ಬಾಬಾ ಸಾಹೇಬರ ಹೆಸರಿನ ಮೇಲೆ ಕೆಲವರು ಸಾರ್ವಜನಿಕವಾಗಿ ದೌರ್ಜನ್ಯ ಮಾಡುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಅಂಬೇಡ್ಕರ್ ವಿರುದ್ಧ ಸಾರ್ವಜನಿಕವಾಗಿ ಅವಹೇಳನ ಮಾಡಿರುವುದು ಖಂಡನೀಯ. ದಲಿತ ಸಮುದಾಯದ ಮುಖಂಡರ ಮೇಲೆ ಇಂತಹ ಘಟನೆಗಳು ಸಂಭವಿಸಿದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಎಂದು ಪರಶುರಾಮ ದಿಂಡಿವಾರ್ ಹೇಳಿದರು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.
“ಪಟ್ಟಣದಲ್ಲಿರುವ ಬಸವ ಭವನಕ್ಕೆ(ಕಲ್ಯಾಣ ಮಂಟಪ) ಬುದ್ಧ, ಬಸವ, ಅಂಬೇಡ್ಕರ್ ಅವರ ಹೆಸರಿಡುವಂತೆ ಕಳೆದ ಸಭೆಯಲ್ಲಿ ಗಮನಕ್ಕೆ ತರಲಾಗಿತ್ತಾದರೂ ಯಾವುದೇ ಕ್ರಮ ಆಗಿಲ್ಲ. ಕೂಡಲೇ ಬಸವ ಭವನಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಅವರ ಹೆಸರಿಡುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಸಭೆಯಲ್ಲಿ ಆಗ್ರಹಿಸಿದರು.
“ಗ್ರಾಮೀಣ ಭಾಗದಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಅನುದಾನ ದುರ್ಬಳಕೆಯಾಗುತ್ತಿದೆ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನ ಹರಿಸಬೇಕು” ಎಂದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ಮಾತನಾಡಿ, “ಹೆಬ್ಬಾಳ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು. ಜಗತ್ತಿಗೆ ಸಮಾನತೆ ಸಂದೇಶ ಸಾರಿದ ಬಸವೇಶ್ವರರ ಜನ್ಮಸ್ಥಳದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ವಿಪರ್ಯಾಸ. ತಾಲೂಕಿನ ಎಲ್ಲ ಹಾಸ್ಟೆಲ್‌ಗಳಲ್ಲಿ ರಾತ್ರಿ ಹೊತ್ತಲ್ಲಿ ವಾರ್ಡನ್‌ಗಳು ವಾಸ್ತವ್ಯ ಹೂಡುವಂತೆ ವ್ಯವಸ್ಥೆ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಮಾತನಾಡಿ, “ಜಾತಿನಿಂದನೆ ಪ್ರಕರಣಗಳು ತಾಲೂಕಿನಲ್ಲಿ ಹೆಚ್ಚಾಗುತ್ತಿವೆ. ಜಾತಿನಿಂದನೆ ಪ್ರಕರಣಗಳು ದುರುಪಯೋಗವಾಗುತ್ತಿವೆ. ದಲಿತ ಸಮುದಾಯದ ಮುಖಂಡರು ಇದರ ಬಗ್ಗೆ ಗಮನ ಹರಿಸಬೇಕು” ಎಂದು ಹೇಳಿದರು.
“ಹಾಸ್ಟೆಲ್ ಮಕ್ಕಳನ್ನು ಹೋರಾಟಕ್ಕೆ ಬಳಸಿಕೊಳ್ಳದಂತೆ ಪ್ರತಿ ಹಾಸ್ಟೆಲ್‌ಗೆ ಲಿಖಿತ ರೂಪದಲ್ಲಿ ತಿಳಿಸಲಾಗುವುದು” ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜು ಹಿರೇಮನಿ ಸಭೆ ಗಮನಕ್ಕೆ ತಂದರು.
ಈ ಸುದ್ದಿ ಓದಿದ್ದೀರಾ? ಗೃಹಸಚಿವ ಅಮಿತ್ ಶಾ ವಿರುದ್ಧ ಜ.9ರಂದು ʼವಿಜಯನಗರ ಬಂದ್’ಗೆ ಕರೆ
ಐಪಿ ಗುರುಶಾಂತ ದಾಸ್ಯಾಳ, ತಾಲೂಕು ಪಂಚಾಯತಿ ಪ್ರತಿನಿಧಿ ರಾಜೇಶ್ವರಿ ಆಸಂಗಿ, ಉಪ ತಹಶೀಲ್ದಾರ್ ಬಾಬಾ ಜಾಗಿರದಾರ, ಮುಖಂಡರಾದ ಅರವಿಂದ ಸಾಲವಾಡಗಿ, ಗುರು ಗುಡಿಮನಿ, ಮಹಾಂತೇಶ ಸಾಸಬಾಳ, ತಮ್ಮಣ್ಣ ಕಾನಗಡ್ಡಿ, ವೈಎಸ್ ಮ್ಯಾಗೇರಿ, ಮುತ್ತು ಬಾಗೇವಾಡಿ, ರಾಜು ದಿಂಡಿವಾರ, ಮಹಾಂತೇಶ ಚಕ್ರವರ್ತಿ, ಪ್ರಕಾಶ ಗುಡಿಮನಿ, ಗಂಗಾಧರ್ ಆರ್ಯ ಇದ್ದರು.