ಹತ್ತಾರು ವರ್ಷಗಳಿಂದ ಅನುಭವದಲ್ಲಿರುವ ದಲಿತರ ಜಮೀನನ್ನು ಕಬಳಿಸಲು ಬಲಾಢ್ಯರು ಪ್ರಯತ್ನಿಸುತ್ತಿದ್ದಾರೆಂದು ತಾಲೂಕು ಛಲವಾದಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕುಣಿಕೇನಹಳ್ಳಿ ಜಗದೀಶ್ ಆರೋಪಿಸಿದ್ದಾರೆ.
ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ಬೋರೇಗೌಡನ ಬಾವಿಯ ಬಳಿಯಿರುವ ಬಳ್ಳೆಕಟ್ಟೆಯ ಸರ್ವೇ ನಂಬರ್ 24/1 ರಲ್ಲಿ ದಲಿತರಾದ ಜವರಯ್ಯನವರ ಕುಟುಂಬ ಸುಮಾರು 3.34 ಕುಂಟೆ ಜಮೀನನ್ನು ಅನುಭವಿಸುತ್ತಿದೆ. ಜವರಯ್ಯ ನಿಧನರಾದ ನಂತರ ಅವರ ಪತ್ನಿ ಬೇಲೂರಮ್ಮನ ಹೆಸರಿನಲ್ಲಿ ಜಮೀನಿನ ಎಲ್ಲಾ ದಾಖಲಾತಿಗಳು ಇವೆ. ಆದರೆ ಅದೇ ಗ್ರಾಮದ ಮೇಲ್ವರ್ಗದ ರಾಜಕೀಯ ಪ್ರಭಾವಿ ವ್ಯಕ್ತಿಯೋರ್ವರು ಈ ಜಮೀನಿನಲ್ಲಿ 26 ಕುಂಟೆ ಜಮೀನನ್ನು ಕುಟುಂಬದ ಸದಸ್ಯರು ತಮಗೆ ಮಾರಾಟ ಮಾಡಿದ್ದಾರೆಂದು ಹೇಳಿ ಜಮೀನು ಬಿಟ್ಟು ಕೊಡುವಂತೆ ಕುಟುಂಬದ ಸದಸ್ಯರನ್ನು ಒತ್ತಾಯಿಸುತ್ತಿದ್ದಾರೆಂದು ದೂರಿದರು.
ಅಮಾಯಕರು ಮತ್ತು ಅಶಕ್ತರಾಗಿರುವ ಈ ಬೇಲೂರಮ್ಮನವರಿಗೆ ಮೂವರು ಗಂಡು ಮಕ್ಕಳು ಇದ್ದಾರೆ. ಮಕ್ಕಳಿಗೆ ತಿಳಿಯದಂತೆ ಬೇಲೂರಮ್ಮನ ಮೇಲೆ ಒತ್ತಡ ತಂದು ತಮ್ಮ ಹೆಸರಿಗೆ 26 ಕುಂಟೆ ಜಮೀನನ್ನು ಮಾಡಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ವಯೋವೃದ್ಧರಾಗಿರುವ ಅಲ್ಲದೇ ಅವಿದ್ಯಾವಂತರೂ ಆಗಿರುವ ಬೇಲೂರಮ್ಮನವರಿಗೆ ಆಮಿಷವೊಡ್ಡಿಯೋ?, ಬೆದರಿಸಿಯೋ ಜಮೀನನ್ನು ಬರೆಸಿಕೊಳ್ಳಲು ಬಲಾಢ್ಯರು ಮುಂದಾದಲ್ಲಿ ತಾಲೂಕು ಛಲವಾದಿ ಮಹಾಸಭಾದ ವತಿಯಿಂದ ತಾಲೂಕು ಕಛೇರಿ ಮತ್ತು ಪೋಲಿಸ್ ಠಾಣೆ ಮುಂದೆ ಧರಣಿ ಹೂಡುವುದು ಅನಿವಾರ್ಯವಾಗಲಿದೆ ಎಂದೂ ಕುಣಿಕೇನಹಳ್ಳಿ ಜಗದೀಶ್ ಎಚ್ಚರಿಸಿದ್ದಾರೆ.
ಜಮೀನು ಬೇಲೂರಮ್ಮನವರ ಹೆಸರಿನಲ್ಲಿ ಇರುವುದರಿಂದ ಈ ಜಮೀನಿನ ತಂಟೆಗೆ ಹೋಗಬಾರದೆಂದು ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ಸಹ ತರಲಾಗಿದೆ. ಆದಾಗ್ಯೂ ಸಹ ಬೇಲೂರಮ್ಮನವರಿಗೆ ಕಿರುಕುಳ ನೀಡಲಾಗುತ್ತಿದೆ. ಅವರು ತಮ್ಮ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಬಿಡುತ್ತಿಲ್ಲ ಎಂದು ಜಗದೀಶ್ ಆಪಾದಿಸಿದರು.
ಬೇಲೂರಮ್ಮರ ಹೆಸರಿನಲ್ಲಿ ಜಮೀನಿನ ಎಲ್ಲ ದಾಖಲಾತಿಗಳು ಇವೆ. ಆದರೂ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಜಮೀನು ಕಬಳಿಕೆ ಮಾಡುವಂತಹ ವ್ಯಕ್ತಿಗಳು ಜಮೀನಿನ ದಾಖಲಾತಿಗಳು ಇದ್ದರೆ ಕಾನೂನು ಹೋರಾಟ ಮಾಡಲಿ. ಅದನ್ನು ಬಿಟ್ಟು ನಮ್ಮ ಜಮೀನು ಎಂದು ದಬ್ಬಾಳಿಕೆ ಮಾಡುವುದು ಸರಿಯಲ್ಲ. ಇದೇ ರೀತಿ ದಲಿತರ ಮೇಲೆ ದಬ್ಬಾಳಿಕೆ ಮಾಡಿದರೆ ಛಲವಾದಿ ಮಹಾಸಭಾದಿಂದ ಉಗ್ರ ಹೋರಾಟ ಮಾಡಲಾಗುವುದು. ಕೂಡಲೇ ತಾಲೂಕು ಆಡಳಿತ ಹಾಗೂ ಪೋಲೀಸ್ ಇಲಾಖೆ ದಲಿತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ಬೇಲೂರಮ್ಮ ಮಕ್ಕಳಾದ ನರಸಿಂಹಮೂರ್ತಿ, ಶಿವಣ್ಣ, ಶೇಖರಯ್ಯ, ಛಲವಾದಿ ಮಹಾಸಭಾದ ಮುಖಂಡರಾದ ಬಾಳೇಕಾಯಿ ಶೇಖರ್, ಮಧು, ಮಹಾದೇವಯ್ಯ, ತಮ್ಮಯ್ಯ, ಕೃಷ್ಣಮೂರ್ತಿ, ಪ್ರಸನ್ನಕುಮಾರ್, ಲೋಕೇಶ್, ಸಾವಿತ್ರಮ್ಮ, ಮಹೇಶ್ ಸೇರಿದಂತೆ ಇತರರು ಇದ್ದರು.
