ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ವೇತನ ನಿಗದಿ ಪಡಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜನವರಿ 7ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದೇವೆ ಎಂದು ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ ಯಾದಗಿರಿ ಹೇಳಿದರು.
ರಾಯಚೂರು ನಗರದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಕಳೆದೆ ಫೆಬ್ರವರಿ 13 ಮತ್ತು 14ರಂದು ಪ್ರತಿಭಟನೆ ನಡೆಸಿದಾಗ ಧರಣಿ ಸ್ಥಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಶೀಘ್ರದಲ್ಲಿ ಸಭೆ ಕರೆದು ನಿರ್ಧರಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಒಂದು ವರ್ಷ ಕಳೆದಿದ್ದು, ಹಲವು ಸುತ್ತಿನ ಸಭೆಗಳಾದರೂ ನಿರ್ದಿಷ್ಟ ವೇತನ ನೀಡುವ ಭರವಸೆಗೆ ಖಚಿತವಾಗಿ ಉತ್ತರ ನೀಡಿಲ್ಲ. ಹಾಗಾಗಿ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಲಿದ್ದಾರೆ” ಎಂದು ತಿಳಿಸಿದರು.
“ಎಲ್ಲ ಶಾಸಕರು, ಸಚಿವರಿಗೆ ಪ್ರತ್ಯೇಕ ಮನವಿ ನೀಡಿ ಅಧಿವೇಶನದಲ್ಲಿ ಚರ್ಚಿಸುವಂತೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ ನಿಗದಿಪಡಿಸುತ್ತಿಲ್ಲ. ಬದಲಾಗಿ ಮೊಬೈಲ್‌ಗಳನ್ನು ಆಶಾ ಕಾರ್ಯಕರ್ತೆಯರೇ ಖರೀದಿ ಮಾಡಿ ಆರೋಗ್ಯ ಸೇವೆಗಳನ್ನು ಒದಗಿಸಬೇಕೆಂದು ಹೇಳುತ್ತಿದೆ. ಸರ್ಕಾರ ದಿವಾಳಿಯಾಗಿದೆಯೋ, ಏನೋ ಗೊತ್ತಿಲ್ಲ. ಹತ್ತಾರು ಕೆಲಸಗಳನ್ನು ಆಶಾ ಕಾರ್ಯಕರ್ತೆಯರಿಂದಲೇ ಪಡೆಯುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಟ ವೇತನವನ್ನೂ ನೀಡುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸೇನೆ ಸಂಘಟನೆಗೆ ಜಿಲ್ಲಾಧ್ಯಕ್ಷರ ನೇಮಕ
“ಪಶ್ಚಿಮ ಬಂಗಾಳ ಮಾದರಿಯಲ್ಲಿ ₹5 ಲಕ್ಷ ಸೇವಾ ನಿವೃತ್ತಿ ಯೋಜನೆ ಜಾರಿಗೊಳಿಸಬೇಕಿದೆ. ರಾಜ್ಯದಲ್ಲಿ ಸೇವಾ ನಿವೃತ್ತಿಗೊಂಡ ಆಶಾ ಕಾರ್ಯಕರ್ತೆಯರಿಗೆ ₹20,000 ಮಾತ್ರ ನೀಡಲಾಗುತ್ತಿದೆ. ಉದ್ಯೋಗ ಭದ್ರತೆಯಿಲ್ಲದೇ ಅತಿಹೆಚ್ಚು ಕೆಲಸ ಮಾಡಿ ಕಡಿಮೆ ವೇತನ ಪಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಆಶಾ ಕಾರ್ಯಕರ್ತೆಯರು ಬೆಂಗಳೂರಿಗೆ ಆಗಮಿಸಲಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ಎನ್ ಎಸ್ ವೀರೇಶ, ಮಹೇಶ ಚಿಕಲಪರ್ವಿ, ಈರಮ್ಮ, ರಾಧಾ, ಶ್ರೀದೇವಿ, ಮಲ್ಲಮ್ಮ ಇದ್ದರು.
