ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಬೇಕು. ಎಂಎಸ್‌ಪಿಗೆ ಕಾನೂನು ಖಾತ್ರಿ ಒದಗಿಸಬೇಕೆಂದು ಒತ್ತಾಯಿಸಿ ಪಂಜಾಬ್-ಹರಿಯಾಣ ರೈತರು ಸುದೀರ್ಘ ಹೋರಾಟ ನಡೆಸುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲಿ ಕೃಷಿ ಉತ್ಪನ್ನಗಳನ್ನು ಎಂಎಸ್‌ಪಿ ಮೂಲಕವೇ ಖರೀದಿಸುತ್ತವೆಂದು ಹೇಳಿರುವ ಕೇಂದ್ರ ಸರ್ಕಾರ, ಈವರೆಗೆ ಎಂಎಸ್‌ಪಿ ಜಾರಿಗೆ ತಂದಿಲ್ಲ. ಮಾತ್ರವಲ್ಲದೆ, ಕಾನೂನು ಖಾತ್ರಿಯನ್ನೂ ಒಗಿಸಿಲ್ಲ. ಹೀಗಾಗಿ, ರೈತರು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಡಿಸೆಂಬರ್ 30ರಂದು ಪಂಜಾಬ್ ಬಂದ್ ಮತ್ತು ಜನವರಿ 4ರಂದು ‘ಕಿಸಾನ್ ಮಹಾ ಪಂಚಾಯತ್’ ನಡೆಸಲು ಕರೆ ಕೊಟ್ಟಿದ್ದಾರೆ.
ಪಂಜಾಬ್ ರೈತರು ಪಂಜಾಬ್-ಹರಿಯಾಣ ನಡುವಿನ ಖನೌರಿ-ಶಂಭೂ ಗಡಿಯಲ್ಲಿ ಸುಮಾರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ರೈತ ನಾಯಕ ಜಗಜೀತ್ ಸಿಂಗ್ ದಲೈವಾಲ್ ಅವರು 33 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸದ ಪಂಜಾಬ್ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
“ಸಾಲದ ಹೊರೆಯಿಂದ ದೇಶಾದ್ಯಂತ ಏಳು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರನ್ನು ರಕ್ಷಿಸುವುದು ಅನಿವಾರ್ಯ. ರೈತರ ಉಳಿವಿಗಾಗಿ ನಾನು ಉಪವಾಸ ಕುಳಿತಿದ್ದೇನೆ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ನಾನು ಗೆಲ್ಲುತ್ತೇನೆ ಅಥವಾ ಸಾಯುತ್ತೇನೆ. ಆದರೆ, ನನ್ನನ್ನು ಮುಟ್ಟಲು ಸರ್ಕಾರ ಬಿಡಬೇಡಿ” ಎಂದು ದಲೈವಾಲ್ ಅವರು ಹೋರಾಟನಿರತ ರೈತರಿಗೆ ಹೇಳಿದ್ದಾರೆ.
ಇದೆಲ್ಲದರ ಬೆನ್ನಲ್ಲೇ, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಝ್ದೂರ್ ಮೋರ್ಚಾ ಸಂಘಟನೆಗಳು ಡಿಸೆಂಬರ್ ಡಿಸೆಂಬರ್ 30ರಂದು ಪಂಜಾಬ್ ಬಂದ್‌ಗೆ ಕರೆಕೊಟ್ಟಿದೆ. ಅಲ್ಲದೆ, ಜನವರಿ 4ರಂದು ಬೃಹತ್ ಕಿಸಾನ್ ಮಹಾ ಪಂಚಾಯತ್ ನಡೆಸಲು ನಿರ್ಧರಿಸಿವೆ.
“ನಾವು ಜನವರಿ 4ರಂದು ಖನೌರಿಯಲ್ಲಿ ಬೃಹತ್ ಕಿಸಾನ್ ಮಹಾ ಪಂಚಾಯತ್ ನಡೆಸಲಿದ್ದೇವೆ. ವಿವಿಧ ರಾಜ್ಯಗಳ ರೈತರು ಪಾಲ್ಗೊಳ್ಳಲಿದ್ದಾರೆ” ಎಸ್‌ಕೆಎಂ ನಾಯಕ ಕಾಕಾ ಸಿಂಗ್ ಕೋತ್ರಾ ತಿಳಿಸಿದ್ದಾರೆ.