- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿಯಾದ ಡಿಕೆಶಿ
- ಲಕ್ಷ್ಮಣ ಸವದಿ ಜೊತೆಗೂ ಚರ್ಚೆ ನಡೆಸಿದ ಕೆಪಿಸಿಸಿ ಅಧ್ಯಕ್ಷ
ಕಾಂಗ್ರೆಸ್ ನಂಬಿ ಬಂದವರನ್ನು ಎಂದಿಗೂ ನಾವು ಕೈ ಬಿಡಲ್ಲ. ಇದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ವಿಚಾರಕ್ಕೂ ಅನ್ವಯಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಇಂದು ಮುಂಜಾನೆ ಹುಬ್ಬಳ್ಳಿಯಲ್ಲಿನ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರಿಬ್ಬರ ಜೊತೆಗೆ ಇದ್ದೇವೆ, ಇಡೀ ಪಕ್ಷವೂ ಅವರ ಜೊತೆ ಇದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ನಮ್ಮ ಪಕ್ಷದ ನಾಯಕರು ಎಂದು ಹೇಳಿದರು.
ಧೈರ್ಯ ಮಾಡಿ ಯಾರು ನಮ್ಮ ಜೊತೆ ಕೈ ಜೋಡಿಸಿದ್ದಾರೋ ಅವರುಗಳನ್ನು ಕೈ ಬಿಡುವ ಪ್ರಶ್ನೆ ಬರಲ್ಲ, ಸೋತರೂ ಗೆದ್ದರೂ ಅವರು ನಮ್ಮ ನಾಯಕರು ಎಂದು ಡಿಕೆಶಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?:ತಡರಾತ್ರಿ ಲಕ್ಷ್ಮಣ ಸವದಿ ಭೇಟಿ ಮಾಡಿದ ಡಿಸಿಎಂ; ಕುತೂಹಲ ಕೆರಳಿಸಿದ ಬೆಳವಣಿಗೆ
ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ಡಿಕೆಶಿ ಅವರ ಜೊತೆ ಔಪಚಾರಿಕವಾದ ಮಾತುಕತೆಯಾಗಿದೆ. ಉತ್ತರ ಕರ್ನಾಟಕ ಭಾಗದ ಸಂಘಟನೆ ಬಗ್ಗೆ ಶಿವಕುಮಾರ್ ಸಂತೋಷ ವ್ಯಕ್ತಪಡಿಸಿದರು. ಮುಂಬರುವ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಇನ್ನು ಶಿವಕುಮಾರ್ ಅವರು ಶೆಟ್ಟರ್ ಜೊತೆ ನಡೆಸಿರುವ ಗೌಪ್ಯ ಸಭೆಯಲ್ಲಿ ಇಬ್ಬರೂ ನಾಯಕರುಗಳಿಗೆ ಉನ್ನತ ಸ್ಥಾನಮಾನ ನೀಡುವ ವಿಚಾರವಾಗಿ ಸಭೆ ನಡೆಸಿರುವುದಾಗಿ ತಿಳಿದು ಬಂದಿದೆ.