ಆರೋಗ್ಯವಾಗಿರುವ ಎಲ್ಲರೂ ಸುಂದರವಾಗಿರುತ್ತಾರೆ. ಆದ್ದರಿಂದಲೇ ಶ್ರೇಷ್ಠ ಕ್ರೀಡಾಪಟುಗಳು ಕುರೂಪಿಗಳಾಗಿರುವುದಿಲ್ಲ ಎಂಬ ಮಾತಿದೆ. ಆದರೆ ದುಡ್ಡಿನ ಧಿಮಾಕು ಹೆಚ್ಚಾದರೆ, ಕೀರ್ತಿಶನಿ ಹೆಗಲೇರಿದರೆ, ಕ್ರೀಡಾಪಟುಗಳು ಕೂಡ ಕುರೂಪಿಗಳಾಗುತ್ತಾರೆ...
ಕ್ರಿಕೆಟ್ ಪ್ರೇಮಿಗಳಿಗೆ ಕೊಂಚ ಕಸಿವಿಸಿಯ ಸುದ್ದಿಗಳು ಮೇಲಿಂದ ಮೇಲೆ ಬಂದು ಅಪ್ಪಳಿಸುತ್ತಿವೆ. ಆಸ್ಟ್ರೇಲಿಯಾ-ಭಾರತ ಕ್ರಿಕೆಟ್ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಹೀನಾಯ ಸೋಲು ಕಂಡಿದೆ.
ಆ ಮೂಲಕ ಐದು ಟೆಸ್ಟ್ ಸರಣಿಯಲ್ಲಿ 2–1 ಅಂತರದ ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ಗೇರುವತ್ತ ದಾಪುಗಾಲಿಟ್ಟಿದೆ. ಆದರೆ, ಹ್ಯಾಟ್ರಿಕ್ ಫೈನಲ್ ಕನಸು ಕಂಡಿದ್ದ ಭಾರತದ ಕನಸು ಭಗ್ನಗೊಂಡಿದೆ.
ಆಟದಲ್ಲಿ ಸೋಲು-ಗೆಲುವು ಸಾಮಾನ್ಯ ಎಂದುಕೊಂಡರೂ, ಗೆಲ್ಲುವಂತಹ ಪಂದ್ಯಗಳನ್ನು ಕೂಡ ಸೋತಿದ್ದು ಭಾರೀ ಬೇಸರಕ್ಕೆ ಕಾರಣವಾಗಿದೆ. ಮೂರು ಮತ್ತು ನಾಲ್ಕನೇ ಟೆಸ್ಟ್ ಪಂದ್ಯಗಳನ್ನು ಭಾರತ ಕ್ರಿಕೆಟ್ ತಂಡ ನಿರಾಯಾಸವಾಗಿ ಗೆಲ್ಲಬಹುದಿತ್ತು. ಆದರೆ ಸ್ಟಾರ್ ಬ್ಯಾಟರ್‍ಗಳೆಂದು ಹೆಸರು ಮಾಡಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಮತ್ತು ರಿಷಭ್ ಪಂತ್ ಎಂಬ ಆಟಗಾರರ ಹಣದ ಧಿಮಾಕು, ಮೈಗೂಡಿಸಿಕೊಂಡ ಕೊಬ್ಬು ಕಡಿಮೆ ಇಲ್ಲ. ಕಾಮೆಂಟರಿ ಬಾಕ್ಸ್‌ನಲ್ಲಿ ಕೂತ ಹಿರಿಯ ಆಟಗಾರ ಸುನಿಲ್ ಗವಾಸ್ಕರ್ ಅಲ್ಲಿಂದಲೇ ರಿಷಭ್ ಪಂತ್‌ಗೆ ‘ಸ್ಟುಪಿಡ್’ ಎಂದು ಬೈಯ್ದದ್ದು, ತಮಾಷೆಗಲ್ಲ. ಅದು ಹಗುರವಾಗಿ ಪರಿಗಣಿಸುವ ಸಂಗತಿಯಲ್ಲ.
