ಕೇಂದ್ರ ಗ್ರಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಸಂವಿಧಾನ ಸಂರಕ್ಷಣಾ ಒಕ್ಕೂಟ ಮತ್ತು ವಿವಿಧ ಸಂಘಟನೆಗಳೊಂದಿಗೆ ನಡೆಸಿದ ʼಕಂಪ್ಲಿ ಬಂದ್ʼ ಸಂಪೂರ್ಣ ಯಶಸ್ವಿಯಾಗಿದೆ.
ಕಂಪ್ಲಿ ಪಟ್ಟಣದ ಹಲವು ವ್ಯಾಪಾರಸ್ಥರು ಅಂಗಡಿ-ಮುಂಗಟ್ಟು ಬಂದ್ ಮಾಡಿ ಕರೆಗೆ ಸಹಕರಿಸಿದ್ದು, ಸಣ್ಣ ಮತ್ತು ಬೀದಿಬದಿ ವ್ಯಪಾರಸ್ಥರಿಗೆ ಯಾವುದೇ ತೊಂದರೆಯಾಗದಂತೆ ಪ್ರತಿಭಟನಾಕಾರರು ಸಂಯಮದಿಂದ ನಡೆದುಕೊಂಡಿದ್ದಾರೆ.
ಕಂಪ್ಲಿ ಪಟ್ಟಣದ ಸರ್ಕಾರಿ ಮಾರುಕಟ್ಟೆಯಿಂದ ಬಸವಣ್ಣ ಸರ್ಕಲ್, ಡಾ ರಾಜಕುಮಾರ್ ಮುಖ್ಯ ರಸ್ತೆ ಮೂಲಕ ನಗರದ ಡಾ. ಬಿ ಆರ್ ಅಂಬೇಡ್ಕರ್ ಸರ್ಕಲ್‌ನಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ಸಂವಿಧಾನ ಸಂರಕ್ಷಣಾ ಒಕ್ಕೂಟ ಕರೆ ನೀಡಿದ್ದ ಬಂದ್‌ಗೆ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಗಾರರು ಪಾಲ್ಗೊಂಡಿದ್ದರು.
ಡಾ. ದಾನಪ್ಪ ಮಾತನಾಡಿ, “ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಗೃಹಮಂತ್ರಿ ದೇಶದ ಕೇಂದ್ರ ಮಂತ್ರಿಯಾದವರು ರಾಜ್ಯಸಭೆ ಕಲಾಪದಲ್ಲಿ ನೀಡಿದ ಹೇಳಿಕೆಯನ್ನು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ. ʼಅಂಬೇಡ್ಕರ್ ಹೆಸರು ಹೇಳುವುದು ಈಗ ಶೋಕಿ ಆಗಿಬಿಟ್ಟಿದೆ, ಇಷ್ಟೊಂದು ಬಾರಿ ದೇವರ ಹೆಸರು ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼ ಎಂದು ರಾಜ್ಯಸಭೆ ಕಲಾಪದಲ್ಲಿ ನಾಲಿಗೆ ಹರಿಬಿಟ್ಟ ಅಮಿತ್ ಶಾ, ಬಾಬಾ ಸಾಹೇಬರಿಗೆ ಅವಮಾನ ಮಾಡುವ ಮೂಲಕ ರಾಷ್ಟ್ರದ್ರೋಹ ಕೃತ್ಯ ಎಸಗಿದ್ದಾರೆ. ಸಂವಿಧಾನದತ್ತವಾದ ಕೇಂದ್ರದ ಗೃಹಸಚಿವ ಸ್ಥಾನದಲ್ಲಿದ್ದುಕೊಂಡು ಸಂವಿಧಾನ ನಿರ್ಮಾತೃ ಅಂಬೇಡ್ಕರ್ ಅವರ ಬಗ್ಗೆಯೇ ಹೀನಾಯವಾಗಿ ಹೇಳಿಕೆ ನೀಡಿರುವುದು ಅಕ್ಷಮ್ಯ. ಸಚಿವರಿಗೆ ಸಂವಿಧಾನದಲ್ಲಿ ಸಮಾನತೆ ಇರುವುದೇ ಅವರ ಹತಾಶೆಯ ಮಾತುಗಳಿಗೆ ಕಾರಣ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೇಶದಲ್ಲಿ ಹಿಂದೂ ಕೋಡ್ ಬಿಲ್ ಜಾರಿಗೆ ತಂದು ದೇಶದ ಎಲ್ಲ ವರ್ಗದ ಮಹಿಳೆಯರು ಸಮಾನವಾಗಿ ಬಾಳಲು ಅವಕಾಶ ಮಾಡಿಕೊಟ್ಟಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ. ಹಾಗಾಗಿ ಅವರ ಹೆಸರನ್ನು ನಮ್ಮ ಉಸಿರು ಇರುವವರೆಗೂ ಹೇಳುತ್ತಲೇ ಇರುತ್ತೇವೆ” ಎಂದು ಹೆಮ್ಮೆಪಟ್ಟರು
