ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬೀದಿಬದಿ ಮಳಿಗೆಗಳನ್ನು ತೆರವುಗೊಳಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಬೀದಿಬದಿ ವ್ಯಾಪಾರಿಗಳ ಹೋರಾಟ ಸಮಿತಿಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ತಹಶೀಲ್ದಾರ್ ಕಚೇರಿ ಎದುರು ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಪ್ರತಿಭಟನಾಕಾರರು, “ಸಣ್ಣಪುಟ್ಟ ವ್ಯಾಪಾರಿಗಳನ್ನು ಮಾತ್ರ ಒಕ್ಕಲೆಬ್ಬಿಸಿರುವ ಅಧಿಕಾರಿ ವರ್ಗ ಶ್ರೀಮಂತರ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸದೆ ಮೌನವಾಗಿದೆ. ಎಲ್ಲ ಅಕ್ರಮ ಮಳಿಗೆ ಮತ್ತು ಕಟ್ಟಡಗಳನ್ನು ತೆರವುಗೊಳಿಸಬೇಕು. ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ವೇತನ ನಿಗದಿಗೆ ಆಗ್ರಹ; ಜ.7ರಿಂದ ಅನಿರ್ದಿಷ್ಟಾವಧಿ ಧರಣಿ
“ಇತ್ತೀಚೆಗೆ ಹಮ್ಮಿಕೊಂಡಿದ್ದ ಹೋರಾಟದ ಸಂದರ್ಭದಲ್ಲಿ ತಹಶೀಲ್ದಾರರು ಮಂಗಳವಾರ ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ ಆ ಬಗ್ಗೆ ಈವರೆಗೆ ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ” ಎಂದು ಹೋರಾಟಗಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ನಾಗರಾಜ್ ಪೂಜಾರ್ ಬಸವರಾಜ್ ಬಾದರ್ಲಿ, ಡಾಕ್ಟರ್ ವಶೀಮ್, ರಹೀಂ ಮೆಕಾನಿಕ್, ಚಿಟ್ಟಿಬಾಬು, ಮಂಜುನಾಥ ಗಾಂಧಿ ನಗರ, ಅಶೋಕ ನಂಜಲದಿನ್ನಿ ಸೇರಿದಂತೆ ಇತರರು ಇದ್ದರು.
