ಎಲ್ಲ ಸರಕಾರಗಳು ಜನ ವಿರೋಧಿ ಹಾಗೂ ರೈತ ವಿರೋಧಿಯೇ ಆಗಿವೆ. ನಮಗೇನು ಬೇಕು, ಅವರೇ ಬರ್ತಾರೆ, ನೀವು ಸುಮ್ಮನಿರಿ ಎಂಬುದು ಅವರ ಅಹಂಕಾರ ಎಂದು ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಕಿಡಿಕಾರಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹೋರಾಟವು 1000 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧರಣಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ನಾನು ರೈತ ಅಲ್ಲ. ಭೂಮಿ ಜತೆ ಮಾತಾಡ್ತೀನಿ. ರೈತ ನನಗಿಂತ ದೊಡ್ಡೋನು. ರೈತನ ಋಣ ನಮ್ಮ ಮೇಲಿದೆ. ಹಾಗಾಗಿ ಈ ಹೋರಾಟಕ್ಕೆ ಬಂದಿದ್ದೇನೆ. ರೈತರ ಹೋರಾಟ ಎಂದೆಂದಿಗೂ ನಡೆಯುತ್ತಲೇ ಇವೆ. ಇಷ್ಟು ವರ್ಷ ಹೋರಾಟ ನಡೆದರೂ ಇದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಯಾವ ಅಹಂಕಾರ ಇದನ್ನು ಬದಲಿಸಬೇಕು” ಎಂದು ಪ್ರಶ್ನಿಸುವ ಮೂಲಕ ಸರ್ಕಾರಗಳ ನಡೆಯನ್ನು ಖಂಡಿಸಿದರು.

“ಈ ಹಿಂದಿನ ಸರ್ಕಾರ ಅವರು ರೈತರೇ ಅಲ್ಲ. ಹೊಡೆಯಿರಿ ಎಂದು ಹೇಳಿತ್ತು. ಆದರೆ, ನೀವು ಬಂದು ಒಂದು ವರ್ಷದ ಮೇಲಾಯಿತು. ನಿಮ್ಮ ಭರವಸೆ ಎಲೆಕ್ಷನ್ ಗಿಮಿಕ್ ಅಷ್ಟೇ. ಈ ಹೋರಾಟದ ಗೆಲುವು ಮುಖ್ಯ. ನಿಮ್ಮೆಲ್ಲಾ ರಾಜಕಾರಣಿಗಳಿಗೆ ರೈತರು ಮತ ನೀಡುವ ಬಟನ್‌ಗಳಷ್ಟೇ. ಸರಕಾರಗಳು ಭೂಸ್ವಾಧೀನ ಯಾಕೆ ಮಾಡುತ್ತಿವೆ. ನಿಮ್ಮ ಸರಕಾರ ರೈತರಿಗೆ ಕೆಲಸ ಕೊಡುತ್ತಿಲ್ಲ. ಅವರು ಸ್ವಂತ ಕೆಲಸ ಮಾಡಿಕೊಂಡು, ಅವರ ಭೂಮಿ ಜತೆ ಮಾತಾಡಿಕೊಂಡು ಇರುವವರು. ಅವರ ಭವಿಷ್ಯ ನೋಡಿಕೊಳ್ಳುತ್ತಿರುವ. ನಿಮಗೆ ಮತ ನೀಡಿದ್ದಕ್ಕೆ ನಮ್ಮ ಕೆಲಸ ಕಿತ್ತುಕೊಂಡರೆ, ಏನು ಮಾಡೋದು ಎಂಬುದು ಅವರ ಹೋರಾಟ. ಇಂತಹ ಆತಂಕ ಮತ್ತು ಹೋರಾಟದ ಜತೆ ಇಡೀ ರಾಜ್ಯದ ಜನತೆ ನಿಮ್ಮ ಜತೆ ನಿಲ್ಲಬೇಕು” ಎಂದು ಹೇಳಿದರು.

ಫಲವತ್ತಾದ ಭೂಮಿ ಮೇಲೆ ಕೈಗಾರಿಕೆಗಳನ್ನು ಎಲ್ಲಿವರೆಗೆ ಕಟ್ಟುತ್ತಿರಿ. ಹೀಗೆ ಕಟ್ಟಿ ಹೊಟ್ಟೆಗೆ ಏನು ತಿನ್ನುತ್ತೀರಿ. ರೈತರನ್ನು ಗೌರವಿಸಿ, ಅವರನ್ನು ಉಳಿಸದಿದ್ದರೆ ಎಲ್ಲರೂ ನಾಶವೇ ಎಂಬ ಸತ್ಯವನ್ನು ಅರಿತು ಮುಂದೆಜ್ಜೆ ಇಡಬೇಕು ಎಂದು ಹೇಳಿದರು.
