರು ಹೇಳುತ್ತಾರೆ. ಈ ಕಾಲದಲ್ಲಿ ದೇಶದ ಸಂಸ್ಕೃತಿ, ಧರ್ಮ, ಭಾಷೆಗಳ ಗಡಿಮೀರಿದ ಈ ಸಂಬಂಧವು ಸಾಹಿತ್ಯಲೋಕದಲ್ಲಿ ಸಹಜವಾಗಿದೆ. ನಮ್ಮ ಪಕ್ಕದ ಗಂಗಾವತಿಯಲ್ಲಿ ರಾಘವೇಂದ್ರರಾವ್ ಜಜ್ಬ್ ಎಂಬ ಕವಿಯಿದ್ದರು. ಅವರು ಉರ್ದು ಮತ್ತು ಫಾರಸಿ ಪಂಡಿತರಾಗಿದ್ದರು. ಫಾರಸಿ ಕಾವ್ಯದ ಬಗ್ಗೆ ಅವರು ಬರೆದ ಪುಸ್ತಕ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗಿದೆ. ನಾನು ಇರಾನಿಗೆ ಹೋದಾಗ, ಅಲ್ಲಿ ಚಂದ್ರಭಾನ್ ಬ್ರಾಹ್ಮನ್ ಸ್ಕ್ವೇರ್ ಎಂಬ ಜಾಗವಿತ್ತು. ವಿಚಾರಿಸಿ ನೋಡಿದರೆ, ಮೊಘಲರ ಕಾಲದಲ್ಲಿ ಫಾರಸಿಯಲ್ಲಿ ಕಾವ್ಯ ಬರೆದ ದೆಹಲಿಯ ಕವಿ ಈತ. ಕವಿ ಇಕ್ಬಾಲರು ಏಕಕಾಲಕ್ಕೆ ಟರ್ಕಿಯ ಜಲಾಲುದ್ದೀನ್ ರೂಮಿಯಿಂದಲೂ ಜರ್ಮನಿಯ ನೀಶೆಯಿಂದಲೂ ಪ್ರಭಾವಿತರಾಗಿದ್ದರು. ಸಾಹಿತ್ಯದವರಿಗೆ, ಸಂಗೀತದವರಿಗೆ ಗಡಿಗಳೇ ಇಲ್ಲ” ಎಂದು ಹೇಳಿದರು.

“ನಾವು ಯಾವುದೇ ದೇಶವನ್ನು ಅಲ್ಲಿನ ಆಳುವ ವರ್ಗದ ಮೂಲಕ ನೋಡುತ್ತೇವೆ. ಅದು ಒಂದು ದೃಷ್ಟಿಕೋನ. ಆದರೆ ಆಳುವ ವರ್ಗಗಳು ದುಷ್ಟರಾಗಿದ್ದಲ್ಲಿ ಧರ್ಮ, ಸಂಸ್ಕೃತಿ ಮತ್ತು ದೇಶಗಳ ನಡುವೆ ಕಂದಕ ತೋಡುವ ಕೆಲಸ ಮಾಡುತ್ತಾರೆ. ನಾವು ಆಳುವ ವರ್ಗಗಳ ಮೂಲಕ ದೇಶಗಳನ್ನು ಸಮುದಾಯಗಳನ್ನು ಧರ್ಮಗಳನ್ನು ಅರ್ಥಮಾಡಿಕೊಳ್ಳಲು ಹೋಗಬಾರದು. ಜನರ ಮೂಲಕ, ಕಲಾವಿದರ ಮೂಲಕ, ಫಿಲಾಸಫರ್‌ಗಳ ಮೂಲಕ ನೋಡಬೇಕು. ಆಗ ಪಾಕಿಸ್ತಾನದ ನುಸ್ರತ್ ಫತೇಅಲಿಖಾನ್, ಮೆಹದಿಹಸನ್ ರೇಷ್ಮಾ ನೂರ್ ಜಹಾನ್ ನಮಗೆ ಕಾಣುತ್ತಾರೆ” ಎಂದು ಹೇಳಿದರು.

“ಪಾಕಿಸ್ತಾನದಲ್ಲಿ ಭಾರತದ ಲತಾ ಮಂಗೇಶ್ಕರ್, ಮಹಮದ್ ರಫಿ ಆರಾಧನೆಗೆ ಒಳಗಾಗಿರುವುದು ಕಾಣುತ್ತದೆ. ಕಲಾವಿದರು ತಮ್ಮ ಬರಹ ಅನುವಾದಗಳ ಮೂಲಕ ಮಾನವ ಸಮುದಾಯಗಳ ಮೂಲಕ ಸೇತುವೆ ಕಟ್ಟುತ್ತಾರೆ. ಹೀಗಾಗಿ ವಿದ್ವೇಷವಿರುವ ಸಮಾಜದಲ್ಲಿ ಮಾನವೀಯ ಸಾಹಿತ್ಯ ಅನುವಾದಿಸುವವರು ಸೇತುವೆ ಕಟ್ಟುವ ಕೆಲಸ ಮಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲಿಯ ಹೊಸಪೇಟೆಯ ನೂರ್ ಜಹಾನ್? ಎಲ್ಲಿಯ 19ನೇ ಶತಮಾನದ ದೆಹಲಿಯ ಮಿರ್ಜಾ ಗಾಲಿಬ್ ಎಂದು ಸೋಜಿಗವಾಗುತ್ತದೆ” ಎಂದರು.

