ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಶ್ರೀಮಂತ ಸಿಎಂ, ಅತೀ ಬಡ ಸಿಎಂ ಯಾರು ಎಂಬ ಮಾಹಿತಿಯನ್ನು ಪ್ರಕಟಿಸಿದೆ.
ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ 52.59 ಕೋಟಿ ರೂಪಾಯಿಗಳಷ್ಟಿದೆ ಎಂದು ವರದಿ ಉಲ್ಲೇಖಿಸಿದೆ. ಒಟ್ಟು 31 ಮುಖ್ಯಮಂತ್ರಿಗಳ ಆಸ್ತಿ 1,630 ಕೋಟಿ ರೂಪಾಯಿಗಳಷ್ಟಿದೆ ಎಂದು ಎಡಿಆರ್ ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ದಾವಣಗೆರೆ | ಸಿದ್ಧರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ: ಸಚಿವ ಜಮೀರ್ ಅಹಮದ್
ವರದಿ ಪ್ರಕಾರ 2023-2024ರ ಸಾಲಿನಲ್ಲಿ ಮುಖ್ಯಮಂತ್ರಿಗಳ ತಲಾ ನಿವ್ವಳ ರಾಷ್ಟ್ರೀಯ ಆದಾಯ ಸರಿಸುಮಾರು ₹1,85,854 ಆಗಿತ್ತು. ಆದರೆ ಈಗ ಮುಖ್ಯಮಂತ್ರಿಯ ಸರಾಸರಿ ಸ್ವಯಂ ಆದಾಯ ₹13,64,310 ಆಗಿದೆ. ಅಂದರೆ ಸುಮಾರು 7.3 ಪಟ್ಟು ಅಧಿಕವಾಗಿದೆ.
ಅತೀ ಶ್ರೀಮಂತ, ಅತೀ ಕಡಿಮೆ ಆಸ್ತಿ ಹೊಂದಿರುವ ಸಿಎಂ ಯಾರು?
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ ಎಂದು ಎಡಿಆರ್ ವರದಿ ಹೇಳಿದೆ. ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತೀ ಕಡಿಮೆ ಆಸ್ತಿ ಹೊಂದಿರುವ ಸಿಎಂ ಆಗಿದ್ದಾರೆ. ಅವರ ಒಟ್ಟು ಆಸ್ತಿ 15,38,029 ರೂಪಾಯಿ (15 ಲಕ್ಷ) ಆಗಿದೆ.
ಅತೀ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಪೇಮಾ ಖಂಡು ಇದ್ದಾರೆ. 332 ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ಅವರು ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದ್ದು, ಅವರ ಒಟ್ಟು ಆಸ್ತಿ 51 ಕೋಟಿ ರೂಪಾಯಿಗೂ ಅಧಿಕವಾಗಿದೆ.
ಇದನ್ನು ಓದಿದ್ದೀರಾ? ಶ್ರೀಮಂತರಿಗೆ ಬೆಣ್ಣೆ, ಬಡವರಿಗೆ ಸುಣ್ಣ: ಇದು ನಿರ್ಮಲಾ ಸೀತಾರಾಮನ್ ಆರ್ಥಿಕ ನೀತಿ
ಪ್ರೇಮಾ ಖಂಡು 180 ಕೋಟಿ ರೂಪಾಯಿಗೂ ಅಧಿಕ ಸಾಲ ಹೊಂದಿದ್ದರೆ, ಸಿದ್ದರಾಮಯ್ಯ 23 ಕೋಟಿ ರೂ. ಮತ್ತು ನಾಯ್ಡು 10 ಕೋಟಿ ರೂ. ಸಾಲ ಹೊಂದಿದ್ದಾರೆ ಎಂದು ವರದಿಯಾಗಿದೆ.
ಇನ್ನು ಅತೀ ಕಡಿಮೆ ಆಸ್ತಿ ಹೊಂದಿರುವ ಸಿಎಂಗಳ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ ಮೊದಲ ಸ್ಥಾನದಲ್ಲಿದ್ದರೆ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಕೇರಳ ಸಿಎಂ ಪಿಣರಾಯಿ ವಿಜಯನ್ ಎರಡನೇ ಮತ್ತು ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇಬ್ಬರ ಆಸ್ತಿ ಕ್ರಮವಾಗಿ 55,24,430 ರೂಪಾಯಿ (55 ಲಕ್ಷ), 1,18,75,766 ರೂಪಾಯಿ (ಒಂದು ಕೋಟಿ) ಆಗಿದೆ.
