ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬುದ್ದಿನ್ನಿ ಗ್ರಾಮದ ಸರ್ಕಾರಿ ಫ್ರೌಢಶಾಲೆಗೆ ಸುಮಾರು ಮೂರು ವರ್ಷಗಳಿಂದ ವಿದ್ಯುತ್ ವ್ಯವಸ್ಥೆಯಿಲ್ಲ. ಇದರಿಂದ ಕೊಠಡಿಗಳು ಕತ್ತಲೆ ಕೋಣೆಗಳಾಗಿ ಮಾರ್ಪಟ್ಟಿದ್ದು, ಮಕ್ಕಳು ಡಿಜಿಟಲ್ ತರಗತಿಗಳಿಂದ ವಂಚಿತರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುದ್ದಿನ್ನಿ ಗ್ರಾಮದಿಂದ 1ಕಿಲೋ ಮೀಟರ್ ದೂರದಲ್ಲಿ ಶಾಲೆಯಿದೆ. ಶಾಲೆಯಲ್ಲಿ 100ಕ್ಕಿಂತ ಹೆಚ್ಚು ಮಂದಿ ಮಕ್ಕಳಿದ್ದಾರೆ. ನೂರಾರು ಮಂದಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ವಿದ್ಯುತ್ ಸಂಪರ್ಕದ ಅವಶ್ಯಕತೆಯಿದೆ.
ಬಿಸಿಯೂಟ ತಯಾರಿಸಲು ಮತ್ತು ಕುಡಿಯುವ ನೀರಿಗೆ ಹಾಗೂ ಡಿಜಿಟಲ್ ತರಗತಿಗಳಿಗೆ ವಿದ್ಯುತ್ ಅತ್ಯವಶ್ಯಕ ಮತ್ತು ವಿದ್ಯಾರ್ಥಿಗಳಿಗೆ ಶೌಚಾಲಯ ಬಳಕೆ ಮಾಡಲು ಹಾಗೂ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲು ವಿದ್ಯುತ್ ಸಂಪರ್ಕ ಬೇಕಾಗಿದೆ. ಎಲ್ಲ ಸರ್ಕಾರಿ ಶಾಲೆಗೆ ಡಿಜಿಟಲ್ ಕ್ಲಾಸ್ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಉಚಿತ ವಿದ್ಯುತ್ ಆದೇಶ ಹೊರಡಿಸಿದ್ದಾರೆ.

“ಡಿಜಿಟಲ್ ಕ್ಲಾಸ್ ಇದ್ದರೆ ನಮ್ಮ ವಿದ್ಯಾರ್ಥಿಗಳು ತಲ್ಲೀನಗೊಳಿಸುವ ವಾತಾವರಣದಲ್ಲಿ ಕಲಿಯುತ್ತಾರೆ. ಇದು ಅವರ ಆಸಕ್ತಿ ಮತ್ತು ಜ್ಞಾನದ ಧಾರಣೆಯನ್ನು ಹೆಚ್ಚಿಸುತ್ತದೆ” ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಈ ಬಗ್ಗೆ ಗ್ರಾಮದ ನಿವಾಸಿ ನಾಗರೆಡ್ಡಪ್ಪ ದೇವರಮನಿ ಮಾತನಾಡಿ, “ಶಾಲೆ ಪ್ರಾರಂಭಗೊಂಡು ಮೂರು ವರ್ಷಗಳು ಕಳೆದಿವೆ. ಆದರೆ ಈವರೆಗೂ ವಿದ್ಯುತ್ ಇಲ್ಲದೆ, ಮಕ್ಕಳು ಕತ್ತಲೆಯಲ್ಲೇ ಪಾಠ ಕೇಳುವಂತಾಗಿದೆ. ಎಲ್ಲ ಶಾಲೆಗೆ ಡಿಜಿಟಲ್ ಕ್ಲಾಸ್ ವ್ಯವಸ್ಥೆಯಾಗಬೇಕೆಂದು ಹೇಳುತ್ತಾರೆ. ಆದರೆ ಇಲ್ಲಿ ವಿದ್ಯುತ್ ಇಲ್ಲದೆ ಮಕ್ಕಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ” ಎಂದರು.
“₹30 ಲಕ್ಷದ ಡಿಜಿಟಲ್ ಕ್ಲಾಸ್ ಸಾಮಗ್ರಿಗಳು ಶಾಲೆಗೆ ತಲುಪಿವೆ. ಆದರೆ ವಿದ್ಯುತ್ ಇಲ್ಲದಿರಿವುದರಿಂದ ಉಪಕರಣಗಳನ್ನು ಸ್ಟೋರ್ ರೂಂನಲ್ಲಿ ಸಂಗ್ರಹಿಸಿಡಲಾಗಿದೆ. ಕೆಲವು ದಿನದ ಹಿಂದೆ ಊರಿನ ಜನ ಸೇರಿ ಕೆಲವು ಕಟ್ಟಿಗೆ ಕಂಬಗಳನ್ನು ಹಾಕಿ ತಾತ್ಕಾಲಿಕವಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಗಾಳಿ ಮಳೆಗೆ ಕಂಬಗಳು ಬಿದ್ದ ಕಾರಣ ಮತ್ತೆ ಯಥಾಸ್ಥಿತಿಯಂತೆ ಕತ್ತಲಾಗಿದೆ. ಹಲವು ಬಾರಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಸರಿಪಡಿಸೋಣವೆಂಬ ಆಶ್ವಾಸನೆ ನೀಡುತ್ತಾರೆಯೇ ಹೊರತು ಕಾರ್ಯರೂಪಕ್ಕೆ ತಂದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀದಿಬದಿ ಮಳಿಗೆ ತೆರವು; ಪರ್ಯಾಯ ವ್ಯವಸ್ಥೆಗೆ ವ್ಯಾಪಾರಿಗಳ ಉಪವಾಸ ಸತ್ಯಾಗ್ರಹ
“ಸುತ್ತಮುತ್ತಲಿನ ಗ್ರಾಮಗಳಾದ ಹೂವಿನಬಾವಿ, ಮುದಬಾಳ, ಕಾಟಗಲ್ ಸಾನಬಾಳ, ಬೆಂಚಮರಡಿ , ಇಲಾಲಪುರ, ಹರ್ವಾಪುರ ಮತ್ತು ತುಪ್ಪದೂರು ಗ್ರಾಮಗಳಿಂದ ಮಕ್ಕಳು ಶಾಲೆಗೆ ಬರುತ್ತಾರೆ. ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಆದಷ್ಟು ಬೇಗ ವಿದ್ಯುತ್ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಗ್ರಾಮಕ್ಕೆ ಫ್ರೌಢಶಾಲೆ ಮಂಜೂರಾಗಬೇಕೆಂದು ಮತದಾನ ಬಹಿಷ್ಕಾರ ಮಾಡಲಾಗಿತ್ತು. ನಂತರ ಪ್ರೌಢಶಾಲೆ ಮುಂಜೂರಾಗಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಆದರೆ ವಿದ್ಯುತ್ ಇಲ್ಲದೆ ಕತ್ತಲೆ ಮನೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್