ನಾಲ್ಕನೇ ಟೆಸ್ಟ್ ಆರಂಭದ ದಿನ ಆಸ್ಟ್ರೇಲಿಯಾ ತಂಡಕ್ಕೆ, ಕ್ರಿಕೆಟ್ ವೃತ್ತಿಜೀವನಕ್ಕೆ ಅಂದೇ ಕಾಲಿಟ್ಟ ಸ್ಯಾಮ್ ಕೊನ್‌ಸ್ಟಸ್ ಓಪನರ್ ಆಗಿ ಬಂದು ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. 38 ಎಸೆತಗಳಲ್ಲಿ 27 ರನ್ ಗಳಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು. ಇನಿಂಗ್ಸ್‌ನ 10ನೇ ಓವರ್ ಬಳಿಕ, ಸ್ಕ್ರೀಸ್ ಬದಲಿಸುತ್ತಿದ್ದ ಕೊನ್ ಸ್ಟಸ್ ಭುಜಕ್ಕೆ ವಿರಾಟ್ ಕೊಹ್ಲಿ ವಿನಾಕಾರಣ ಡಿಕ್ಕಿ ಹೊಡೆದರು. ಕೊನ್‌ಸ್ಟಸ್ ಕೂಡ ತಿರುಗಿ ನಿಂತು ಕೊಹ್ಲಿಯೊಂದಿಗೆ ವಾಗ್ವಾದಕ್ಕಿಳಿಯುವಷ್ಟರಲ್ಲಿ, ಸುತ್ತಲಿದ್ದವರು ಸಮಾಧಾನಿಸಿದರು. ಆದರೆ ಕೊಹ್ಲಿಯ ಪ್ರಚೋದನೆಗೆ ರೊಚ್ಚಿಗೆದ್ದ ಬಿಸಿರಕ್ತದ ಹುಡುಗ, ಬ್ಯಾಟ್ ಮೂಲಕವೇ ಉತ್ತರಿಸಿದ ರೀತಿ ಅದ್ಭುತವಾಗಿತ್ತು. ಬೂಮ್ರಾ ಬೌಲಿಂಗ್‌ನ ಮುಂದಿನ 11ನೇ ಓವರ್‌ನಲ್ಲಿ 18 ರನ್ ಚಚ್ಚಿ, ಕೊಹ್ಲಿ ಕಪಾಲಕ್ಕೆ ಬಿಗಿದಿದ್ದರು.
ಇದನ್ನು ಓದಿದ್ದೀರಾ?: ಟೆಸ್ಟ್ ಕ್ರಿಕೆಟ್ | ವಿಶ್ವ ದಾಖಲೆ ಬರೆದ ಜಸ್ಪ್ರೀತ್ ಬೂಮ್ರಾ, 200 ವಿಕೆಟ್ ಸಾಧನೆ
19ರ ಹರೆಯದ ಹೊಸ ಹುಡುಗನ ಜೊತೆ 36 ವರ್ಷದ ಅನುಭವಿ ಆಟಗಾರ ಕೊಹ್ಲಿಯ ದುವರ್ತನೆ ಬಗ್ಗೆ ಎಲ್ಲೆಡೆ ಟೀಕೆಗಳು ವ್ಯಕ್ತವಾದವು. ಅದರಲ್ಲೂ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ಮೇಲೆ ಮುಗಿಬಿದ್ದರು. ಸಾಲದು ಎಂದು ಘಟನೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮ್ಯಾಚ್ ರೆಫರಿಯನ್ನು ಕೋರಿದ್ದರು. ಆಸ್ಟ್ರೇಲಿಯಾದ ಸುದ್ದಿಮಾಧ್ಯಮಗಳಂತೂ ವಿರಾಟ್ ಚಿತ್ರಕ್ಕೆ ಜೋಕರ್ ಜೋಡಿಸಿ ಲೇವಡಿ ಮಾಡಿದ್ದರು.
