ಗೌರಿ ಗೋನಾಳ ಅವರು ಹುಟ್ಟಿದಾಗಿನಿಂದ ಅವರ ಅಜ್ಜಿ ಹಾಡುತ್ತಿದ್ದ ಸೋಬಾನೆ ಪದಗಳನ್ನು ನೋಡುತ್ತ ಕಲಿತು ಅದನ್ನು ಮುಂದುವರೆಸುತ್ತ ಸಮಾಜದಲ್ಲಿ ಜನಪ್ರಿಯ ಗಾಯಕರಾಗಿ ಹೆಸರುವಾಸಿಯಾಗಿ ಹೊರಹೊಮ್ಮಿದ ಗಾಯಕಿಗೆ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಮೂಲ ನಿವಾಸಿ. ಅವರು ಶಾಲೆ-ಕಾಲೇಜುಗಳಿಂದಲೂ ಹಾಡುಗಳನ್ನು ಹಾಡುತ್ತ ವಿಶೇಷವಾಗಿ ಜನಪದ ಹಾಡುವುದರಲ್ಲಿ ಮುಂದಾಗಿ ಯುವ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.
ಯುವಜನ ಮೇಳದಲ್ಲಿ ಜಾನಪದ, ತತ್ವಪದದ ಹಾಡುಗಳ ಮೂಲಕವೇ ಜನಪ್ರಿಯ ಗಾಯಕರಾಗಿ ಹಳ್ಳಿ ಸೊಗಡಿನ ದೇಸಿ ಧ್ವನಿಯಲ್ಲಿ ಹಾಡುವ ಕಂಚಿನ ಕಂಠದ ಮೂಲಕ ಅಪಾರ ಅಭಿಮಾನಿ ಬಳಗಕ್ಕೆ ಪಾತ್ರರಾದವರು.
ಗಾಯನದೊಂದಿಗೆ ಹೋರಾಟದ ಹಾಡುಗಳನ್ನು ಜನರ ಧ್ವನಿ, ಪರಿಸರ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಅಸ್ಪೃಶ್ಯತೆ, ಲಿಂಗತಾರತಮ್ಯ, ಮುಟ್ಟು, ಶಿಕ್ಷಣ, ಆರೋಗ್ಯ ಹೀಗೆ ಹಲವಾರು ಪದಗಳನ್ನು ಹಳ್ಳಿಗಳಲ್ಲಿ ಹಾಡುತ್ತಾರೆ. ಜನಪದಗಳನ್ನು ಹಾಡುತ್ತ ಹೆಣ್ಣುಮಕ್ಕಳ ತಂಡ ಕಟ್ಟಿ ಹಲವಾರು ಪದಗಳನ್ನು ಕಲಿಸಲಾಗಿದೆ ಮತ್ತು ಪ್ರದರ್ಶನ ಮಾಡಲಾಗಿದೆ. ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಹಲವಾರು ಜೀವಪರ, ಜನಪರ ಸಂಘಟನೆಗಳೊಂದಿಗೆ ಸೇರಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಲ್ಲದೆ ದಲಿತ ಸಾಂಪ್ರದಾಯಿಕ ಶೈಲಿಯ ಜನಪದ ಮತ್ತು ಬಂಡಾಯ ಸಾಹಿತ್ಯದ ಹಾಡುಗಳ ಹಾಡಲು “ಧರಣಿ ಕಲಾ ಬಳಗ” ಸ್ಥಾಪಿಸಿ ನಾಡಿನಾದ್ಯಂತ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರಂತರ ಸಕ್ರಿಯವಾಗಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ, ಲಿಂಗತಾರತಮ್ಯ, ಅಸ್ಪೃಶ್ಯತೆ ನಿರ್ಮೂಲನೆಗಾಗಿ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಧ್ವನಿಗೂಡಿಸುತ್ತಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀಳುವಂತಿರುವ ಶಾಲಾ ಕೊಠಡಿಗಳು; ವಿದ್ಯಾರ್ಥಿಗಳಿಗೆ ಬಯಲೇ ಪಾಠಶಾಲೆ!
“Folk Singer Gouri” ಎಂಬ ಜನಪದ, ಜೀವಪರ ಹಾಡಿನ ಯೂಟ್ಯೂಬ್ ಚಾನೆಲ್ ಸ್ಥಾಪಿಸಿ ಹೆಸರುವಾಸಿಯಾಗಿದ್ದಾರೆ. ಇವರ ಸಾಮಾಜಿಕ ಕಾರ್ಯ ಪರಿಗಣಿಸಿ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ಈ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
