ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಅಗತ್ಯವಿರುವ ಹತ್ತಾರು ಮೂಲಭೂತ ಸಮಸ್ಯೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಡಿ.31 ರಿಂದ ಅನಿರ್ಧಿಷ್ಟಾವಧಿಯ ಮುಷ್ಕರಕ್ಕೆ ಕೆಎಸ್ ಆರ್ ಟಿ ಸಿಯ ಎಲ್ಲಾ ಸಿಬ್ಬಂದಿ ಸಹಕರಿಸಬೇಕೆಂದು ಸಿಐಟಿಯುನ ಮುಖಂಡ ಎ.ಆರ್.ದೇವರಾಜು ಕರೆ ನೀಡಿದ್ದಾರೆ.
ತುರುವೇಕೆರೆ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಜಾಗೃತಿ ಜಾಥಾದೊಂದಿಗೆ ಆಗಮಿಸಿದ ಅವರು ರಾಜ್ಯದ ಕೆ ಎಸ್ ಆರ್ ಟಿ ಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಷನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಸಿಐಟಿಯು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ನೌಕರರ ಸಂಘ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಸೇರಿದಂತೆ ಹತ್ತು ಹಲವಾರು ಸಂಘಟನೆಗಳ ಆಶ್ರಯದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುಮಾರು 38 ತಿಂಗಳ ಸಂಬಳ ಬಾಕಿ ಇತ್ಯರ್ಥ ಪಡಿಸಬೇಕು. ಜನವರಿ 1 ರಿಂದ ಹೊಸ ವೇತನ ನೀತಿ ಪ್ರಕಟಿಸಬೇಕು. ಶಕ್ತಿ ಯೋಜನೆಯಿಂದ ನಿಗಮಕ್ಕೆ ಸಾಕಷ್ಟು ಲಾಭವಾಗಿದ್ದರೂ ಸಹ ನೌಕರರನ್ನು ಕಡೆಗಣಿಸಲಾಗಿದೆ. ಅಲ್ಲದೇ ಸಿಬ್ಬಂದಿಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ನೌಕರರ ಹಲವಾರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಪ್ರಯೋಜವಾಗಿಲ್ಲ ಎಂದರು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿತ್ತು. ನಮ್ಮ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಪರಿಹರಿಸುವ ಭರವಸೆಯನ್ನು ಸಚಿವ ದಿನೇಶ್ ಗುಂಡೂರಾವ್ ರವರು ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಮ್ಮ ಹೋರಾಟ ಅನಿವಾರ್ಯವಾಗಿದೆ ಎಂದು ಎ.ಆರ್. ದೇವರಾಜ್ ಹೇಳಿದರು.
ಡಿ.31 ರಿಂದ ಆರಂಭವಾಗುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಎಲ್ಲಾ ಸಂಘಟನೆಯವರು ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು.
ಇದೇ ಸಂಧರ್ಭದಲ್ಲಿ ಎಐಟಿಯುಸಿ ಯ ಮುಖಂಡ ಕೆ.ಎಚ್.ದೇವರಾಜು, ತುರುವೇಕೆರೆಯ ಎಸ್ ಎಫ್ ಐ ಮುಖಂಡ ಟಿ.ಎಚ್.ಸತೀಶ್, ರಾಜಣ್ಣ ಇದ್ದರು.
ವರದಿ- ಎಸ್. ನಾಗಭೂಷಣ್