ಭಾರತದಲ್ಲಿ ಮಾತ್ರವಲ್ಲದೆ, ವಿದೇಶದಲ್ಲೂ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ, ಅತಿ ಶ್ರೀಮಂತ ಆಟಗಾರನಾಗಿರುವ ವಿರಾಟ್ ಕೊಹ್ಲಿ, ಮೈದಾನದಲ್ಲಿ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ತಿಕ್ಕಲರಂತೆ ವರ್ತಿಸುತ್ತಾರೆ. ವಿವಾದಕ್ಕೂ ಗುರಿಯಾಗುತ್ತಾರೆ. ಅಂದು ಆಗಿದ್ದು ಅದೇ. 19ರ ಹರೆಯದ ಹೊಸ ಹುಡುಗನ ಸ್ಫೋಟಕ ಬ್ಯಾಟಿಂಗ್ ನೋಡಿ ಮುದಗೊಂಡು, ಆತನ ಆಟವನ್ನು ಮುಕ್ತಕಂಠದಿಂದ ಪ್ರಶಂಸಿಸಬೇಕಾಗಿದ್ದ ಹಿರಿಯ ಆಟಗಾರ ಕೊಹ್ಲಿ, ಆತನ ಭುಜಕ್ಕೆ ಡಿಕ್ಕಿ ಹೊಡೆಯುವ ಮೂಲಕ ಹೊಟ್ಟೆಕಿಚ್ಚಿನ ಸಣ್ಣ ವ್ಯಕ್ತಿಯಾದರು. ಜಂಟ್ಲಮನ್ಸ್ ಕ್ರಿಕೆಟ್‌ಗೆ ಕಳಂಕ ತಂದರು. ಸೋಷಿಯಲ್ ಮೀಡಿಯಾದಲ್ಲಿ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿ ವೈರಲ್ ಆದರು. ಐಸಿಸಿಯಿಂದ ದಂಡನೆಗೂ ಒಳಗಾದರು. ವಿರಾಟ್ ಕೊಹ್ಲಿ ಅಷ್ಟೇ ಅಲ್ಲ, ಅಡಿಲೇಡ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ಜೊತೆ ಕಿರಿಕ್ ಮಾಡಿಕೊಂಡಿದ್ದ ಮೊಹಮ್ಮದ್ ಸಿರಾಜ್ ಕೂಡ ಐಸಿಸಿ ದಂಡನೆಗೆ ಒಳಗಾಗಿದ್ದರು.
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾಗಳಂತಹ ದೇಶಗಳ ಆಟಗಾರರು ತಮ್ಮೊಳಗಿನ ಕೆಚ್ಚು, ರೋಷವನ್ನು ಆಟದ ಮೂಲಕವೇ ಹೊರಹಾಕುತ್ತಿದ್ದರು. ಆಟಕ್ಕೊಂದು ಸೊಗಸುಗಾರಿಕೆ, ವ್ಯಕ್ತಿತ್ವಕ್ಕೊಂದು ಘನತೆ ತಂದಿದ್ದರು. ಅಕಸ್ಮಾತ್ ಎದುರಾಳಿ ತಂಡದ ಆಟಗಾರನೊಂದಿಗೆ ಕಾದಾಟಕ್ಕಿಳಿದರೂ, ಆ ಸಿಟ್ಟು ಸೆಡವನ್ನು ಆ ಮೈದಾನದಲ್ಲಿಯೇ ಬಿಟ್ಟುಬರುತ್ತಿದ್ದರು. ಆದರೆ ಈಗ, ಆಟದೊಂದಿಗೆ ಪ್ರಾಯೋಜಕತ್ವ, ಜಾಹೀರಾತು, ಜನಪ್ರಿಯತೆ, ವ್ಯಾಪಾರ-ವಾಣಿಜ್ಯ, ಹಣದ ಹರಿವು ಸೇರಿಕೊಂಡಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಸೃಷ್ಟಿಸಿ ಕನಕವೃಷ್ಟಿಯಾಗುತ್ತಿದೆ. ಆಟಗಾರರ ತಲೆ ಭುಜಗಳ ಮೇಲೆ ನಿಲ್ಲದಂತಾಗಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾಗಳ ಆಟಗಾರರು ವಿಮೋಚನೆಗಾಗಿ ಬಳಸುತ್ತಿದ್ದ ಕೆಚ್ಚು, ಕಿಚಾಯಿಸುವಿಕೆ, ರೋಷವನ್ನು ನಮ್ಮ ದೇಶದ ಆಟಗಾರರು ಅಳವಡಿಸಿಕೊಳ್ಳುತ್ತಿರುವುದು ದುರಂತವಾಗಿದೆ.
