ಡಾ. ಬಿ ಆರ್ ಅಂಬೇಡ್ಕರ್ ವಿಚಾರಗಳು ಎಲ್ಲರ ಬದುಕಿಗೆ ದಾರಿದೀಪವಾಗಿವೆ ಎಂದು ಮುಖ್ಯಶಿಕ್ಷಕ ದಾವಲ್ ಸಾಬ್ ಎ ನೀಲಗುಂದ ಅಭಿಮತ ವ್ಯಕ್ತಪಡಿಸಿದರು.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಅಡವಿಮಲ್ಲನಕೆರೆ ಎಂಪಿಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಸಿಂಚನ ಪ್ರಕಾಶನದಿಂದ ಆಯೋಜಿಸಿದ್ದ ಸಂವಿಧಾನ 75 ಓದು ಜನಮೇಜಯ ಅಭಿಯಾನದಲ್ಲಿ ವಾಣಿ ಪೆರಿಯೋಡಿಯವರ ʼಮಕ್ಕಳಿಗಾಗಿ ಸಂವಿಧಾನ ಪುಸ್ತಕ ವಿತರಣೆʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಅಂಬೇಡ್ಕರ್ ಪುಸ್ತಕ ಪ್ರೇಮಿಯಾಗಿದ್ದರು. ಅವರಲ್ಲಿ ಇದ್ದಂತಹ ಓದಿನ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಪತ್ರಕರ್ತ ವೀರೇಶ್ ಕಲ್ಮಠ ಮಕ್ಕಳಿಗಾಗಿ ಸಂವಿಧಾನ ಪುಸ್ತಕಗಳನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, “ವಿದ್ಯಾರ್ಥಿಗಳು ಸಂವಿಧಾನದ ಆಶಯಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂಬೇಡ್ಕರ್ ಅವರು ಯಾವುದೇ ಒಂದು ಮತ-ಧರ್ಮಗಳಿಗಾಗಿ ಸಂವಿಧಾನವನ್ನು ರಚಿಸಲಿಲ್ಲ. ಎಲ್ಲ ಜಾತಿ, ಧರ್ಮಗಳನ್ನೊಳಗೊಂಡ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಹಕ್ಕು, ನ್ಯಾಯ, ಸಮಾನತೆ ಮತ್ತು ಅವಕಾಶಗಳನ್ನು ನೀಡುವಂತಹ ಮಹಾನ್ ಗ್ರಂಥವಾಗಿದೆ. ದೇವಸ್ಥಾನಗಳು ನಮ್ಮಲ್ಲಿ ಮೌಢ್ಯ ಬಿತ್ತುತ್ತಿವೆ. ಅಸಮಾನತೆಯನ್ನು ಹುಟ್ಟುಹಾಕುತ್ತಿವೆ. ಆದರೆ, ಸಂವಿಧಾನ ಎಲ್ಲ ಸಮುದಾಯಗಳಿಗೂ ಸಮಾನ ಹಕ್ಕುಗಳನ್ನು ಕೊಟ್ಟಿದೆ” ಎಂದರು.
ಪತ್ರಕರ್ತ ಎಂ ದಯಾನಂದ ಮಾತನಾಡಿ, “ಡಾ. ಅಂಬೇಡ್ಕರ್ ಅವರು ‘ಮಹಿಳೆಯರು ದೇವಸ್ಥಾನಗಳ ಮುಂದೆ ಸಾಲುಗಟ್ಟಿ ನಿಲ್ಲುವದಕ್ಕಿಂತ ಗ್ರಂಥಾಲಯಗಳ ಮುಂದೆ ಸಾಲು ನಿಲ್ಲಬೇಕು. ಯಾಕೆಂದರೆ, ಮೂಢನಂಬಿಕೆಗಳಿಗೆ ಮಹಿಳೆಯರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಆದ್ದರಿಂದ, ಅವರು ಶಿಕ್ಷಣವುಳ್ಳವರಾಗಬೇಕುʼ ಎಂದು ಅಭಿಪ್ರಾಯಪಟ್ಟಿದ್ದರು. ಹಾಗಾಗಿ ಕೇವಲ ಮಹಿಳೆಯರಲ್ಲದೆ ಪ್ರಸ್ತುತದಲ್ಲಿ ಪ್ರತಿಯೊಬ್ಬರೂ ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಂಡು ಉನ್ನತ ಸ್ಥಾನಕ್ಕೆ ಹೋಗುವ ಕನಸು ಕಾಣಬೇಕು” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿದ್ಯುತ್ ವ್ಯವಸ್ಥೆಯಿಲ್ಲದೆ ಕತ್ತಲಾದ ಪ್ರೌಢಶಾಲೆ; ಮಕ್ಕಳು ಡಿಜಿಟಲ್ ತರಗತಿಗಳಿಂದ ವಂಚಿತ
ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ಸುರೇಶ ಅಂಗಡಿ ಮಾತನಾಡಿ, “ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ತಾಲೂಕಿನ ಶಾಲೆಗಳಿಗೆ ಅಂಬೇಡ್ಕರ್ ವಿಚಾರಧಾರೆಗಳನ್ನು ತಲುಪಿಸುವ ಕೆಲಸ ನಿರಂತರವಾಗಿ ಮಾಡಲಾಗುವುದು” ಎಂದರು. ಪ್ರಕಾಶನದ ವತಿಯಿಂದ ಪ್ರೌಢಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಮಲ್ಟಿಒಡೆಯರ್, ಎಸ್‌ಡಿಎಂಸಿ ಅಧ್ಯಕ್ಷ ಗಂಗಪ್ಪ ಹುರುಳಿಹಾಳ, ಶಾಲಾ ಶಿಕ್ಷಕರಾದ ಮುಮ್ಹಾಜ್ ಬೇಗಂ, ಬಿ ಕೆ ಗೋಣಿಬಸಪ್ಪ, ತೇಜಸ್ವಿನಿ ಎಚ್ ಸೇರಿದಂತೆ ಇತರರು ಇದ್ದರು.