ಬಿಜೆಪಿಯು ಮತದಾರರ ಅಂಕಿಅಂಶಗಳನ್ನು ದುರ್ಬಳಕೆ ಮಾಡುತ್ತಿದೆ. ಈ ಮೂಲಕ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯನ್ನು ಅನ್ಯಾಯದ ಮಾರ್ಗದಲ್ಲಿ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾನುವಾರ ಆರೋಪಿಸಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ತಮ್ಮ ವಿಧಾನಸಭಾ ಕ್ಷೇತ್ರವಾದ ನವದೆಹಲಿಯಲ್ಲಿ ಮತದಾರರ ಅರ್ಜಿಗಳನ್ನು ಅಳಿಸುವ ಮೂಲಕ ಬಿಜೆಪಿ ಆಪರೇಷನ್ ಕಮಲವನ್ನು ನಡೆಸುತ್ತಿದೆ ಎಂದು ದೂರಿದರು.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | ಎಂದಿಗೂ ಅತಿಯಾದ ಆತ್ಮವಿಶ್ವಾಸ ಇರಬಾರದು: ಅರವಿಂದ್ ಕೇಜ್ರಿವಾಲ್
“ಆಪರೇಷನ್ ಕಮಲ ಈಗ ನನ್ನ ಕ್ಷೇತ್ರವನ್ನು ತಲುಪಿದೆ. ಅವರು ಚುನಾವಣಾ ಫಲಿತಾಂಶವನ್ನು ಬದಲಾಯಿಸಲು ಮತದಾರರ ಪಟ್ಟಿಯನ್ನು ದುರ್ಬಳಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.
“ಇದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಇಂತಹ ದುಷ್ಕೃತ್ಯವನ್ನು ತಡೆಗಟ್ಟಲು ಚುನಾವಣಾ ಆಯೋಗವು ಕಟ್ಟುನಿಟ್ಟಾದ ಕ್ರಮವನ್ನು ಕೈಗೊಳ್ಳಬೇಕು ಎಂದು ನಾವು ಮನವಿ ಮಾಡುತ್ತೇವೆ” ಎಂದರು.
ಇನ್ನು ದೆಹಲಿ ಮುಖ್ಯಮಂತ್ರಿ ಆತಿಶಿ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಕೂಡಾ ಇದೇ ಆರೋಪವನ್ನು ಮಾಡಿದ್ದಾರೆ. ಒಂದೇ ಕ್ಷೇತ್ರದಲ್ಲಿ 11,000 ಮತದಾರರನ್ನು ಅಳಿಸುವಂತೆ ಬಿಜೆಪಿ ಅರ್ಜಿಗಳನ್ನು ಸಲ್ಲಿಸಿದೆ ಎಂದು ಆರೋಪಿಸಿದರು. ಆದರೆ ಮುಖ್ಯ ಚುನಾವಣಾ ಆಯುಕ್ತರ ಮಧ್ಯಸ್ಥಿಕೆಯಿಂದ ಈ ಕ್ರಮವನ್ನು ನಿಲ್ಲಿಸಲಾಯಿತು ಎಂದರು.