90ರ ದಶಕದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಮುನ್ನುಡಿ ಬರೆದಿದ್ದ ಮುಂಬೈನ ಸಚಿನ್-ಕಾಂಬ್ಳಿ ಜೋಡಿ, ಕ್ರಿಕೆಟ್ ಪ್ರೇಮಿಗಳನ್ನು ಮೋಡಿ ಮಾಡಿತ್ತು. ಸಚಿನ್ ಆಟ ಆಡುತ್ತ, ದಾಖಲೆಗಳನ್ನು ಪೇರಿಸುತ್ತ, ನೆಮ್ಮದಿಯ ಬದುಕಿನತ್ತ ನಡೆದರೆ; ಜೊತೆಗಾರ ವಿನೋದ್ ಕಾಂಬ್ಳಿ ಜನಪ್ರಿಯತೆಯನ್ನು ಅರಗಿಸಿಕೊಳ್ಳಲಾಗದೆ, ಅಡ್ಡಹಾದಿ ಹಿಡಿದಿದ್ದರು. ಆಟವನ್ನು ವ್ಯಕ್ತಿತ್ವವನ್ನು ಕಳೆದುಕೊಂಡಿದ್ದರು. ಇತ್ತೀಚೆಗೆ ಆರೋಗ್ಯ ಹಾಳಾಗಿ, ಆರೈಕೆಗಾಗಿ ಆಸ್ಪತ್ರೆ ಸೇರುವುದಕ್ಕೂ ಹಣವಿಲ್ಲದೆ ಚಿಂತಾಜನಕ ಸ್ಥಿತಿಯಲ್ಲಿದ್ದರು. ಕಪಿಲ್ ದೇವ್, ಸಚಿನ್ ಮತ್ತು ಆಸ್ಪತ್ರೆಯ ಮಾಲೀಕರು ಚಿಕಿತ್ಸೆಗೆ ಸಹಕರಿಸುವುದಾಗಿ ಹೇಳಿದ್ದು ಸುದ್ದಿಯಾಗಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿಗೆ ಸಂಸದೀಯ ವ್ಯವಸ್ಥೆಯ ಇತಿಹಾಸ ತಿಳಿಸುವ ತುರ್ತು ಅಗತ್ಯವಿದೆ
ಕಾಂಬ್ಳಿಯ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದ ಮುಂಬೈನ ಮತ್ತೊಂದು ಯುವಜೋಡಿ- ಪೃಥ್ವಿ ಶಾ ಮತ್ತು ಇಶಾನ್ ಕಿಶನ್. ದಾಖಲೆಗಳನ್ನು ಪುಡಿಗಟ್ಟಿ ಪುಟಿದೆದ್ದ ಆಟಗಾರರು. ಆದರೆ ಹಣ ಮತ್ತು ಜನಪ್ರಿಯತೆಯ ಪ್ರವಾಹದಲ್ಲಿ ಕೊಚ್ಚಿಹೋದರು. ಕಾಂಬ್ಳಿ, ಪೃಥ್ವಿ ಶಾ, ಇಶಾನ್ ಕಿಶಾನ್- ಅತ್ಯಂತ ಪ್ರತಿಭಾನ್ವಿತ ಆಟಗಾರರು, ಅವರಲ್ಲಿ ಯಾರೊಬ್ಬರೂ ಅವರ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಬದುಕಲಿಲ್ಲ, ಬಾಳಲಿಲ್ಲ.
ಆರೋಗ್ಯವಾಗಿರುವ ಎಲ್ಲರೂ ಸುಂದರವಾಗಿರುತ್ತಾರೆ. ಆದ್ದರಿಂದಲೇ ಶ್ರೇಷ್ಠ ಕ್ರೀಡಾಪಟುಗಳು ಕುರೂಪಿಗಳಾಗಿರುವುದಿಲ್ಲ ಎಂಬ ಮಾತಿದೆ. ಆದರೆ ದುಡ್ಡಿನ ಧಿಮಾಕು ಹೆಚ್ಚಾದರೆ, ಕೀರ್ತಿಶನಿ ಹೆಗಲೇರಿದರೆ, ಕ್ರೀಡಾಪಟುಗಳು ಕೂಡ ಕುರೂಪಿಗಳಾಗುತ್ತಾರೆ.