ಇದು ಕೇವಲ 23 ಹಳ್ಳಿಗಳ ಭೂ ಸ್ವಾಧೀನ ಸಮಸ್ಯೆ ಅಲ್ಲ. ಈ ಹೋರಾಟದ ಗೆಲುವು ಇಡೀ ಸ್ವಾಧೀನ ಪ್ರತಿಕ್ರಿಯೆಯನ್ನೇ ಬದಲಿಸಬೇಕು. ಸ್ವಾಧೀನ ಮಾಡಿ ನೀವು ಭೂಮಿ ಕೊಡುತ್ತಿರುವುದು ಭವಿಷ್ಯದ ಬಂಡವಾಳಶಾಹಿಗಳಿಗೆ. ಅವರು ಮರ ನೋಡದೆ ತೆಂಗಿನ ಕಾಯಿ ಕೀಳುತ್ತಾರೆ, ಗಿಡ ನೋಡದೇ ದೇವರಿಗೆ ಹೂ ಮುಡಿಸುತ್ತಾರೆ. ಭತ್ತ ನೋಡದೆ ಅನ್ನ ಉಂಡು, ರಾಗಿ ನೋಡದೆ ಮುದ್ದೆ ಹಿಚುಕುತ್ತಾರೆ. ಆದ್ದರಿಂದ, ಅವರಿಗೆ ಭೂಮಿ ಮತ್ತು ರೈತರ ನಡುವಿನ ಸಂಬಂಧ ಅರ್ಥವಾಗುವುದಿಲ್ಲ. ಭೂಮಿ ಎಂಬುದು ರೈತರ ಸ್ವಾಭಿಮಾನ, ಐಡೆಂಟಿಟಿ, ಅವರ ಹೆಮ್ಮೆ, ನಿರಂತರವಾದ ಮಾತು ಮತ್ತು ಸಂಭಾಷಣೆ. ಅದನ್ನೇ ನೀವು ಕಿತ್ತುಕೊಳ್ಳುತ್ತಿರುವುದು ಯಾಕೆ? ಎಂದು ಕೇಳಿದರು.
ಇದನ್ನು ಓದಿದ್ದೀರಾ? ದೇವನಹಳ್ಳಿ | ಸರ್ಕಾರ ಉಳಿಯಬೇಕಾದರೆ ರೈತರ ಮಾತು ಕೇಳಿ: ನಿವೃತ್ತ ನ್ಯಾ.ಗೋಪಾಲ ಗೌಡ ಎಚ್ಚರಿಕೆ
ಇಲ್ಲಿನ ರೈತರು ತಮ್ಮ ತುಂಡು ಭೂಮಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರ ಅವರಿಗೆ ಕೆಲಸ ಕೊಟ್ಟಿಲ್ಲ. ತಲೆತಲಾಂತರದಿಂದ ಅವರೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಪಟ್ಟಣದವರೆಲ್ಲಾ ರೈತರಾಗಬೇಕಿಲ್ಲ; ಆದರೆ ಸಹಮನುಷ್ಯರು ಹಾಗೂ ರೈತರ ಆತಂಕ, ಕಣ್ಣೀರಿನ ಜೊತೆಗೆ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯ. ಮಾಧ್ಯಮಗಳ ಮೂಲಕ ಈ ದೇಶದ ರಾಜಕಾರಣಿಗಳಿಗೆ ಹಾಗೂ ಪಟ್ಟಣ ನಿವಾಸಿಗಳಿಗೆ ಸಂದೇಶ ನೀಡುವುದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಜೊತೆಗೆ ನಿಲ್ಲುವುದರಿಂದ ನನಗೆ ಗೌರವ ಸಿಗುತ್ತದೆ; ರೈತರ ಋಣ ನನ್ನ ಮೇಲೆ ಇದೆ. ಫಲವತ್ತಾದ ಭೂಮಿ ಮೇಲೆ ಕೈಗಾರಿಕೆ ಕಟ್ಟುತ್ತಾ ಹೋದರೆ, ನೀವು ಮುಂದೆ ಹೊಟ್ಟೆಗೆ ತಿನ್ನುವುದಾದರೂ ಏನು? ರೈತ ನಶಿಸಿದರೆ ನಾವ್ಯಾರೂ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ತಿಳಿಸಿದರು.