“ಇವತ್ತು ಗಾಲಿಬನ ಕಾವ್ಯ ಬಿಡುಗಡೆಯಾಗುತ್ತಿದೆ. ನಾಳೆ ಹೊಸಪೇಟೆಯಲ್ಲಿ ಮಾರ್ಕ್ವೆಜ್‌ನ ಕಾದಂಬರಿ, ಟಾಲ್‌ಸ್ಟಾಯ್‌ನ ಕತೆ, ಅನುವಾದಗೊಂಡು ಬಿಡುಗಡೆಯಾಗಬಹುದು. ಸಾಹಿತ್ಯದಲ್ಲಿರುವ ಈ ಗಡಿಮೀರಿದ ಸಂಬಂಧ ಸ್ಥಾಪನೆ ಸಿದ್ಧಾಂತ ದರ್ಶನಗಳಿಗೂ ಅನ್ವಯವಾಗುತ್ತದೆ. ಎಲ್ಲಿಯ ಜರ್ಮನಿಯ ಕಾರ್ಲ್‌ಮಾರ್ಕ್ಸ್‌? ಎಲ್ಲಿಯ ಹೊಸಪೇಟೆ. ಇಲ್ಲಿ ಎಸ್ ಎಸ್ ಹಿರೇಮಠ ಎಂಬ ಕನ್ನಡ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಮಾರ್ಕ್ಸ್‌ವಾದದ ದೀಕ್ಷೆಯನ್ನು ಕೊಟ್ಟು ಒಂದು ಬಳಗವನ್ನು ಕಟ್ಟಿದರು. ಇದೇ ಹೊಸಪೇಟೆಯಲ್ಲಿ ಕ್ರಿಸ್ತಪೂರ್ವ ಕಾಲದಲ್ಲಿದ್ದ ಬುದ್ಧನ ದರ್ಶನ ಧಮ್ಮವನ್ನು ಸ್ವೀಕರಿಸಿದವರಿದ್ದಾರೆ. ಸಿಂಧೂ ನದಿ ದಡದಿಂದ ಹೊಸಪೇಟೆಗೆ ಬಂದು ನೆಲೆಸಿದ ಸೂಫಿಕವಿ ಮೀರಾಲಂ ನವಾಜ್ ಇದ್ದಾರೆ” ಎಂದು ತಿಳಿಸಿದರು.‌

ಈ ಸುದ್ದಿ ಓದಿದ್ದೀರಾ? ವಿಜಯನಗರ | ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಆರ್ಥಿಕ ಕೊಡುಗೆ ಅನನ್ಯ: ಸುರೇಶ್ ಅಂಗಡಿ

“ಜಾತ್ಯತೀತವಾಗಿ ಮನುಕುಲವನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಸಕಲ ಚಿಂತನೆಗಳೂ ಹೀಗೆ ಸೀಮೋಲ್ಲಂಘನೆ ಮಾಡುತ್ತಿರುತ್ತವೆ. ಇದೇ ಸೀಮೋಲ್ಲಂಘನ ತತ್ವದ ಪ್ರಕಾರ ಇಲ್ಲಿ ಮಿರ್ಜಾ ಗಾಲಿಬ್‌ರ ಕಾವ್ಯವು ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಗಾಲಿಬರ್ ಬಗ್ಗೆ ಜೀವನಚರಿತ್ರೆಗಳು ಬಂದಿವೆ. ಆದರೆ ಇದೇ ಮೊದಲ ಬಾರಿಗೆ ಕಾವ್ಯ ಬರುತ್ತಿದೆ. ನೂರ್ ಜಹಾನ್ ಅವರು ಅಭಿನಂದನಾರ್ಹ ಕಾರ್ಯ ಮಾಡಿದ್ದಾರೆ” ಎಂದು ಮಾತನಾಡಿದರು

ರಿಯಾಜ್ ಅಹ್ಮದ್ ಗೋಡೆ ಪುಸ್ತಕ ಪರಿಚಯ ಮಾಡಿದರು, ಬಳ್ಳಾರಿಯ ಕನ್ನಡ ಸಾಹಿತ್ಯ ಪರಿಷತ್‌ ರಿಷ್ಕಿ ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X