ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿದಂತೆ ಇತರೆ ಆರು ಜನರಿಂದ ಬೆದರಿಕೆ ಇರುವುದಾಗಿ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಭಾಲ್ಕಿ ತಾಲ್ಲೂಕಿನ ಕಟ್ಟಿತುಗಾಂವ್ ಗ್ರಾಮದ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ (26) ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾನುವಾರ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಸಾಂತ್ವನ ಹೇಳಿದರು. ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿ ಧೈರ್ಯ ತುಂಬಿದರು.
ಇದೇ ವೇಳೆ ಸರ್ಕಾರ ಮತ್ತು ವೈಯಕ್ತಿವಾಗಿ ಮೃತ ಸಚಿನ್ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವರು ಹೇಳಿದರು.
ಬಳಿಕ ಸಚಿವರು ಮಾಧ್ಯಮದವರೊಂದಿಗೆ ಮಾತಾಡಿ, ʼಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಯುವಕ ಸಚಿನ ಪಾಂಚಾಳ ಆತ್ಮಹತ್ಯೆ ಸುದ್ದಿ ಅತ್ಯಂತ ದುಃಖಕರ ಮತ್ತು ನೋವಿನ ಸಂಗತಿ. ಇದು ಖೇದಕರ ವಿಷಯ. ನಾನು ಮತ್ತು ನಮ್ಮ ಸರಕಾರ ದುಖತಪ್ತ ಸಚಿನ್ ಕುಟುಂಬಸ್ಥರ ಜೊತೆಗಯಲ್ಲಿದ್ದೇವೆ. ಅವರ ದುಃಖದಲ್ಲಿ ಶಾಮೀಲಾಗಿದ್ದೇವೆ. ಕುಟುಂಬಸ್ಥರೊಂದಿಗೆ ಸಮಾಲೋಚನೆ ಮಾಡಿದ್ದೇನೆ. ಬಹಳಷ್ಟು ವಿಷಯಗಳು ನನ್ನ ಗಮನಕ್ಕೆ ತಂದಿದ್ದಾರೆ’ ಎಂದರು.
‘ಸಚಿನ್ ಆತ್ಮಹತ್ಯೆ ಮಾಡಿಕೊಂಡ ಕುರಿತು ದೂರು ಕೊಡಲು ಅವರ ಕುಟುಂಬದವರು ಎರಡ್ಮೂರು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದರೆ ಪೊಲೀಸರು ಸಕಾಲದಲ್ಲಿ ಅವರ ಪ್ರಕರಣವನ್ನು ಸ್ವೀಕರಿಸಲಿಲ್ಲ ಎಂಬ ದೂರು ಅತ್ಯಂತ ಮಹತ್ತರವಾದ ದೂರು ಆಗಿದೆ. ಈ ಕುರಿತು ಈಗಾಗಲೇ ಕೆಲ ಪೊಲೀಸರ ಮೇಲೆ ಕ್ರಮ ಜರುಗಿಸಲಾಗಿದೆ. ಯಾವ್ಯಾವ ಠಾಣೆಯ ಪೊಲೀಸರು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಅವರ ಮೇಲೆ ನಿಯಮಾನುಸಾರ ಕ್ರಮ ಆಗುತ್ತದೆ’ ಎಂದು ಭರವಸೆ ನೀಡಿದರು.
ಸಚಿನ್ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ರೈಲ್ವೇ ಪೊಲೀಸರು ಈಗಾಗಲೇ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಸಚಿನ್ ಸಾವಿಗೆ ಕೆಲವರು ಪ್ರಚೋದನೆ, ಕಿರುಕುಳ ಕೊಟ್ಟಿದ್ದಾರೆ ಎಂದು ಮರಣಪತ್ರದಲ್ಲಿ ಬರೆದಿರುವ ಕುರಿತು ರಾಜ್ಯ ಸರ್ಕಾರ ಪಕ್ಷಾತೀತವಾಗಿ, ಪಾರದರ್ಶಕವಾಗಿ ಸಿಓಡಿ ಸೇರಿದಂತೆ ಇತರೆ ಸಂಸ್ಥೆಗೂ ಒಪ್ಪಿಸಿ ತನಿಖೆ ನಡೆಸಲು ಬದ್ಧವಾಗಿದೆ. ಸಚಿನ್ ಸಾವಿಗೆ ಕಾರಣರಾದ ತಪ್ಪಿಸ್ಥರಿಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸಿಬಿಐ ತನಿಖೆಗೆ ಒಪ್ಪಿಸಲು ಕುಟುಂಬಸ್ಥರ ಆಗ್ರಹ :
ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ನಮಗೆ ನ್ಯಾಯ ಒದಗಿಸುವಂತೆ ಸಚಿನ್ ಪಾಂಚಾಳ ಕುಟುಂಬದವರು ಸಚಿವ ಈಶ್ವರ ಖಂಡ್ರೆ ಅವರಿಗೆ ಒತ್ತಾಯಿಸಿದರು.
ʼಇದನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಿಎಂ ಅವರೊಂದಿಗೆ ಮಾತಾಡಿದ್ದೇನೆ. ನಾನು ನಿಮ್ಮ ಶಾಸಕ, ಮಂತ್ರಿ ಇದ್ದೇನೆ, ನೀವು ನನ್ನ ಕ್ಷೇತ್ರದವರು ಇದ್ದೀರಿ. ಸರಕಾರ ನಿಮ್ಮ ಜೊತೆಯಲ್ಲಿದೆ ಎಂದು ಧೈರ್ಯ ತುಂಬಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿನ್ ಕುಟುಂಬದವರು ʼಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ನಮ್ಮ ದೂರು ಪಡೆಯದೇ ನಿರ್ಲಕ್ಷ್ಯ ಮಾಡಿದ್ದಾರೆ. ಠಾಣೆಗೆ ಹೋದಾಗ ಪೊಲೀಸರು ಮಹಿಳೆಯರಿಗೆ ಗೌರವ ಕೊಟ್ಟು ಮಾತಾಡಲಿಲ್ಲ. ನಾವು ಮಧ್ಯಮ ವರ್ಗದವರು ಅಂತ ಗೌರವ ಕೊಡಲಿಲ್ಲವೇ? ಯಾಕೆ ನಮಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲವೇ? ಎಂದು ಸಚಿವರಿಗೆ ಪ್ರಶ್ನಿಸಿದರು.
ಈಗಾಗಲೇ ಈ ಪ್ರಕರಣ ಸಂಬಂಧ ತಪ್ಪಿಸ್ಥ ಪೊಲೀಸರ ಮೇಲೆ ಕ್ರಮ ಜರುಗಿಸಲಾಗಿದೆ. ಈ ಪ್ರಕರಣವನ್ನು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿನ್ ಕುಟುಂಬದವರು ʼನಾಲ್ಕು ದಿನಗಳಿಂದ ತನಿಖೆ ಮಾಡುತ್ತಿದ್ದಾರೆ, ಏನೂ ಕ್ರಮ ಇಲ್ಲ. ದೂರು ನೀಡಲು ಹೋದಾಗ ನಿರ್ಲಕ್ಷ್ಯ ತೋರಿದ ಮೇಲಾಧಿಕಾರಿಗಳ ಮೇಲೆ ಮೊದಲು ಕ್ರಮ ಆಗಬೇಕುʼ ಎಂದು ಒತ್ತಾಯಿಸಿದರು.
ಈ ವಿಷಯದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು. ದುಃಖದಲ್ಲಿರುವ ಕುಟುಂಬದವರಿಗೆ ಸಾಂತ್ವನ, ಧೈರ್ಯದ ಅಗತ್ಯವಿದೆ. ನಮ್ಮ ಸರ್ಕಾರ ಅವರೊಂದಿಗೆ ಇದೆ. ನಾನು ಬೆಳಗಾವಿಯಲ್ಲಿದ್ದ ಕಾರಣ ಭೇಟಿ ಮಾಡಲು ಆಗಿರಲಿಲ್ಲ. ನಿನ್ನೆ ತಡರಾತ್ರಿ ಬಂದಿದ್ದೇನೆ ಎಂದರು.
ಪೊಲೀಸರ ವಿರುದ್ಧ ಆಕ್ರೋಶ :
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಚಿನ್ ಮನೆಗೆ ಭೇಟಿ ನೀಡಿದ ವೇಳೆ ಅವರೊಂದಿಗೆ ಪೊಲೀಸರು ಮನೆಯೊಳಗೆ ಹೋಗುವ ವೇಳೆ ಸಚಿನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ʼಜಿಲ್ಲಾ ಪೊಲೀಸರು ತಮಗೆ ದೂರು ಪಡೆದಿಲ್ಲ, ನ್ಯಾಯ ಒದಗಿಸಿ ಕೊಟ್ಟಿಲ್ಲ ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸೇರಿದಂತೆ ಇತರೆ ಪೊಲೀಸರು ವಿರುದ್ಧ ಸಚಿನ್ ಕುಟಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ಮನೆಯಿಂದ ಹೊರಹೋಗುವಂತೆ ಪಟ್ಟು ಹಿಡಿದರು. ಬಳಿಕ ಎಸ್ಪಿ ಪ್ರದೀಪ ಗುಂಟಿ, ಡಿವೈಎಸ್ಪಿ ನ್ಯಾಮಗೌಡರು ಸೇರಿದಂತೆ ಪೊಲೀಸರು ಮನೆಯಿಂದ ಹೊರಹೋದರು.