ದಕ್ಷಿಣ ಕೊರಿಯಾದಲ್ಲಿ ಭಾನುವಾರ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಸುಮಾರು 175 ಮಂದಿ ಸಾವನ್ನಪ್ಪಿದ ಘಟನೆ ಇಡೀ ಜಗತ್ತನ್ನು ದಂಗಾಗಿಸಿದೆ. ಆ ಘಟನೆ ಮಾಸುವ ಮುನ್ನವೇ ಸಂಭವಿಸಬಹುದಾಗಿದ್ದ ಮತ್ತೊಂದು ವಿಮಾನ ದುರಂತ ಕ್ಷಣಾರ್ಧದಲ್ಲಿ ತಪ್ಪಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಆಘಾತಕ್ಕೊಳಗಾಗಿ, ನಿಟ್ಟುಸಿರು ಬಿಟ್ಟಿದ್ದಾರೆ.
ಅಮೆರಿಕದ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಸಂಭವಿಸಬಹುದಾಗಿದ್ದ ಅಪಘಾತವು ಕೆಲವೇ ಸೆಕೆಂಡುಗಳ ಅಂತರದಲ್ಲಿ ತಪ್ಪಿದೆ. ಗೊನ್ಜಾಗಾ ವಿಶ್ವವಿದ್ಯಾಲಯದ ಬಾಸ್ಕೆಟ್‌ಬಾಲ್ ತಂಡವನ್ನು ಹೊತ್ತೊಯ್ಯುತ್ತಿದ್ದ ವಿಮಾನಕ್ಕೆ ಡೆಲ್ಟಾ ಏರ್‌ಲೈನ್ಸ್ ವಿಮಾನವು ಡಿಕ್ಕಿಯಾಗುವ ಸಂಭವವಿತ್ತು. ಏರ್ ಟ್ರಾಫಿಕ್ ಕಂಟ್ರೋಲರ್‌ಗಳು ತುರ್ತು ಸೂಚನೆಯೊಂದಿಗೆ ‘ಸ್ಟಾಪ್, ಸ್ಟಾಪ್, ಸ್ಟಾಪ್!’ ಎಂದು ಕರೆಕೊಟ್ಟಿದ್ದು, ಕೂಡಲೇ ಕ್ರೀಡಾಪಟುಗಳಿದ್ದ ವಿಮಾನವನ್ನು ನಿಲ್ಲಿಸಲಾಗಿದೆ. ಅಪಘಾತವನ್ನು ತಪ್ಪಿಸಲಾಗಿದೆ.
ಕ್ರೀಡಾಪಟುಗಳನ್ನು ಹೊತ್ತೊಯ್ಯುತ್ತಿದ್ದ ಗೊನ್ಜಾಗಾದ ‘ಚಾರ್ಟರ್ಡ್ ಕೀ ಲೈಮ್ ಏರ್ ಫ್ಲೈಟ್ 563’ ರನ್‌ವೇಗೆ ಅಡ್ಡಲಾಗಿ ಪ್ರವೇಶಿಸಿದೆ. ಅದೇ ವೇಳೆಗೆ ಅಟ್ಲಾಂಟಾಗೆ ಹೊರಟಿದ್ದ ಡೆಲ್ಟಾ ಏರ್‌ಲೈನ್ಸ್‌ನ ‘ಏರ್‌ಬಸ್ A321’ ವಿಮಾನ ಟೇಕ್‌ಆಫ್ ಆಗಲು ರನ್‌ವೇನಲ್ಲಿ ತೆರಳುತ್ತಿತ್ತು. ಕೂಡಲೇ ಏರ್ ಟ್ರಾಪಿಕ್ ಕಂಟ್ರೋಲರ್‌ಗಳು ತುರ್ತು ಸೂಚನೆ ನೀಡಿದ್ದು, ‘ಏರ್ ಫ್ಲೈಟ್ 563’ಅನ್ನು ತಕ್ಷಣ ನಿಲ್ಲಿಸಲಾಗಿದೆ.
🚨 “STOP STOP STOP!” LAX ATC urgently called out to a Key Lime Air jet as a Delta jet took off from runway 24L. Was this a runway incursion? All of it captured live during Friday’s Airline Videos Live broadcast. pic.twitter.com/5vwQfVzggQ
— AIRLINE VIDEOS (@airlinevideos) December 28, 2024
ಘಟನೆಯ ವಿಡಿಯೋ ವೈರಲ್ ಆಗಿದೆ. ಡೆಲ್ಟಾ ವಿಮಾನವು ಆಕಾಶಕ್ಕೆ ಹಾರುವ ಕೆಲವೇ ಸೆಕೆಂಡುಗಳ ಮೊದಲು ಖಾಸಗಿ ಜೆಟ್ ಹಠಾತ್ತನೆ ರನ್‌ವೇಗೆ ಬರುತ್ತಿರುವುದು ಸೆರೆಯಾಗಿದೆ. ವಿಮಾನಯಾನದ ಅಧಿಕಾರಿಯೊಬ್ಬರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, “ನನ್ನ ಸುದೀರ್ಘ ವರ್ಷಗಳ ಕೆಲಸದಲ್ಲಿ, ವಿಮಾನಗಳನ್ನು ವೀಕ್ಷಿಸುವಾಗ ಏರ್ ಟ್ರಾಫಿಕ್ ಕಂಟ್ರೋಲರ್‌ಗಳು ‘ಸ್ಟಾಪ್, ಸ್ಟಾಪ್, ಸ್ಟಾಪ್’ ಎಂದು ಕೂಗುವುದನ್ನು ಈವರೆಗೆ ನಾನು ಕೇಳಿರಲಿಲ್ಲ. ಇದೇ ಮೊದಲು ಇಂತಹ ಘಟನೆ ನಡೆದಿದೆ” ಎಂದು ಹೇಳಿದ್ದಾರೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದೆ.