ಕಳೆದ ಹತ್ತು ವರ್ಷದಿಂದ ನೀರು ಸರಬರಾಜು ಮಾಡುತ್ತಿದ್ದ ಕೊಳವೆಬಾವಿ ಬತ್ತಿ ಹೋದ ಹಿನ್ನಲೆ ಕಳೆದ ಆರು ತಿಂಗಳಿಂದ ನೀರಿನ ಸಮಸ್ಯೆ ಎದುರಾಗಿದೆ. ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕೊರೆದ ಕೊಳವೆಬಾವಿ ಖಾಸಗಿ ವ್ಯಕ್ತಿಗಳು ನಮ್ಮ ಬೋರ್ ವೆಲ್ ಎಂದು ಪೈಪ್ ಲೈನ್ ಗೆ ಸಂಪರ್ಕ ಮಾಡಲು ಬಿಡುತ್ತಿಲ್ಲ. ಈ ಕೂಡಲೇ ಸಂಬಂಧಪಟ್ಟ ಜೆಜೆಎಂ ಇಂಜಿನಿಯರ್ ಗಳು ಸ್ಥಳಕ್ಕೆ ಬಂದು ನೀರಿನ ಸಂಪರ್ಕ ಮಾಡಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಕಡಬ ಹೋಬಳಿ ಕಂಬೇರಹಟ್ಟಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣನಕೆರೆ ಮಕರೆ ಗ್ರಾಮ ಕಂಬೇರಹಟ್ಟಿ ಸುಮಾರು 80 ಮನೆಗಳ ಗ್ರಾಮ. ಇಲ್ಲಿಗೆ ನೀರಿನ ಸಮಸ್ಯೆ ಎದುರಾಗಿದೆ. ಪರ್ಯಾಯ ವ್ಯವಸ್ಥೆಯಾಗಿ ಪಕ್ಕದ ಗ್ರಾಮದಿಂದ ನೀರು ಸರಬರಾಜು ಮಾಡಿದರೂ ಸಮರ್ಪಕ ವ್ಯವಸ್ಥೆ ಮಾಡಲಾಗಿಲ್ಲ. ಮನೆ ಮನೆಗೆ ನಳ ಸಂಪರ್ಕ ಯೋಜನೆ ಕಾಮಗಾರಿ ಮುಗಿದಿದ್ದು ಕೊಳವೆಬಾವಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಚೇರಿ ಮುಂದೆ ಖಾಲಿ ಕೊಡ ಪ್ರದರ್ಶನ ಮಾಡಿ ಘೋಷಣೆ ಕೂಗಿದರು.

ಸ್ಥಳೀಯ ಮುಖಂಡ ಜುಂಜೇಗೌಡ ಮಾತನಾಡಿ ನೀರಿನ ಸಮಸ್ಯೆ ಬಗೆಹರಿಸಲು ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ತುರ್ತು ಮಾಡಲಾಗಿದೆ. ಎಲ್ಲಾ ಮನೆಗಳಿಗೂ ನೀರಿನ ನಳ ಸಂಪರ್ಕ ಮಾಡಲಾಗಿ ದಾಸರಕಲ್ಲಹಳ್ಳಿ ರಸ್ತೆಯ ಬದಿ ಕೊಳವೆಬಾವಿ ಕೊರೆಸಲಾಗಿದೆ. ಅಲ್ಲಿನ ಪಕ್ಕದ ಜಮೀನಿನ ನಾಗರಾಜು ಕುಟುಂಬ ಪಂಪ್ ಮೋಟಾರ್ ಅಳವಡಿಕೆ ಸಮಯದಲ್ಲಿ ಈ ಸ್ಥಳ ನಮ್ಮದು ಎಂದು ಕೆಲಸವನ್ನು ಸ್ಥಗಿತ ಮಾಡಿರುತ್ತಾರೆ. ಪಂಪ್ ಮೋಟಾರ್ ಬೋರ್ ನಲ್ಲಿ ಇದ್ದರೆ ನಾವೇ ತೆಗೆದುಕೊಂಡು ಹೋಗುವ ಬೆದರಿಕೆ ಹಾಕಿದ ಹಿನ್ನಲೆ ಸ್ಥಳೀಯ ಗ್ರಾಮಸ್ಥರು ಕೊಳವೆಬಾವಿ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ ಎಂದು ತಿಳಿಸಿ ಕೂಡಲೇ ಕ್ರಮವಹಿಸಲು ಒತ್ತಾಯಿಸಿದರು.
ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬೇರಹಟ್ಟಿ ಗ್ರಾಮದಿಂದ ದಾಸರಕಲ್ಲಹಳ್ಳಿ ತಲುಪುವ ಲೋಕೋಪಯೋಗಿ ಇಲಾಖೆ ಸಂಬಂಧಿಸಿದ ರಸ್ತೆ ಬದಿ ನಿಯಮಾನುಸಾರ ಕೊಳವೆಬಾವಿ ಕೊರೆಸಲಾಗಿದೆ. ಅಡ್ಡಿ ಪಡಿಸಿರುವ ಕುಟುಂಬಕ್ಕೆ ಸಂಬಂದಿಸದ ಈ ಜಾಗವನ್ನು ಕೊಳವೆಬಾವಿ ಸಹಿತ ಕಬಳಿಕೆ ನಡೆಯುವ ಮುನ್ನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಿ ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
ತದ ನಂತರ ತಾಲ್ಲೂಕು ಆಡಳಿತ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿ ನೀರಿನ ಸಂಪರ್ಕ ಮಾಡಿಕೊಡಲು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪಾಲಾಕ್ಷಯ್ಯ, ತಮ್ಮಯ್ಯ, ವೀರೇಶ್, ಲಕ್ಕಣ್ಣ, ಬಸವರಾಜು, ಗಂಗಾಧರ್, ದೊಡ್ಡೇಗೌಡ, ಈರಮ್ಮ, ಗಂಗಮ್ಮ ಇತರರು ಇದ್ದರು.