ನಗರಸಭೆ ಮಾಜಿ ಸದಸ್ಯ ಜಿ ರಾಮಣ್ಣ ಮಾತನಾಡಿ, “ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರ ಮೇಲೆ ಮನುವಾದ ಹೇರಲು ಹೊರಟಿದೆ. ಅದರ ಭಾಗವಾಗಿ ಗೃಹಸಚಿವ ಅಮಿತ್ ಶಾ ಹೀಗೆ ಮಾತನಾಡಿದ್ದಾರೆ. ಈ ಹೇಳಿಕೆ ಖಂಡನಾರ್ಹವಾಗಿದ್ದು, ಕೂಡಲೇ ಗೃಹಸಚಿವರು ಬೇಷರತ್ ಕ್ಷಮೆಯಾಚಿಸಿ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು. ದೇಶಕ್ಕೆ ಸಂವಿಧಾನ ಕೊಟ್ಟಂತಹ, ಎಲ್ಲ ಜಾತಿ, ಜನಾಂಗದವರಿಗೆ ಆದರ್ಶವಾಗಿರುವ ಅಂಬೇಡ್ಕರ್ ಅವರ ಬಗ್ಗೆ ಹಿಯಾಳಿಸಿರುವುದು ಅತ್ಯಂತ ಖಂಡನಾರ್ಹ. ಅಂಬೇಡ್ಕರ್ ಅವರನ್ನು ಅವಮಾನಿಸುವುದು ರಾಷ್ಟ್ರದ್ರೋಹದ ಕೆಲಸವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ : ಸಾಕ್ಷಿ ಹೇಳಲು ಬಂದಿದ್ದವರ ಮೇಲೆ ನ್ಯಾಯಾಲಯದ ಆವರಣದಲ್ಲೇ ಹಲ್ಲೆ: ಆರೋಪಿ ವಶಕ್ಕೆ
“ರಾಷ್ಟ್ರದ್ರೋಹದ ಅಡಿಯಲ್ಲಿ ಅಮಿತ್ ಶಾ ವಿರುದ್ಧ ಕೇಸ್ ದಾಖಲಿಸಬೇಕು. ಅವರ ಹೇಳಿಕೆ ಖಂಡಿಸಿ ದೇಶದ ಮೂಲೆ ಮೂಲೆಯಲ್ಲಿ ಹೋರಾಟ ನಡೆಯುತ್ತಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಲಾಗುತ್ತಿದೆ. ಬಾಬಾ ಸಾಹೇಬರು ಕೊಟ್ಟ ಸಂವಿಧಾನದ ಅಡಿಯಲ್ಲಿ ಸಚಿವ ಸ್ಥಾನ ಪಡೆದಿರುವ ಅಮಿತ್ ಶಾ, ಸಂವಿಧಾನ ಅಡಿಯಲ್ಲಿ ಕೆಲಸ ನಿರ್ವಹಿಸದೇ ಮನುವಾದದ ಸಿದ್ದಾಂತ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ದೇಶದ ರೈತರು, ಕಾರ್ಮಿಕರು, ಮಹಿಳೆಯರನ್ನು ಸಂಪೂರ್ಣ ಕಡೆಗಣಿಸಿದೆ. ದೇಶದ ಸರ್ವಜನರ ವಿಮೋಚನೆಗಾಗಿ ಹತ್ತಾರು ಡಿಗ್ರಿಗಳನ್ನು ಪಡೆದು, ಬಹಳಷ್ಟು ದೇಶಗಳಲ್ಲಿ ಸಂಚರಿಸಿ, ಆಳ ಅಧ್ಯಯನದೊಂದಿಗೆ ಸಂವಿಧಾನ ನೀಡಿದ ನಿರ್ಮಾತೃವನ್ನೇ ಹೀಗಳೆಯುವ ಗೃಹಸಚಿವ ಕೂಡಲೇ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.
ರವಿ ಮಣ್ಣೂರು, ವಸಂತ ಕಹಾಳೆ, ಧನಂಜಯ, ಭಾವೈಕ್ಯ ವೆಂಕಟೇಶ, ಬಿ ವಿ ಗೌಡ, ಕೆ ಲಕ್ಷ್ಮಣ, ಎಂ ಸಿ ಮಾಯಪ್ಪ, ಎಚ್ ಕುಮಾರಸ್ವಾಮಿ, ಚಾಂದ್ ಭಾಷಾ, ಕರಿಯಪ್ಪ ಗುಡಿಮನಿ ಸೇರಿದಂತೆ ಇತರರು ಇದ್ದರು.